Advertisement

Ganesh Festival: ಮುಂಬಯಿ ಕಿಂಗ್‌ ಸರ್ಕಲ್‌ ಗಣಪನಿಗೆ 400 ಕೋಟಿ ರೂಪಾಯಿಗಳ ವಿಮೆ

01:34 AM Sep 06, 2024 | Team Udayavani |

ಮುಂಬಯಿ: ನಗರದ ಕಿಂಗ್‌ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲದ ಶ್ರೀಮಂತ ಗಣಪತಿಗೆ ಮಾಡಿರುವ ವಿಮೆ ಕೇವಲ 400.58 ಕೋಟಿ ರೂ. ಗಳು ಮಾತ್ರ !

Advertisement

ದೇಶದಲ್ಲೇ ಅತ್ಯಂತ ಶ್ರೀಮಂತ ಗಣಪತಿ ಎಂದು ಕರೆಯಲ್ಪಡುವ ಗಣಪತಿ ಸಹ ಇದೂ. ಜಿಎಸ್‌ಬಿ ಮಂಡಲ 70 ವರ್ಷದ ಉತ್ಸವಕ್ಕೆ ಸಿದ್ಧತೆ ನಡೆಸಿದ್ದು, ಇಂದು ವಿರಾಟ್‌ ದರ್ಶನ ನಡೆಯಿತು. ಸೆ. 7ರಿಂದ 11ರ ವರೆಗೆ ಈ ಬಾರಿ ಉತ್ಸವ ನಡೆಯಲಿದೆ. ಈ ಗಣೇಶ ಮೂರ್ತಿಗೆ ಪ್ರಾಕೃತಿಕ ಬಣ್ಣಗಳನ್ನೇ ಬಳಸುತ್ತಾರೆ.

ಜತೆಗೆ ಈ ಬಾರಿ ಸುಮಾರು 69 ಕಿಲೋ ಚಿನ್ನ ಹಾಗೂ 370 ಕೆ.ಜಿ.ಯಷ್ಟು ಬೆಳ್ಳಿಯಿಂದ ಅಲಂಕರಿಸಲಾಗುತ್ತದೆ. ಹರಕೆಯ ರೂಪದಲ್ಲಿ ಚಿನ್ನ ಬೆಳ್ಳಿ ಯನ್ನು ಅರ್ಪಿಸುವವರಿಗೆ ಕೊರತೆ ಇಲ್ಲ. ಈ ಬಾರಿ ವಿಶೇಷ ವೆಂಬಂತೆ ಉಡುಪಿಯಲ್ಲಿ ರೂಪಿಸಿದ 65 ಕೆಜಿ ಬೆಳ್ಳಿಯ 6 ಅಡಿ ಎತ್ತರದ 2 ದೀಪಗಳನ್ನು, ನೈವೇದ್ಯಕ್ಕೆಂದು 14 ಬೆಳ್ಳಿಯ ಪಾತ್ರೆಗಳನ್ನೂ ಅರ್ಪಿಸಲಾಗುತ್ತಿದೆ.

ವಿಮೆಯ ದಾಖಲೆ
ಇದು ಬಂಗಾರದ ಗಣಪ. ಗಣಪತಿಗೆ ಶೃಂಗರಿಸಲ್ಪಟ್ಟ ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳಿಗೆ 43.15 ಕೋ. ರೂ.ಗಳ ರಿಸ್ಕ್ ವಿಮೆ, ಭೂಕಂಪ, ಅಗ್ನಿದುರಂತಕ್ಕೆ ಸಂಬಂಧಿಸಿದಂತೆ 2 ಕೋ. ರೂ., ಗಣಪತಿ ಕುಳ್ಳಿರಿಸುವ ಪೆಂಡಾಲ್‌, ಕ್ರೀಡಾಂಗಣ ಇತ್ಯಾದಿಗೆ 30 ಕೋ. ರೂ., ಮಂಡಲದ ಪದಾಧಿಕಾರಿಗಳು, ಅರ್ಚಕರು, ಭಕ್ತರು, ಸ್ವಯಂ ಸೇವಕರ ಭದ್ರತೆಗಾಗಿ 325 ಕೋ. ರೂ. ಗಳ ವಿಮೆಯನ್ನು ದಿ ನ್ಯೂ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿಯಿಂದ ಪಡೆಯಲಾಗಿದೆ. ಒಟ್ಟು 400.58 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಈ ಮೊತ್ತ ಕಳೆದ ವರ್ಷ 366.40 ಕೋಟಿ ರೂ. ಗಳಾಗಿದ್ದವು.

ಪೆಂಡಾಲ್‌ ಕಥೆ
ಈ ಗಣಪತಿಗೆ ಹಾಕುವ ಪೆಂಡಾಲ್‌ 1 ಲಕ್ಷ ಚದರ ಅಡಿ ವಿಸ್ತೀರ್ಣದಷ್ಟು ವಿಸ್ತಾರದ್ದು. ಗಣಪತಿಯ ದರ್ಶನಕ್ಕಾಗಿ ಭಕ್ತರಿಗೆ ಸ್ಕೈ ವಾಕ್‌ ನಿರ್ಮಿಸಲಾಗಿದೆ. ಪೆಂಡಾಲ್‌ ಒಳಗೆ ಫೇಶಿಯಲ್‌ ರೆಕಗ್ನಿಶನ್‌ ಹೈಡಿಜಿಟಲ್‌ ಕೆಮರಾ, ಪ್ರವೇಶ ದ್ವಾರಗಳಲ್ಲಿ ಮೆಟಲ್‌ಡಿಟೆಕ್ಟರ್‌, 100 ಸಿಸಿಟಿವಿ ಕೆಮರಾ ಅಳವಡಿಸ ಲಾಗಿದೆ.

Advertisement

ಕರ್ನಾಟಕ, ಕೇರಳ, ಗೋವಾದಿಂದ ಅರ್ಚಕರು ಬರುತ್ತಾರೆ. ಸ್ವಯಂ ಸೇವಕರಾಗಿ ದೇಶದ ವಿವಿಧ ರಾಜ್ಯ ಗಳಲ್ಲದೇ ಆಸ್ಟ್ರೇಲಿಯ, ನ್ಯೂಜಿಲೆಂಡ್‌, ಅಮೆರಿಕ, ಸಿಂಗಾಪುರ, ದುಬಾೖ ಮತ್ತಿತರ ರಾಷ್ಟ್ರಗಳಿಂದಲೂ ಬರುತ್ತಾರೆ. ದಾಖಲೆ ಎಂಬಂತೆ ಉತ್ಸವದಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ವಿವಿಧ ಸೇವೆಗಳು ಸಲ್ಲಿಕೆಯಾಗುತ್ತವೆ.

ಇನ್ನೊಂದು ವಿಶೇಷವೆಂದರೆ ಉತ್ಸವದ ಐದೂ ದಿನಗಳಲ್ಲಿ ಸುಮಾರು 85 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಪ್ರತೀ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಫ‌ಲಾಹಾರ ಇರಲಿದ್ದು, 10ರಿಂದ 12 ಸಾವಿರ ಭಕ್ತರು ಪಾಲ್ಗೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.