ಸಮಿತಿಗಳಿಂದ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿದೆ. ಗಣೇಶನ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನಕಣ್ಣು ಇಡಲಾಗಿದೆ. ಗಣೇಶನ ಮೂರ್ತಿಗಳನ್ನು ವಿಸರ್ಜಿಸಲು ಪಾಲಿಕೆಯೂ ಸಕಲ ವ್ಯವಸ್ಥೆ ಮಾಡಿಕೊಂಡಿದ್ದು, ಪುಷ್ಕರಣಿಗಳನ್ನು ನಿರ್ಮಿಸಿದೆ. ಮೊಬೈಲ್ ನೀರಿನ ಘಟಕಗಳನ್ನು ವಸತಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ. ಒಟ್ಟಾರೆ, ವಾರದಿಂದ ನಿರಂತರ ಮಳೆಯ ನಡುವೆಯೂ, ತಿಂಗಳಾಂತ್ಯವಾಗಿದ್ದರೂ, ಹಬ್ಬದ ಸಡಗರಕ್ಕೆ ಮಾತ್ರ ಕುಂದುಂಟಾಗಿಲ್ಲ. ಮಾರುಕಟ್ಟೆ ಖರೀದಿ ಭರಾಟೆ ಜೋರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗುರುವಾರ ಹೂವಿನ ದರ ದುಬಾರಿಯಾಗಿತ್ತು. ಕನಕಾಂಬರ ಹೂವು ಕೆ.ಜಿ.ಗೆ 1,200-1,300 ರೂ. ತಲುಪಿದರೆ, ಏಲಕ್ಕಿ ಬಾಳೆಹಣ್ಣು 110-120 ರೂ.ವರೆಗೆ ತಲುಪಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿತ್ತು. ಬಾಳೆಹಣ್ಣು, ಕನಕಾಂಬರ ಹೊರುತುಪಡಿಸಿ ಇತರೆ ಹೂವು, ಹಣ್ಣುಗಳ ದರ ಕೊಂಚ ಕಡಿಮೆಯಿತ್ತು. ಸೇಬು ದಾಸ್ತಾನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿದ್ದರಿಂದ ದರ ಕೆ.ಜಿ.ಗೆ 100 ರೂ.ಗೆ ಇಳಿಕೆಯಾಗಿತ್ತು. ದಾಳಿಂಬೆ, ಮೂಸಂಬಿ, ಸೇಬು, ಪೇರಲೆಹಣ್ಣಿನ ದಾಸ್ತಾನು ಕೂಡ ಯಥೇತ್ಛವಾಗಿರುವುದು ಕಂಡುಬಂತು. ಪೇರಲೆ ಹಣ್ಣು ಕೆಜಿಗೆ 120-130 ರೂ. ಇದ್ದು, ದುಬಾರಿಯಾಗಿತ್ತು. ಸೇವಂತಿಗೆ ಹೂವು, ಕಾಕಡ, ಸುಗಂಧರಾಜ ಮತ್ತಿತರ ಹೂವುಗಳ ಖರೀದಿಯೂ ಜೋರಾಗಿತ್ತು.
Advertisement