ಹುಬ್ಬಳ್ಳಿ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ವಾಣಿಜ್ಯ ನಗರಿ ಸಜ್ಜುಗೊಂಡಿದೆ. ಪ್ರವಾಹ, ಬೆಲೆ ಏರಿಕೆ ಹಬ್ಬದ ಉತ್ಸಾಹವನ್ನು ಕೊಂಚ ಕುಂದುವಂತೆ ಮಾಡಿದೆಯಾದರೂ ಜಿಟಿಜಿಟಿ ಮಳೆ ನಡುವೆಯೂ ಗಣೇಶನ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
ಜನ ವಿರಳ: ಪ್ರತಿ ವರ್ಷ ಗಣೇಶ ಚತುರ್ಥಿಯ ಒಂದೆರಡು ದಿನ ಹಾಗೂ ಕೆಲ ಗಣೇಶ ಮೂರ್ತಿಗಳನ್ನು 15 ದಿನಕ್ಕೂ ಮೊದಲೇ ಬುಕ್ಕಿಂಗ್ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಗಣೇಶ ಮೂರ್ತಿಗಳ ಮುಂಗಡ ಕಾಯ್ದಿರಿಸುವಿಕೆ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗುತ್ತಿದೆ.
ಬಮ್ಮಾಪುರ ಓಣಿ, ಚಿತ್ರಗಾರ ಓಣಿ, ಹೊಸೂರ, ನೇಕಾರ ನಗರ ಅಷ್ಟೇ ಅಲ್ಲದೇ ತಡಸ, ದುಂಡಸಿ, ಬೆಂಡಿಗೇರಿ ಸುತ್ತಮುತ್ತಲಿನ ಗ್ರಾಮದ ಕಲಾಕಾರರು ಪ್ರತಿವರ್ಷ ಸಾವಿರಾರು ಸಣ್ಣ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿಕೊಂಡು ಬಂದಿರುತ್ತಾರೆ. ಆದರೆ ಕಳೆದ ವರ್ಷ ಹಾಗೂ ಈ ವರ್ಷ ನೋಡಿದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳ ಖರೀದಿಗೆ ಆಗಮಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಬಾರಿ ಕೊನೆಯ ಕ್ಷಣದಲ್ಲಿ ಆಗಮಿಸಿ ನೇರವಾಗಿ ತೆಗೆದುಕೊಂಡು ಹೋಗುತ್ತಾರೆ ಎಂಬುದು ಗಣೇಶ ಮೂರ್ತಿ ಮಾರಾಟಗಾರರ ಅನಿಸಿಕೆ.
ಈ ಬಾರಿ ಸಣ್ಣ ಗಣೇಶ ಮೂರ್ತಿಗೆ 400 ರಿಂದ 2 ಸಾವಿರದವರೆಗೂ ದರ ನಿಗದಿ ಪಡಿಸಲಾಗಿದೆ. 2.5, 3 ಅಡಿ ಗಣೇಶನ ಮೂರ್ತಿಗಳಿಗೆ 6 ರಿಂದ 7 ಸಾವಿರದವರೆಗೆ ದರ ನಿಗದಿ ಪಡಿಸಲಾಗಿದೆ.
Advertisement
ನಗರದ ಪ್ರಮುಖ ರಸ್ತೆಗಳಾದ ದುರ್ಗದ ಬಯಲು, ದಾಜೀಬಾನ ಪೇಟೆ, ಮರಾಠಾ ಗಲ್ಲಿ, ಸ್ಟೇಶನ್ ರಸ್ತೆ, ಸರಾಫ್ ಗಟ್ಟಿ, ಹಿರೇಪೇಟೆ, ಶಿಂಪಿಗಲ್ಲಿ, ಎಂ.ಜಿ.ಮಾರ್ಕೆಟ್, ಹಳೇಹುಬ್ಬಳ್ಳಿ ದುರ್ಗದ ಬಯಲು, ಹಿರೇಪೇಟೆ, ಸಿದ್ಧಾರೂಢಮಠ, ಇಂಡಿ ಪಂಪ್, ಅಯೋಧ್ಯಾನಗರ, ಗೋಕುಲ ರಸ್ತೆ, ಗೋಕುಲ ಗ್ರಾಮ, ಗೋಪನಕೊಪ್ಪ, ದೇವಾಂಗಪೇಟೆ ಸೇರಿದಂತೆ ನಗರದೆಲ್ಲೆಡೆ ಗಣೇಶ ಪ್ರತಿಷ್ಠಾಪನೆಗೆ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ.
Related Articles
Advertisement
ಹಬ್ಬದ ಮುನ್ನಾ ದಿನ ಖರೀದಿ: ಗಣೇಶ ಚತುರ್ಥಿಯ ಮುನ್ನಾ ದಿನ ರವಿವಾರ ಖರೀದಿಗೆ ಮುಗಿ ಬಿದ್ದಿದ್ದ ಜನರು, ಪೂಜಾ ಕಾರ್ಯಗಳಿಗೆ ಬೇಕಾಗುವ ವಸ್ತುಗಳನ್ನು ಖರೀದಿಸಿದ್ದಾರೆ. ಐದು ತರಹದ ಹಣ್ಣುಗಳ ಸಣ್ಣಬುಟ್ಟಿಗೆ 100-150 ರೂ., ಬಾಳೆಹಣ್ಣು ಒಂದು ಡಜನ್‌ಗೆ 30-50 ರೂ.,ಗಳು ಹೂವು ಒಂದು ಮಾರು 20ರಿಂದ 50 ರೂ., ಬಾಳೆಕಂಬ ಒಂದಕ್ಕೆ 30-50 ರೂ.ಗಳು ಮಾರಾಟ ಮಾಡಲಾಗುತ್ತಿದೆ. ಜತೆಗೆ ಗಣೇಶನ ಅಲಂಕಾರಕ್ಕೆ ಬೇಕಾಗುವ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯ ಜನರು ಮಾರಾಟಕ್ಕಿಟ್ಟಿದ್ದು, ಜನರು ಖರೀದಿಗೆ ಮುಂದಾಗಿದ್ದಾರೆ.
ಪ್ರತಿ ವರ್ಷ ಗಣೇಶನ ಮೂರ್ತಿಗಳು ಹಬ್ಬದ ಆಗಮನಕ್ಕಿಂತಲೂ ಮುಂಚಿತವಾಗಿಯೇ ಬುಕ್ಕಿಂಗ್ ಮಾಡಿ ನಂತರ ಬಂದು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಮಾಡಿರುವ ಸುಮಾರು 500 ಕ್ಕೂ ಹೆಚ್ಚು ಗಣೇಶ ಮೂರ್ತಿಗಳಲ್ಲಿ 100ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಹಾಗೇ ಇವೆ. ಕೊನೆಯ ಕ್ಷಣದಲ್ಲಿ ಏನಾಗಲಿದೆ ನೋಡಬೇಕು. ಆದರೆ ಗಣೇಶ ಮೂರ್ತಿಗಳು ಉಳಿಯಲ್ಲ. ಈ ಬಾರಿ ಜಿಲ್ಲೆಗೆ ಗೋಕಾಕ ಹತ್ತಿರದ ಕೊಣ್ಣೂರಿನಿಂದ ಸುಮಾರು 1ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳು ನಗರಕ್ಕೆ ಆಗಮಿಸಿದ್ದು, ಇಲ್ಲಿ ಕಲಾವಿದರಿಗೆ ಹೊಡೆತ ಬಿದ್ದಂತಾಗಿದೆ. ಆದರೆ ನಾವು ಮಾಡಿರುವ ಗಣೇಶ ಮೂರ್ತಿಗಳು ಉಳಿಯುವುದಿಲ್ಲ. • ಸತೀಶ ಮುರಗೋಡ, ಗಣೇಶ ಮೂರ್ತಿ ಕಲಾಕಾರ
•ಬಸವರಾಜ ಹೂಗಾರ