Advertisement

ಸೌಹಾರ್ದವಾಗಿ ವರ್ತಿಸುವಂತೆ ಸಂಘಟನೆಗಳಿಗೆ ಸೂಚನೆ

11:29 AM Aug 24, 2017 | Team Udayavani |

ಬೆಂಗಳೂರು: ಗೌರಿ-ಗಣೇಶ ಹಾಗೂ ಬಕ್ರೀದ್‌ ಹಬ್ಬ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಎಲ್ಲ ರೀತಿಯ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದು, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುವ ಯಾವುದೇ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಗೌರಿ-ಗಣೇಶ ಮತ್ತು ಬಕ್ರೀದ್‌ ಹಬ್ಬದ ಪ್ರಯುಕ್ತ ಬುಧವಾರ ನಗರದ ಪುರಭವನದಲ್ಲಿ ನಗರ ಪೊಲೀಸ್‌ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗೌರಿ-ಗಣೇಶ ಮತ್ತು ಬಕ್ರೀದ್‌ ಹಬ್ಬಗಳು ಒಂದೇ ಸಮಯಕ್ಕೆ ಬಂದಿವೆ. ಹೀಗಾಗಿ ಎರಡು ಸಮುದಾಯದವರು ಸೋದರತ್ವ ಭಾವದಿಂದ ಹಬ್ಬಗಳನ್ನು ಆಚರಿಸಬೇಕು.ಯಾರಾದರೂ ಕಾನೂನು ಮೀರಿ ನಡೆದುಕೊಂಡರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಗೌರಿ-ಗಣೇಶ ಪ್ರತಿಷ್ಠಾಪನೆ ಮಾಡುವ
ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೆಂಡಾಲ್‌ ನಿರ್ಮಿಸಬೇಕು. ಯುವಕರು ಶಾಂತಿಯಿಂದ ವರ್ತಿಸಿದರೆ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ. ಈ ಬಗ್ಗೆ ಸ್ಥಳೀಯ ಮುಖಂಡರು ಯುವಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಬಲವಂತವಾಗಿ ಸಾರ್ವಜನಿಕರಿಂದ ಹಬ್ಬ ಹಣವಸೂಲಿ ಮಾಡುತ್ತಿರುವ ಮಾಹಿತಿ ಸಿಕ್ಕರೆ, ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಈ ರೀತಿ ಯಾರಾದರೂ ವರ್ತಿಸಿದರೆ ಸಾರ್ವಜನಿಕರು ಕೂಡಲೇ ನಮ್ಮ-100ಕ್ಕೆ ದೂರು ನೀಡಬಹುದು ಎಂದು ಹೇಳಿದರು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿಷಯದಲ್ಲಿ ಕಾಲಮಿತಿ ಸಡಿಲಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ವಿಷಯವಾಗಿ ಕಾಲಮಿತಿ ಕಡಿಮೆಗೊಳಿಸುವ ಬಗ್ಗೆ ಚಿಂತಿಸಲಾಗಿತ್ತು. ಗಣೇಶ ಪ್ರತಿಷ್ಠಾಪನೆ ಆಯೋಜಕರು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮಾತನಾಡಿ, ಬಕ್ರೀದ್‌ ಮತ್ತು ಗಣಪತಿ ಹಬ್ಬದ ಸಂದರ್ಭದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೆ ಪ್ರತಿ ವಾರ್ಡ್‌ಗಳಲ್ಲಿ ಕ್ರಮಕೈಗೊಳ್ಳಲಾಗಿದೆ. ವೈಜ್ಞಾನಿಕವಾಗಿ ಕರಗಿಸಲು ನಿರ್ದಿಷ್ಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

Advertisement

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕೊಡಿ: ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ವರ್ಷಗಳಿಂದ ಗಣೇಶ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮ ಪಾಲನೆ ಮಾಡಿ ಹಬ್ಬ ಆಚರಿಸಿ ಇದಕ್ಕೆ ಪೊಲೀಸರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಪರವಾನಗಿಗೆ ಪರದಾಟ: ಗಣೇಶ ಪ್ರತಿಷ್ಠಾಪನೆಗೆ ಪರವಾನಿಗೆ ನೀಡಲು ಬಿಬಿಎಂಪಿ, ಬೆಸ್ಕಾಂ ಮತ್ತಿತರ ಇಲಾಖೆಗಳಿಂದ ಪರವಾನಗಿ ಸಿಗುವುದಿಲ್ಲ. ಒಬ್ಬರು ಮತ್ತೂಬ್ಬರ ಮೇಲೆ ಹೇಳುತ್ತಾರೆ. ಇದರಿಂದ ಗಣೇಶ ಪ್ರತಿಷ್ಠಾಪನೆಗೆ ತೊಂದರೆಯಾಗಿದೆ ಎಂದು ಕೆಲವರು ದೂರಿದರು. ರೆಸಿಡೆನ್ಸಿ ರೋಡ್‌, ಕಬ್ಬನ್‌ಪೇಟೆಯ ಕೆಲ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾನೆಯಿಂದ ಸ್ಥಳೀಯರಿಗೆ ದರೆಯಾಗುತ್ತದೆ. ಈ ಭಾಗದಲ್ಲಿ ಏಕಮುಖ ಸಂಚಾರ ಸೇರಿ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಇನ್ನು ಕೆಲವರು ಕೇಳಿಕೊಂಡರು. ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next