ಉಡುಪಿ/ಮಂಗಳೂರು: ಶುಕ್ರವಾರ ಎಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಆದರೆ ಕೊರೊನಾ ಕಾಟದಿಂದ ಹಿಂದಿನ ಸಡಗರವಿಲ್ಲ. ಜನರು ಜಾಗರೂಕತೆಯಿಂದ ಹಬ್ಬವನ್ನು ಆಚರಿಸುವಂತೆ ಸರಕಾರ ಮತ್ತು ಜಿಲ್ಲಾಡಳಿತಗಳು ಕಿವಿಮಾತು ಹೇಳಿವೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 33 ಉತ್ಸವಗಳು ಕಡಿಮೆ ಆಗಿ 420ಕ್ಕೆ ಇಳಿದಿತ್ತು. ಈ ಬಾರಿ ಒಟ್ಟು 374 ಉತ್ಸವಗಳಿಗೆ ಅನುಮತಿ ನೀಡಲಾಗಿದೆ. ಉಡುಪಿ ನಗರಸಭೆ ಯಲ್ಲಿ 16, ಕುಂದಾಪುರ ಪುರಸಭೆಯಲ್ಲಿ 11, ಕಾರ್ಕಳ ಪುರಸಭೆಯಲ್ಲಿ 6, ಕಾಪು ಪುರಸಭೆಯಲ್ಲಿ 2, ಸಾಲಿಗ್ರಾಮ ಪ.ಪಂ.ಗಳಲ್ಲಿ 6 ಸೇರಿದಂತೆ ಒಟ್ಟು 41 ಗಣೇಶೋತ್ಸವಗಳಿಗೆ ಅನುಮತಿ ನೀಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಉಡುಪಿ ತಾಲೂಕಿನಲ್ಲಿ 43, ಕಾಪುವಿನಲ್ಲಿ 30, ಬ್ರಹ್ಮಾವರದಲ್ಲಿ 54, ಬೈಂದೂರಿನಲ್ಲಿ 23, ಕಾರ್ಕಳದಲ್ಲಿ 126, ಹೆಬ್ರಿಯಲ್ಲಿ 20, ಕುಂದಾಪುರ ತಾಲೂಕಿನಲ್ಲಿ 37 ಒಟ್ಟು 333 ಕಡೆ ಗಣೇಶೋತ್ಸವಗಳಿಗೆ ಅನುಮತಿ ನೀಡಲಾಗಿದೆ.
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕಳೆದ ವರ್ಷ ಉತ್ಸವಗಳ ಸಂಖ್ಯೆ 21 ಕಡಿಮೆಯಾಗಿ 159ಕ್ಕೆ, ದ.ಕ. ಗ್ರಾಮಾಂತರದಲ್ಲಿ 71 ಉತ್ಸವಗಳು ಕಡಿಮೆಯಾಗಿ 149ಕ್ಕೆ ಇಳಿದಿದ್ದವು. ಈ ವರ್ಷ ಕಮಿಷನರೆಟ್ ವ್ಯಾಪ್ತಿಯಲ್ಲಿ 157, ಗ್ರಾಮಾಂತರದಲ್ಲಿ 179 ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 336 ಗಣೇಶೋತ್ಸವಗಳಿಗೆ ಅನುಮತಿ ನೀಡಲಾಗಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಲವು ಗಣೇಶೋತ್ಸವ ಗಳಿಗೆ 40-50 ವರ್ಷಗಳ ಇತಿಹಾಸವಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಉತ್ಸವ ಒಂದೇ ದಿನದ ಪೂಜೆಗೆ ಸೀಮಿತವಾಗಿದೆ. ಕೆಲವೆಡೆ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯೊಳಗೆ ವಿಸರ್ಜಿಸುವ ಬೆಳವಣಿಗೆ ನಡೆದಿದೆ. ವಿಗ್ರಹದ ಆಗಮನ ಮತ್ತು ವಿಸರ್ಜನೆಗೆ ಮೆರವಣಿಗೆ ನಡೆಯುತ್ತಿಲ್ಲ. ಆರೇಳು ಅಡಿ ಎತ್ತರದ ವಿಗ್ರಹಗಳು 2, 2.5 ಅಡಿಗೆ ಇಳಿದಿವೆ. ಮನೆಗಳಲ್ಲಿ ನಡೆಯುವ ಪೂಜೆಗಳಿಗೆ ಕಳೆದ ವರ್ಷ ಪರಸ್ಥಳದವರು ಬಂದಿರಲಿಲ್ಲ. ಆದರೆ ಈ ಬಾರಿ ಪರಸ್ಥಳದವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಭೋಜನ ಪ್ರಸಾದವೂ ನಡೆಯುತ್ತಿಲ್ಲ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಿತಿಯವರನ್ನು ಕರೆದು ಸಭೆ ನಡೆಸಿ ಸರಳ ರೀತಿಯಲ್ಲಿ ಆಚರಿಸಲು ಸೂಚನೆ ನೀಡಲಾಗಿದೆ. ಬಹುತೇಕ ಕಡೆಗಳಲ್ಲಿ ಆಮಂತ್ರಣ ಪತ್ರಿಕೆಯೂ ಮುದ್ರಣವಾಗಿಲ್ಲ, ದೇಣಿಗೆ ಸಂಗ್ರಹವೂ ನಡೆದಿಲ್ಲ. ಧಾರ್ಮಿಕ ಕಟ್ಟಳೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ವಿವಿಧ ಗಣೇಶೋತ್ಸವಗಳು, ಹೆಚ್ಚಿಗೆ ಜನ ಸೇರುವ ಗಣಪತಿ ದೇವಸ್ಥಾನಗಳಲ್ಲಿ ಪೊಲೀಸರು ಸೂಕ್ತ ಬಂದೋಬಸ್ತು ಏರ್ಪಡಿಸಿದ್ದಾರೆ.
1893ರಲ್ಲಿ ಆರಂಭ :
ಬಾಲಗಂಗಾಧರ ತಿಲಕರಿಂದ 1893ರಲ್ಲಿ ಪುಣೆಯ ಮೂರು ಕಡೆ ಮತ್ತು ಮುಂಬಯಿ ಗಿರ್‌ಗಾಂವ್‌ನ ಕೇಶವ್‌ಜಿ ನಾಯಕ್ ಚೌಕ್‌ನಲ್ಲಿ ಆರಂಭಗೊಂಡ ಗಣೇಶೋತ್ಸವ ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ತಳವೂರಿ ಕರಾವಳಿ ನಾಡಿಗೆ ಬಂದದ್ದು 1948ರಲ್ಲಿ. ಕರಾವಳಿಯ ಪ್ರಥಮ ಗಣೇಶೋತ್ಸವ ಮಂಗಳೂರು ಪ್ರತಾಪನಗರದ ಸಂಘನಿಕೇತನದ್ದು. ಅನಂತರ 1967ರಲ್ಲಿ ಉಡುಪಿಯಲ್ಲಿ (ಕಡಿಯಾಳಿ) ಆರಂಭಗೊಂಡಿತು. ಕಾಸರಗೋಡಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಅತಿ ಹಿರಿದಾದುದು.