Advertisement

Ganesh Chaturthi: ಗೌರಿ ಜತೆ ಮಗ ಗಣಪನ ಆಗಮನ

04:03 PM Sep 17, 2023 | Team Udayavani |

ಗಣೇಶ ಚತುರ್ಥಿಗೆ ಒಂದು ದಿನ ಮೊದಲು ಗೌರಿ ಪೂಜೆಯನ್ನು ಆಚರಿಸಲಾಗುತ್ತದೆ.  ಭಾದ್ರಪದ ಮಾಸ ಬಂದರೆ ಸಾಕು ಮನೆ ಮನೆಗೆ ಗೌರಿ ಮತ್ತು ಗಣೇಶ ಬರುವ ಸಡಗರ ಸಂಭ್ರಮ. ಊರು ಊರಿನ ಗಲ್ಲಿಗಳಲ್ಲಿ, ಮನೆ, ರಸ್ತೆ ನೋಡಿದರೂ ಗಣೇಶನದ್ದೇ ಅಬ್ಬರ. ಮೊದಲನೆಯ ದಿನದ ಗೌರಿ ಹಬ್ಬಕ್ಕಿಂತಲೂ ಗಣೇಶ ಹಬ್ಬಕ್ಕೆ ವಿಶೇಷ ಸತ್ಕಾರವಾಗಿರುತ್ತದೆ.

Advertisement

ಹೆಣ್ಣು ಮಕ್ಕಳಿಗೆ ಮೀಸಲಾದ ಹಬ್ಬಗಳಲ್ಲಿ ಪ್ರಮುಖ ಹಬ್ಬ ಗೌರಿ ಹಬ್ಬ. ಇದು ಪ್ರತಿ ಮನೆಯಲ್ಲಿ ಸೌಭಾಗ್ಯವನ್ನು ತರುವಂತಹ ಒಂದು ಹಬ್ಬವಾಗಿದೆ.ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಉಪವಾಸವ್ರತವನ್ನು  ಆಚರಿಸುತ್ತಾರೆ. ವಿವಾಹಿತ  ಹೆಂಗಳೆಯರು ತಮ್ಮ ವೈವಾಹಿಕ ಜೀವನ ಚೆನ್ನಾಗಿರಲೆಂದು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಇನ್ನು ಅವಿವಾಹಿತ ಮಹಿಳೆಯರು ಒಳ್ಳೆಯ ಕಂಕಣ ಭಾಗ್ಯ ಕೂಡಿ ಬರಲಿ ಎಂದು ವ್ರತವನ್ನು ಆಚರಿಸುವರು ಎಂಬ ವಾಡಿಕೆಯೂ ಇದೆ.

ಅದರೊಂದಿಗೆ ಗೌರಿ ದೇವಿಯ ವಿಗ್ರಹವನ್ನು ಇಟ್ಟು ಅಲಂಕರಿಸುತ್ತಾರೆ. ಸಾಂಪ್ರದಾಯಿಕವಾಗಿ ಎಲ್ಲ ಮುತ್ತೈದೆಯರಿಗೆ ಅರಿಸಿನ, ಕುಂಕುಮ, ಬಳೆ, ತೆಂಗಿನಕಾಯಿ, ಸಿರಿಧಾನ್ಯ, ಕುಪ್ಪಸದ ತುಂಡು,ಬೆಲ್ಲವನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ವಿವಾಹಿತ ಮಹಿಳೆ ಯರು ಹದಿನಾರು ಗಂಟುಗಳಿರುವ ಗೌರಿ ದಾರವನ್ನು ಕಟ್ಟಿಕೊಂಡು ದೇವಿಯ ಅನುಗ್ರಹವನ್ನು ಪಡೆಯುತ್ತಾರೆ. ಇನ್ನು ಹಳ್ಳಿಯ ಕಡೆ ನೋಡುವುದಾದರ ಹೊಸದಾಗಿ ಮದುವೆಯಾದ ನವದಂಪತಿಗಳಿಗೆ ಆಟದ ಹಬ್ಬ.

ಏಕೆಂದರೆ, ಹುಡುಗಿಯ ಮನೆಯವರು ಹುಡುಗನ ಮನೆಗೆ ಬಾಗಿನವನ್ನು ತೆಗೆದುಕೊಂಡು ಹೋಗುವಾಗ ತೆಂಗಿನ ಕಾಯಿಯನ್ನು ಬರಿ ಕೈ ಇಂದ ಗುದ್ದುವ ಆಟವೊಂದಿದೆ. ಹುಡುಗನ ಮನೆಯವರು ನೀಡುವ ತೆಂಗಿನಕಾಯಿಯನ್ನು ಹುಡುಗಿಯ ಮನೆಯವರು ಒಡೆಯುವುದು, ಹಾಗೆಯೆ ಹುಡುಗಿಯ ಮನೆಯಿಂದ ನೀಡುವ ತೆಂಗಿನಕಾಯಿಯನ್ನು ಹುಡುಗನ ಮನೆಯವರು ಒಡೆಯುವುದರ ಮೂಲಕ ಸಂಭ್ರಮಿಸುತ್ತಾರೆ. ಇನ್ನು ಮರುದಿನ ಬರುವ ಗಣೇಶ ಹಬ್ಬದ ಬಗ್ಗೆ ಪ್ರಮುಖವಾದ ಹಬ್ಬ. ಬುದ್ಧಿವಂತಿಕೆ ಮತ್ತು ಶ್ರೀಮಂತಿಕೆಯ ದೇವರಾದ ಗಣೇಶನಿಗೆ ಇದನ್ನು ಆಚರಿಸಲಾಗುತ್ತದೆ. ಕೆಲವರು 5 ದಿನಗಳವರೆಗೆ ಗಣಪನನ್ನು ಪ್ರತಿಷ್ಠಾಪಿಸಿದರೆ ಇನ್ನೂ ಕೆಲವರು ಹತ್ತು ಹದಿನೈದು ದಿನ ಗಳವರೆಗೆ ಇಟ್ಟು ಪ್ರತಿದಿನ ಪೂಜಿಸಿ ಸಂಭ್ರಮಿಸುತ್ತಾರೆ.

ಗಣಪನ ಇಷ್ಟದ ತಿನಿಸುಗಳನ್ನು ನೈವೇದ್ಯವಾಗಿ ಇಡುತ್ತಾರೆ. ಎಲ್ಲಿ ನೋಡಿದರೂ ಹಾಡು, ನೃತ್ಯದ ಸಂಭ್ರಮ.   ಊರಿನ ಹುಡುಗರಿಗಂತೂ ಸಂಭ್ರಮದ ದಿನ.  ಮನೆ ಮಠ ಇಲ್ಲದ ಹಾಗೆ ಗಣೇಶನ ಬಳಿಯೇ ರಾತ್ರಿ  ಹಗಲು ಇರುತ್ತಾರೆ. ಅಲ್ಲಿಯೇ ಊಟ, ಅಲ್ಲಿಯೇ ಆಟ, ಅಲ್ಲಿಯೇ ನಿದ್ದೆ. ಅನಂತರ ಗಣೇಶನನ್ನು ಮೆರವಣಿಗೆ ಮಾಡಿ, ನದಿಯ ಬಳಿ ತಂದು ಮತ್ತೆ ಪೂಜಿಸಿ ನದಿಯಲ್ಲಿ ಮುಳುಗಿಸುತ್ತಾರೆ. ಮತ್ತೆ ಮುಂದಿನ ವರ್ಷದ ಹಬ್ಬಕ್ಕೆ ಕಾಯುವುದೇ ಖುಷಿ.

Advertisement

-ಸ್ನೇಹ ವರ್ಗೀಸ್‌

ಎಂ.ಜಿ.ಎಂ. ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next