ಮುಂಬಯಿ: ಅನಂತ ಚತುರ್ದಶಿ ದಿನವಾದ ಶುಕ್ರವಾರ ರಾಜ್ಯದ ವಿವಿಧೆಡೆ ಗಣೇಶ ವಿಗ್ರಹ ವಿಸರ್ಜನೆ ಅದ್ದೂರಿಯಿಂದ ನಡೆಯುತ್ತಿದ್ದು, ಮುಂಬಯಿ, ಥಾಣೆ, ಪುಣೆಗಳಂತ ಮಹಾನಗರ ಮತ್ತು ಉಪನಗರಗಳಲ್ಲಿ ಪೊಲೀಸರ ಬಿಗು ಭದ್ರತೆ ಒದಗಿಸಲಾಗಿದೆ.
ಮುಂಬಯಿಯ ಅದ್ಧೂರಿ ಗಣೇಶೋತ್ಸವಗಳಲ್ಲಿ ಒಂದಾದ ಲಾಲ್ ಬಾಗ್ ಚಾ ರಾಜಾ 14 ಅಡಿ ಎತ್ತರದ ಗಣೇಶ ವಿಗ್ರಹ ವಿಸರ್ಜನೆಗೆ ಲಕ್ಷಾಂತರ ಜನರು ಸೇರಿದ್ದು, ಭಾರಿ ಮೆರವಣಿಗೆ ನಡೆಸಿ ವಿಗ್ರಹವನ್ನು ಸಮುದ್ರದಲ್ಲಿ ವಿಸರ್ಜಿಸಲಾಗುತ್ತಿದೆ. ಭಕ್ತರು ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದ್ದಾರೆ.
ಕಳೆದ ಎರಡು ವರ್ಷ ಜನರಿಗೆ ಕೋವಿಡ್ ಕಾರಣಗಳಿಂದ ಗಣೇಶೋತ್ಸವ ಮೆರವಣಿಗೆ ಗಳಲ್ಲಿ ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಭಾರಿ ಸಂಖ್ಯೆಯಲ್ಲಿ ಮೆರವಣಿಗೆಗಳಲ್ಲಿ ಭಕ್ತ ಸಮೂಹ ಕಂಡುಬಂದಿದೆ.
ಪ್ರಮುಖ ರಸ್ತೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ನಗರದ ಮಧ್ಯ ಭಾಗದಲ್ಲಿರುವ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳನ್ನು ಸಂಚಾರಕ್ಕೆ ಮುಚ್ಚಲಾಗಿದೆ. ತುರ್ತು ಸಂದರ್ಭ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ ಘಟನ ಸ್ಥಳಕ್ಕೆ ತತ್‌ಕ್ಷಣ ತಲುಪಲು ವ್ಯವಸ್ಥೆ ಒದಗಿಸಲಾಗಿದೆ. ಗಣೇಶ ವಿಸರ್ಜನೆ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳು ಕಂಡುಬಂದರೆ ತತ್‌ಕ್ಷಣ ಪೊಲೀಸ್ ನಿಯಂತ್ರಣ ಕೊಠಡಿ ಅಥವಾ ದತ್ತಿಯಲ್ಲಿರುವ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.
ಮಹಾನಗರ, ಉಪ ನಗರಗಳಲ್ಲಿ ಗಣೇಶ ಮಂಡಲಗಳಿಗೆ ತಡರಾತ್ರಿಯವರೆಗೆ ಗಣೇಶ ಮೆರವಣಿಗೆ, ವಿಸರ್ಜನೆಗೆ ಅನುಮತಿ ನೀಡಲಾಗಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.