ಉಡುಪಿ/ ಮಂಗಳೂರು/ಕಾಸರಗೋಡು: ನಾಡಿನಾದ್ಯಂತ ಬುಧವಾರ ನಡೆದ ಗಣೇಶ ಚತುರ್ಥಿಯಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ವಿವಿಧ ದೇವಸ್ಥಾನಗಳು, ಸಾರ್ವಜನಿಕ ಗಣೇಶೋತ್ಸವದ ಪೆಂಡಾಲಿಗೆ ತೆರಳಿ ಪ್ರಸಾದವನ್ನು ಸ್ವೀಕರಿಸಿದರು. ಗುರುವಾರವೂ ಸಾರ್ವಜನಿಕ ಗಣೇಶೋತ್ಸವ ಕೇಂದ್ರಗಳಿಗೆ ಭಕ್ತರು ಭೇಟಿ ನೀಡಿದರು.
ದೇವಸ್ಥಾನಗಳು, ಪೆಂಡಾಲುಗಳಲ್ಲಿ 108, ಸಹಸ್ರನಾಳಿಕೇರ ಗಣಹೋಮ, ಮೂಡುಗಣಪತಿ ಸೇವೆಗಳು ನಡೆದವು. ಗಣಪತಿ ದೇವಸ್ಥಾನಗಳಲ್ಲದೆ ಇತರ ದೇವಸ್ಥಾನಗಳಲ್ಲಿ, ವಿವಿಧ ಮಠಗಳಲ್ಲಿಯೂ ಸಂಪ್ರದಾಯದಂತೆ ಗಣಪತಿ ವಿಗ್ರಹವನ್ನು ಇರಿಸಿ ಪೂಜಿಸಲಾಯಿತು.
ಪ್ರಸಿದ್ಧ ಗಣಪತಿ ದೇವಸ್ಥಾನಗಳಾದ ದ.ಕ. ಜಿಲ್ಲೆಯ ಶರವು, ಸೌತಡ್ಕ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆ ವಿನಾಯಕ, ಉದ್ಯಾವರ, ಉಪ್ಪೂರು, ಪಡುಬಿದ್ರಿ ದೇವಸ್ಥಾನ, ಹಿರಿಯಡಕ ಪುತ್ತಿಗೆಯ ಸ್ತಂಭೋದ್ಭವ ಗಣಪತಿ ಸನ್ನಿಧಿಗಳಲ್ಲಿ ಜನಸಂದಣಿ ಇತ್ತು. ವಿವಿಧ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್ಪ, ಅಷ್ಟದ್ರವ್ಯ ಪಂಚಕಜ್ಜಾಯ, ಕಡಲೆ ಬೇಳೆ ಪಂಚಕಜ್ಜಾಯ, ಲಡ್ಡು, ಮೋದಕ, ಕೊಟ್ಟೆ ಕಡುಬು ದೇವರಿಗೆ ಸಮರ್ಪಿಸಿದ್ದು, ಬಳಿಕ ಭಕ್ತರು ಇವುಗಳನ್ನು ಸ್ವೀಕರಿಸಿದರು. ವಿವಿಧ ದೇವಸ್ಥಾನಗಳಲ್ಲಿ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗಣಹೋಮಗಳು, ಮುಡಿಅಕ್ಕಿ ಕಡುಬು, ಮೂಡುಗಣಪತಿ ಸೇವೆಗಳು, ರಾತ್ರಿ ಹೂವಿನ ಪೂಜೆ ನಡೆದವು.
ಸಣ್ಣ ಗಣಪತಿಯ ದೇವಸ್ಥಾನಗಳಲ್ಲಿಯೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಕಂಡುಬಂದರು. ಉಡುಪಿ ಜಿಲ್ಲೆಯಲ್ಲಿ 470, ದ.ಕ. ಜಿಲ್ಲೆಯಲ್ಲಿ 366 ಸಾರ್ವಜನಿಕ ಗಣೇಶೋತ್ಸವಗಳು ಸಂಪನ್ನಗೊಂಡಿದ್ದು, ಭಕ್ತರು ಭೇಟಿ ನೀಡಿದರು. ಕೆಲವೆಡೆ ಭೋಜನದ ಏರ್ಪಾಟು ಮಾಡಲಾಗಿತ್ತು.
ಮನೆಗಳಲ್ಲಿ ಗಣೇಶನ ವಿಗ್ರಹಗಳನ್ನು ಇರಿಸಿ ಪೂಜಿಸುವವರು ಬುಧವಾರವೇ ಜಲಸ್ತಂಭನ ಮಾಡಿದರು. ಪೆಂಡಾಲುಗಳಲ್ಲಿ ಕೆಲವರು ಬುಧವಾರವೇ ಜಲಸ್ತಂಭನ ಮಾಡಿದರೆ ಕೆಲವು ಕಡೆ ಕೆಲವು ದಿನಗಳ ವರೆಗೆ ಇರಿಸಿ ಗಣಪತಿ ವಿಗ್ರಹಗಳನ್ನು ಜಲಸ್ತಂಭನ ಮಾಡಲಿದ್ದಾರೆ. ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಕೆ. ರಘುಪತಿ ಭಟ್ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಧಾರ್ಮಿಕ ಸಹಿತ ವಿವಿಧ ಕ್ಷೇತ್ರದ ಮುಖಂಡರು ಗಣೇಶ ದೇವಸ್ಥಾನ ಮತ್ತು ವಿವಿಧ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲುಗಳಿಗೆ ಭೇಟಿ ನೀಡಿದರು.
ವಿವಿಧೆಡೆ ಮಳೆ:
ಬುಧವಾರ ಮತ್ತು ಗುರುವಾರ ಸಂಜೆ ಹಲವೆಡೆ ಮಳೆಯಾಗಿದ್ದು, ಗಣೇಶೋತ್ಸವದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯಲ್ಲಿ ಮೋಡ, ಬಿಸಿಲಿನ ವಾತಾವರಣದ ನಡುವೆ ಹನಿಹನಿ ಮಳೆ ಮುಂದುವರಿದಿದ್ದು, ಸೆ.6ರ ವರೆಗೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.