ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಿಗೆ ಮಹಾಪೂರ ಬಂದು ಗಡಿ ಭಾಗದ ಜನರಬದುಕು, ಧೈರ್ಯ, ಸ್ಥೈರ್ಯದ ಮೇಲೆ ಭಾರಿ ಹೊಡೆತ ನೀಡಿದೆ. ಆದರೂ ವಿಘ್ನ ನಿವಾರಕ, ವಕ್ರತುಂಡ, ಬೆನಕನ ಆರಾಧನೆಯಲ್ಲಿ ಯಾವುದೇ ಸಡಗರ ಕಡಿಮೆಯಾಗಿಲ್ಲ.
ಪ್ರವಾಹ ಸಂದರ್ಭದಲ್ಲಿ ಗಡಿ ಭಾಗದ ನೂರಾರು ಗ್ರಾಮಗಳು ಜಲಾವೃತಗೊಂಡಿದ್ದವು. ಜೊತೆಗೆ ಗ್ರಾಮದಲ್ಲಿನ ಮನೆಗಳು ಧರೆಗೆ ಉರುಳಿವೆ. ಇನ್ನೂ ಉರುಳುತ್ತಾ ಇದ್ದರೂ ಸಂತ್ರಸ್ತರ ಮನೆಗಳಲ್ಲಿ ಗಣೇಶ ರಾರಾಜಿಸುತ್ತಿದ್ದಾನೆ.
ಗಣೇಶ ಚೌತಿ ದಿನದಂದು ಜಿಟಿಜಿಟಿ ಮಳೆ ಆರಂಭವಾಗಿತ್ತು. ಸಂಪೂರ್ಣ ನೆಂದು ನಿಂತ ಅನೇಕಜ ಮನೆಗಳು ಇನ್ನೂ ಕುಸಿಯುತ್ತಿವೆ. ಮುರುಕು ಮನೆಗಳ ಅಲ್ಪಸ್ವಲ್ಪ ಜಾಗದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಕಲ್ಲೋಳ, ಯಡೂರ, ಯಡೂರವಾಡಿ, ಅಂಕಲಿ, ಚೆಂದೂರ, ಇಂಗಳಿ, ಮಾಂಜರಿ, ದೂಧಗಂಗಾ ನದಿ ತೀರದ ಸದಲಗಾ, ಮಲಿಕವಾಡ, ಕಾರದಗಾ, ಭೋಜ, ವೇಧಗಂಗಾ ನದಿ ತೀರದ ಜತ್ರಾಟ, ಭೀವಸಿ, ಸಿದ್ನಾಳ, ಹುನ್ನರಗಿ, ಕೊಗನ್ನೋಳ್ಳಿ ಮುಂತಾದ ಗ್ರಾಮಗಳ ಸಂತ್ರಸ್ತರು ರಾಡಿ ತುಂಬಿದ ಮನೆಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ಲೈಟ್‌ಗಳಿಂದ ಸಿಂಗರಿಸಿ ಮನೆ ಮುಂದೆ ರಂಗೋಲಿ ಹಾಕಿ ಬೆನಕನನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ.
Advertisement
ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಜನರಿಗೆ ಗಣೇಶ ಚತುರ್ಥಿ ಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಹಿಂದುಗಳಿಗೆ ಬೆನಕನ ಹಬ್ಬ ಬಲು ಜೋರು. ಸಂತ್ರಸ್ತರಾದರೂ ಗಣೇಶನ ಆರಾಧನೆಯಲ್ಲಿ ಹಿಂದೆ ಬಿದ್ದಿಲ್ಲ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಆಚರಣೆಗೆ ಕುಂದು ಬಾರದಂತೆ ನೋಡಿಕೊಂಡಿದ್ದಾರೆ.
Related Articles
Advertisement
ಸಂಪೂರ್ಣ ಮನೆ ಕಳೆದುಕೊಂಡವರು ತಾತ್ಕಾಲಿಕ ಶೆಡ್ ನಿರ್ಮಿಸಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೇರವೇರಿಸಿ ನದಿ ತೀರದ ಗ್ರಾಮಗಳಲ್ಲಿ ಉಂಟಾಗಿರುವ ವಿಘ್ನವನ್ನು ನಿವಾರಿಸಿ ಹೊಸ ಬದುಕು ಕಟ್ಟಿಕೊಳ್ಳಲು ಮಾನಸಿಕ, ಆರ್ಥಿಕ ಶಕ್ತಿ ನೀಡಬೇಕೆಂದು ಗಣೇಶನನ್ನು ಬೇಡಿಕೊಳ್ಳುತ್ತಿರುವುದು ವಿಶೇಷವಾಗಿದೆ.
ನಗರದಲ್ಲಿಯೂ ಸಂಭ್ರಮ: ಚಿಕ್ಕೋಡಿ ನಗರದಲ್ಲಿ ಗಣೇಶೋತ್ಸವ ಪ್ರತಿಷ್ಠಾಪನೆ ಸೋಮವಾರ ಅದ್ದೂರಿಯಾಗಿ ನಡೆಯಿತು. ನಗರದಲ್ಲಿ ಸುಮಾರು 50ಕ್ಕಿಂತ ಹೆಚ್ಚಿನ ಸಾರ್ವಜನಿಕ ಮಂಡಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಸಾರ್ವಜನಿಕರು ತಮ್ಮ ತಮ್ಮ ಮನೆಗೆ ಗಣಪನನ್ನು ತಂದು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಸಂಜೆಯಾಗುತ್ತಿದ್ದಂತೆಯೇ ಸಾರ್ವಜನಿಕ ಮಂಡಳಗಳ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಡಿಜೆ ಹಾಡಿಗೆ ಜನರು ಹೆಜ್ಜೆ ಹಾಕಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿತ್ತು.
ಅಪ್ಪಟ್ಟ ದೇಶಿ ಮಣ್ಣಿನಿಂದ ನಿರ್ಮಿಸಿದ ಗಣೇಶ ಮೂರ್ತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಯಕ್ಸಂಬಾದಲ್ಲಿ ಇರುವ ಸಚಿವೆ ಶಶಿಕಲಾ ಜೊಲ್ಲೆ ಗಣೇಶ ಮೂರ್ತಿಗೆ ಆರತಿ ಬೆಳಗಿ ಬೆನಕನನ್ನು ಸ್ವಾಗತಿಸಿಕೊಂಡರು. ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪುತ್ರರಾದ ಬಸವಪ್ರಸಾದ, ಜ್ಯೋತಿಪ್ರಸಾದ ಮತ್ತು ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
•ಮಹಾದೇವ ಪೂಜೇರಿ