ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ಗಣೇಶೋತ್ಸವ ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಸಪ್ಪೆಯಾಗಿದೆ. ಇನ್ನೊಂದೆಡೆ ಗಣೇಶ ಮೂರ್ತಿ ಕಲಾಕಾರರು ಸರಕಾರದ ಸ್ಪಷ್ಟತೆಗಾಗಿ ಕಾಯುತ್ತ ದಿನ ದೂಡುತ್ತಿದ್ದಾರೆ.
ಕಳೆದ ವರ್ಷದಿಂದ ಗಣೇಶೋತ್ಸವಕ್ಕೆ ಗ್ರಹಣ ಬಡಿದಿದ್ದು ಸಾರ್ವಜನಿಕ ಗಣೇಶೋತ್ಸವ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕಳೆದ ವರ್ಷ ಎರಡು ದಿನ ಬಾಕಿ ಇರುವಂತೆ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವ ಮೂಲಕ ಸರಕಾರ ಕಾಟಾಚಾರದ ಆಚರಣೆಗೆ ಅವಕಾಶ ನೀಡಿತ್ತು. ಆದರೆ,ಈ ವರ್ಷ ಇನ್ನೂ ಕೂಡಾ ಯಾವುದೇ ಆದೇಶ ನೀಡದೇ ಕಲಾವಿದರನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಮೂರ್ತಿ ತಯಾರಿಕೆ ಹಿನ್ನಡೆ: ಕೋವಿಡ್ ಬಂದಾಗಿನಿಂದ ಗಣೇಶೋತ್ಸವ ಆಚರಣೆಗೆ ಜನರು ಸಹ ಮುಂದೆ ಬರುತ್ತಿಲ್ಲ. ಇದರಿಂದ ಕಳೆದ ವರ್ಷದಿಂದ ಮೂರ್ತಿ ತಯಾರಿಕೆಯಲ್ಲೂ ಕಲಾವಿದರು ಹಿಂದೇಟು ಹಾಕಿದ್ದು, 500-700 ಗಣೇಶ ಮೂರ್ತಿ ತಯಾರಿಸುತ್ತಿದ್ದ ಕಲಾವಿದರು 300-500 ಮೂರ್ತಿಗೆ ಸೀಮಿತವಾಗುತ್ತಿದ್ದಾರೆ. ಪ್ರತಿವರ್ಷದ ಆಚರಣೆ ಮಾಡಲೇಬೇಕು ಎನ್ನುವವರು ಹಾಗೂ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರು ಸರಳವಾಗಿ ಗಣೇಶೋತ್ಸವ ಆಚರಿಸಿದರಾಯಿತು ಎನ್ನುತ್ತಿದ್ದಾರೆ.
ಬುಕ್ಕಿಂಗ್ ಆಗುತ್ತಿಲ್ಲ: ಗಣೇಶೋತ್ಸವ ಬರುತ್ತಿದ್ದಂತೆ ಸುಮಾರು ಒಂದು ತಿಂಗಳು ಮುಂಚಿನಿಂದಲೇ ಗಣೇಶ ಮೂರ್ತಿಗಳ ಬುಕ್ಕಿಂಗ್ ಮಾಡಲು ಜನರು ಬರುತ್ತಾರೆ. ಇನ್ನು ಕೆಲವರು ಅಂತಿಮ ಕ್ಷಣದವರೆಗೆ ಕಾಯ್ದು ಕೊನೆಗೆ ಆಗಮಿಸಿ ಗಣೇಶ ಮೂರ್ತಿ ಖರೀದಿಸುತ್ತಾರೆ. ಆದರೆ, ಈ ವರ್ಷ ಗಣೇಶೋತ್ಸವಕ್ಕೆ 10 ದಿನಗಳಷ್ಟೇ ಬಾಕಿ ಇದ್ದರೂ ಜನರು ಆಗಮಿಸಿ ಗಣೇಶ ಮೂರ್ತಿಗಳನ್ನು ಬುಕ್ಕಿಂಗ್ ಮಾಡುತ್ತಿಲ್ಲ. ಇದು ಕಲಾವಿದರನ್ನು ಕಂಗೆಡಿಸುವಂತೆ ಮಾಡಿದೆ. ಇನ್ನುಳಿದ 10 ದಿನಗಳಲ್ಲಿ ಜನರ ಸ್ಪಂದನೆ ಯಾವ ರೀತಿ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.