ಬೆಂಗಳೂರು: ಪ್ರತಿವರ್ಷ ಗಣೇಶ ಚತುರ್ಥಿಗೆ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುವ ಗಣೇಶ, ಈ ಬಾರಿ ಚಂದ್ರಯಾನಕ್ಕೆ ಸಿದ್ಧನಾಗಿದ್ದಾನೆ.
ಇತ್ತೀಚೆಗಷ್ಟೇ “ಚಂದ್ರಯಾನ-3′ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಪದಾರ್ಪಣೆ ಮಾಡಿ ಇಡೀ ಜಗತ್ತೇ ತಿರುಗಿನೋಡುವಂತೆ ಇಸ್ರೋ ಸಾಧನೆ ಮಾಡಿತು. ಅದಕ್ಕೆ ಅಭಿನಂದನಾ ಪೂರಕವಾಗಿ ನಗರದಲ್ಲೊಬ್ಬ ಕಲಾವಿದ ತನ್ನ ಕೈಚಳಕದಿಂದ ಗಣೇಶನ ಚಂದ್ರಯಾನವನ್ನು ತಯಾರಿಸಿದ್ದಾರೆ.
ಈ ಬಾರಿಯ ವಿಶೇಷ ಗಣಪತಿ ಆಗಿದೆ. ಸಾಮಾನ್ಯವಾಗಿ ಸಿಂಹಾಸನವೇರಿದ ಕುಳಿತಿರುವುದು, ಉಗ್ರನರಸಿಂಹ ರೂಪ, ಪಂಚಮುಖೀ ಗಣೇಶ, ತ್ರಿಶೂಲ, ಗದೆ ಹಿಡಿದು ನಿಂತಿರುವುದು ಹೀಗೆ ಪ್ರತಿವರ್ಷ ವಿಭಿನ್ನ ಅವತಾರಗಳಲ್ಲಿ ಗಣೇಶನ ಪ್ರತಿಷ್ಠಾನೆ ಆಗುತ್ತದೆ. ಕಳೆದ ವರ್ಷ ನಟ ಪುನೀತ್ ರಾಜ್‌ಕುಮಾರ್ ಜತೆಗೆ ಕಾಣಿಸಿಕೊಂಡಿದ್ದನು. ಈ ಸಲ ಚಂದ್ರಯಾನಲ್ಲೆ ರೆಡಿಯಾಗಿದ್ದಾನೆ. ನಗರದ ಯಶವಂತಪುರದ ಈಶಪುತ್ರ ಎಂಟರ್ ಪ್ರೈಸಸ್ ಸಂಸ್ಥೆಯ ನವೀನ್ ಆರ್ಟ್ಸ್ ಮಾಲಿಕ ಆನಂದ್, ಸುಮಾರು ಮೂರು ಅಡಿ ಅಗಲ ಮತ್ತು ಎರಡು ಅಡಿ ಎತ್ತರದ ವಿನ್ಯಾಸ ಚಂದ್ರನ ತೂಗುಯ್ನಾಲೆ ಮೇಲೆ ತ್ರಿವರ್ಣ ಧ್ವಜ ಹಿಡಿದು ಕುಳಿತಿದ್ದಾನೆ.
ಜತೆಗೆ ಚಂದ್ರನತ್ತ ಚಲಿಸುತ್ತಿರುವ ರಾಕೆಟ್ ಮತ್ತು ಚಂದ್ರನ ಮೇಲೆ ಪಾದಾರ್ಪಣೆ ಮಾಡುತ್ತಿರುವ ವಿಕ್ರಂ ಲ್ಯಾಂಡರ್ ದೃಶ್ಯ ರೋಮಾಂಚನಕಾರಿಯಾಗಿದ್ದು, ಚಂದ್ರಯಾನ ಕನಸು ಕಂಡ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಇದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿರುವ ದೃಶ್ಯ ಕಟ್ಟಿಕೊಡಲಾಗಿದೆ. ಇಲ್ಲಿ ಮರದ ಹಲಗೆ, ಫೋಮ್ ಶೀಟ್, ಯುಬಿ ಲೈಟ್ ಹಾಗೂ ಮಣ್ಣಿನಿಂದ ತಯಾರಿಸಿದ ಗಣಪತಿ ವಿಗ್ರಹ ಸೇರಿದಂತೆ ಅಂದಾಜು 25 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಷ್ಟೇ ಅಲ್ಲ, ಚಿನ್ನದ ರಥ ಏರಿ ಬರುವ ರಾಜನಿಗಿಂತ ಎತ್ತಿನಗಾಡಿ ಏರಿ ಬರುವ ರೈತನೇ ದೊಡ್ಡವನು ಎಂಬ ಸಂದೇಶ ಹಾಗೂ ಜೈ ಜವಾನ್ -ಜೈ ಕಿಸಾನ್ ಕಲ್ಪನೆಯ ರೈತ ಗಣಪತಿ, ನೈಜ ನವಿಲು ಗರಿಗಳನ್ನು ಬಳಸಿ ತಯಾರಿಸಿದ ಗಣೇಶ, ಗರುಡ ಗಣೇಶ, ವೆಂಕಟೇಶ್ವರ ಗಣೇಶ ಹೀಗೆ ನಾನಾ ರೂಪದ ಗಣಪತಿ ಮೂರ್ತಿಗಳು ಆಕರ್ಷಣೀಯವಾಗಿದ್ದು, ತುಮಕೂರು, ಮೈಸೂರು, ಮಂಡ್ಯ, ಚನ್ನಪಟ್ಟಣ, ಕೋಲಾರ, ಹೈದರಾಬಾದ್ ಹಾಗೂ ತಮಿಳುನಾಡು ಒಳಗೊಂಡಂತೆ ವಿವಿಧ ಭಾಗಗಳಿಂದ ಈ ಮೂರ್ತಿಗೆ ಬೇಡಿಕೆ ಬಂದಿದೆ. ಬಹುತೇಕ ಗಣಪತಿ ಮೂರ್ತಿಗಳು ಈಗಾಗಲೇ ಬುಕ್ ಆಗಿವೆ ಎಂದು ಹೇಳುತ್ತಾರೆ.
8 ಚಂದ್ರಯಾನ-3 ಗಣೇಶ ಗಳು ಬುಕ್ ಆಗಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪಿಒಪಿ ಗಣೇಶ ಕರಗಲು ಸುಮಾರು ಆರು ತಿಂಗಳು ಬೇಕು. ಮಲಿನ ತಡೆಗೆ ಮಣ್ಣಿನಿಂದಲೇ ಗಣೇಶಮೂರ್ತಿ ತಯಾರಿಸುತ್ತಿದ್ದೇವೆ. ಇದರಿಂದ ಕುಂಬಾರಿಕೆ ಮಾಡುವವರಿಗೂ ಅನುಕೂಲವಾಗುತ್ತದೆ. –
ಆನಂದ್, ಗಣಪತಿ ವಿಗ್ರಹ ತಯಾರಕರು
–ಭಾರತಿ ಸಜ್ಜನ್