ಶಿವಮೊಗ್ಗ: ಮಾರಣಾಂತಿಕ ಕೋವಿಡ್ ಸೋಂಕು ರಾಜ್ಯದಲ್ಲಿ ದಿನೇ ದಿನೇ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯನ್ನು ಅತ್ಯಂತ ಸರಳವಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎಂದು ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆಯ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಗೆ ಅನುಕೂಲವಾಗುವಂತೆ ಕೆಲವು ವಿಷಯಗಳನ್ನು ಸೇರಿಸಿ, ಇನ್ನೂ ಕೆಲವನ್ನು ಮಾರ್ಪಾಡಿಸಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಉದ್ದೇಶಿಸಿದೆ ಎಂದರು.
ಈ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಮುನ್ನ ಜಿಲ್ಲೆಯ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು ಸರ್ಕಾರ ಕೈಗೊಂಡ ನಿರ್ಣಯದಂತೆ ಹಬ್ಬವನ್ನು ಸರಳವಾಗಿ ಆಚರಿಸಲು ಸಂಘಟನೆಗಳ ಪ್ರಮುಖರು ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.
ಕಳೆದ ಸಾಲಿನಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದ ಸಂಘಗಳು ಈ ಬಾರಿಯೂ ಗಣೇಶನ ಪ್ರತಿಷ್ಠಾಪನೆ ಮಾಡಲು ಜಿಲ್ಲಾಡಳಿತದ ವಿರೋಧವಿಲ್ಲ. ಆದರೆ ಪ್ರತಿಷ್ಠಾಪಿಸಿದ ದಿನದಂದೇ ಅತ್ಯಂತ ಕಡಿಮೆ ಸಂಖ್ಯೆಯ ಜನರೊಂದಿಗೆ ವಿಸರ್ಜನೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ. ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಗುವುದಿಲ್ಲ . ಗಣೇಶನ ವಿಸರ್ಜನೆಗೆ ಸಂಬಂಧಿ ಸಿದಂತೆ ಮಹಾನಗರ ಪಾಲಿಕೆ ವತಿಯಿಂದ ವಿಸರ್ಜನಾ ವಾಹನ ವ್ಯವಸ್ಥೆ ಮಾಡಲಾಗಿದ್ದು ನಿಗ ದಿತ ಸಮಯಕ್ಕೆ ಸಾರ್ವಜನಿಕರ ಮನೆ ಬಾಗಿಲಿಗೆ ಬರಲಿದೆ. ಜನಪರವಾದ ಈ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪೊಲೀಸ್ ಇಲಾಖೆಯ ಅಧಿಕಾರಿಗಳು
ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರ ಸಭೆ ಕರೆದು ವಾಸ್ತವ ಸ್ಥಿತಿಯ ಮನವರಿಕೆ ಮಾಡಿಕೊಡಲು ಸೂಚಿಸಲಾಗಿದೆ ಎಂದ ಅವರು, ಹಬ್ಬದ ಆಚರಣೆಯಲ್ಲಿ ಸಂಭ್ರಮ, ಸ್ಫೂರ್ತಿ ಮತ್ತು ಉತ್ಸಾಹವಿರಲಿ. ಯಾರೊಬ್ಬರೂ ಈ ವಿಷಯವನ್ನು ಪ್ರತಿಷ್ಠೆಯಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು. ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿ ಧಿಗಳುಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುವವರು 2 ಅಡಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವವರು ಗರಿಷ್ಠ 4 ಅಡಿ ಎತ್ತರದ ವಿಗ್ರಹವನ್ನು ಪ್ರತಿಷ್ಠಾಪಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಸುವರ್ಣ ಶಂಕರ್, ಜಿಪಂ ಸದಸ್ಯ ಕೆ.ಇ. ಕಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಮತ್ತಿತರರು ಇದ್ದರು.