ಭಾರತೀಯರ ಪ್ರತೀ ಧಾರ್ಮಿಕ ಆಚರಣೆಯ ಹಿಂದೆ ಒಂದು ಕತೆ ಕಾರಣವಿರುತ್ತದೆ. ಅದರಂತೆ ಗಣೀಶ ಚತುರ್ಥಿ ಹಬ್ಬಕ್ಕೂ ಹಿನ್ನೆಲೆ ಇದೆ. ಅದನ್ನು ನಾವು ಚಿಕ್ಕವರಿದ್ದಾಗಿನಿಂದ ಅದೆಷ್ಟೊ ಬಾರಿ ಕೇಳಿದ್ದೇವೆ. ಪಾರ್ವತಿ ದೇವಿಯ ದೇಹದ ಮಣ್ಣಿನಿಂದ ಜನ್ಮತಾಳಿದ ಗಣೇಶ ತಂದೆ ಪರಮೇಶ್ವರನ ಕೋಪಕ್ಕೆ ಗುರಿಯಾಗಿ ತಲೆ ಕಳೆದುಕೊಂಡು ಆನೆಯ ತಲೆಯಿಂದ ಶಿವ ಅವನಿಗೆ ಮರುಜನ್ಮ ನೀಡಿದ.
ಇದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಆದರೆ ನನಗೆ ಗಣೇಶ ಹಬ್ಬ ಬಂದಾಗಲೆಲ್ಲಾ ಇಲ್ಲಿ ಮಾಡುವ ಮೂರ್ತಿಯನ್ನು ನೋಡಿ ಕಾಡುವ ಪ್ರಶ್ನೆ ಏನೆಂದರೆ ಗಣಪತಿ ಮಣ್ಣಲ್ಲಿ ಜನಿಸಿ ಬಣ್ಣಬಣ್ಣದ ರೂಪ ಹೇಗೆ ಪಡೆದ ಎಂದು.
ಯಾರು ದೇವರನ್ನು ನೇರವಾಗಿ ಅಂತು ನೋಡಿಲ್ಲ. ಆದರೂ ಅವನನ್ನು ಬಗೆ ಬಗೆ ಬಣ್ಣಗಳಿಂದ ಅಲಂಕಾರ ಮಾಡುತ್ತೇವೆ. ಹಾಗೆ ಮಾಡುವುದು ಎಷ್ಟು ಸರಿ ?
ಹಬ್ಬ ಮುಗಿದ ಅನಂತರ ದೇವರ ಮೂರ್ತಿಯನ್ನು ಕೆರೆ, ಬಾವಿ, ಇತ್ಯಾದಿ ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುತ್ತೇವೆ. ಇದರಿಂದ ಮೂರ್ತಿಗೆ ಲೇಪಿಸಿದ ಬಣ್ಣಗಳು ನೀರಿನಲ್ಲಿ ಲೀನವಾಗಿ ನೀರು ಕಲುಷಿತಗೊಳ್ಳುತ್ತದೆ. ಬಣ್ಣದ ಗಣಪತಿಯ ಕತೆ ಒಂದೆಡೆ ಆದರೆ, ಇನ್ನೂ ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗದೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಪಿಒಪಿ ಮೂರ್ತಿಗಳನ್ನು ತಯಾರಿಬಾರದು, ಬಳಸಬಾರದು ಎಂದು ಜಾಗೃತಿ ಕಾರ್ಯಕ್ರಮ ನಡೆಯುತ್ತಲೇ ಇವೆ. ಆದರೂ ಸಂಪೂರ್ಣ ನಿಷೇಧವಾಗಿಲ್ಲ.
ಜನರು ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾನಕ್ಕೆ ಮುಂದಾಗಬೇಕು. ಆಗಲೇ ನಿಸರ್ಗ, ನೀರಿನ ಮೂಲ ಎಲ್ಲವನ್ನೂ ಮಾಲಿನ್ಯದಿಂದ ಸಂರಕ್ಷಣೆ ಮಾಡಲು ಸಾಧ್ಯ. ಅಲಂಕಾರ, ಆಡಂಬರಕ್ಕಿಂತ ನಮ್ಮ ಪರಿಸರ ಆರೋಗ್ಯ ಮುಖ್ಯ ಎಂಬುದನ್ನು ಎಲ್ಲರೂ ಅರಿಯಬೇಕು. ಈ ವರ್ಷದಿಂದಲೆ ಪರಿಸರ ಸ್ನೇಹಿ ಗಣಪತಿ ಅಂದರೆ ಕೇವಲ ಶುದ್ಧ ಮಣ್ಣಿನ ಮೂರ್ತಿಯನ್ನು ತಯಾರಿಸುವ, ಪ್ರತಿಷ್ಠಾಪಿಸುವ ಅಭ್ಯಾಸ ಮಾಡಿಕೊಳಳಬೇಕು. ವರ್ಷದಿಂದ ವರ್ಷಕ್ಕೆ ಇದರ ಸಂಖ್ಯೆ ಹೆಚ್ಚಾದರೆ ರಾಸಾಯನಿಕ ಬಣ್ಣಗಳ ಮೂರ್ತಿ, ಪಿಒಪಿ ಮೂರ್ತಿಗಳನ್ನು ನಿರ್ಮಿಸುವುದು ಖಂಡಿತ ಕಡಿಮೆ ಆಗುತ್ತದೆ. ಈ ಬಾರಿಯಿಂದಲೆ ಪರಿಸರ ಸ್ನೇಹಿ ಗಣಪತಿಗೆ ಎಲ್ಲರೂ ಸೇರಿ ಪ್ರೋತ್ಸಾಹ ಮಾಡೋಣ.
-
ಪೂಜಾ ಹಂದ್ರಾಳ
ಎಸ್‌ಡಿಎಂ ಕಾಲೇಜು ಉಜಿರೆ