Advertisement

ಸ್ಮಾರಕ ಆಗಿದೆ ಗಾಂಧೀಜಿ ತಂಗಿದ್ದ ಕೊಠಡಿ

09:50 AM Oct 06, 2018 | |

 ಹರಿಜರನೋದ್ದಾರಕ್ಕಾಗಿ ಹಣ ಸಂಗ್ರಹಿಸಲು ಗಾಂಧೀಜಿ ಅಂದು ಬಳ್ಳಾರಿ ಜಿಲ್ಲಾ ಸಂಚಾರ ಕೈಕೊಂಡಿದ್ದರು. ಈ ಸಂದರ್ಭದಲ್ಲಿ ಹರಪನಹಳ್ಳಿ ಮಾರ್ಗವಾಗಿ ದಾವಣಗೆರೆಗೆ ಪ್ರಯಾಣಿಸುವಾಗ- ಗಂಗಾಧರರಾವ್‌ ದೇಶಪಾಂಡೆ, ಠಕ್ಕರ ಬಾಪ ಅವರೊಂದಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಕಟ್ಟಡದ ಕೊಠಡಿಯೊಂದರಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.  ಅಂದಿನಿಂದ ಇಂದಿನವರೆಗೂ ಈ ಕೋಣೆಗೆ, ಯಾರೂ ಪಾದರಕ್ಷೆ ಧರಿಸಿ ಪ್ರವೇಶಿಸುವುದಿಲ್ಲ. 
ಈಗ ಎಂ.ಪಿ. ಪ್ರಕಾಶ್‌ ಅವರ ಪುತ್ರ ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ಮುಂದಾಳತ್ವದಲ್ಲಿ ಅದು ಗಾಂಧೀಜಿಯ ನೆನಪಿನ ಸ್ಮಾರಕವಾಗಿದೆ. 

Advertisement

ಮಹಾತ್ಮ ಗಾಂಧೀಜಿ ತಂಗಿದ್ದ ಕೊಠಡಿಯನ್ನು ಸಂಪೂರ್ಣವಾಗಿ ದುರಸ್ತಿಪಡಿಸಿ, ಅಲ್ಲಿ ಗಾಂಧೀಜಿ ಪ್ರತಿಮೆ ಸೇರಿದಂತೆ ಅವರ ಜೀವನಾಧಾರಿತ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಗಾಂಧೀಜಿಯವರ ಜೀವನ ಚರಿತ್ರೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಗಾಂಧೀಜಿ ಸ್ಮಾರಕದಲ್ಲಿ ನಿರ್ಮಾಣವಾಗಿರುವ ಒಟ್ಟು 9 ಕಲಾಕೃತಿಗಳನ್ನು ದೇವರ ಮೂರ್ತಿ ಕೆತ್ತನೆಗೆ ಬಳಸಲಾಗುವ ಕೃಷ್ಣಶೀಲೆಗಳಿಂದ ನಿರ್ಮಿಸಲಾಗಿದೆ. ಒಟ್ಟು 2ಟನ್‌ ಕೃಷ್ಣ ಶಿಲೆಯ ಕಲ್ಲುಗಳನ್ನು ಮೈಸೂರಿನಿಂದ ತರಲಾಗಿದೆ. ದೇಶದಲ್ಲಿಯೇ ಬರೀ ಕೃಷ್ಣಶಿಲೆ ಕಲ್ಲುಗಳಿಂದಲೇ ಗಾಂಧೀಜಿಯ ಸ್ಮಾರಕ ನಿರ್ಮಿಸಿರುವ ಸ್ಥಳ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಶಿಲ್ಪಾ ಕಲಾವಿದೆ ಎಂ.ಸಂಜೀತಾ ತಂಡ 10 ತಿಂಗಳ ಕಾಲ ನಿರಂತರವಾಗಿ ಇಲ್ಲಿ ಕೆಲಸ ಮಾಡಿದೆ.   

ಸ್ಮಾರಕದಲ್ಲಿ ಏನೇನಿದೆ? 

    ಗಾಂಧೀಜಿ ಅವರ ಜೀವನದ 8 ಮುಖ್ಯ ಘಟನೆಗಳನ್ನು ಆಧರಿಸಿ ರಚಿಸಿದ ಕಲಾಕೃತಿಗಳೂ ಇಲ್ಲಿವೆ.  ಕೊಠಡಿಯ ಮಧ್ಯ ಭಾಗದಲ್ಲಿ, ವಿಶ್ರಾಂತಿ ಭಂಗಿಯಲ್ಲಿರುವ ಗಾಂಧೀಜಿ ಪ್ರತಿಮೆ 5 ಅಡಿ ಎತ್ತರವಿದ್ದು, 1.50 ಟನ್‌ ತೂಕವಿದೆ. ಖ್ಯಾತ ಬರಹಗಾರ ರವೀಂದ್ರನಾಥ ಟ್ಯಾಗೋರ್‌ ಜೊತೆ ಕೂತು ಚರ್ಚೆ ನಡೆಸುತ್ತಿರುವ,  ಬಾಲಕನ ಜೊತೆ ಗಾಂಧೀಜಿ ಕೋಲು ಹಿಡಿದು ಸಾಗುತ್ತಿರುವುದು, ಗಾಂಧೀಜಿ ನಮನ ಸಲ್ಲಿಸುತ್ತಿರುವುದು, ಉಪ್ಪಿನ ಸತ್ಯಾಗ್ರಹ ಹೋರಾಟ ಮನೋಹಕ ದೃಶ್ಯ, ಹೋರಾಟಗಾರರಾದ ಅಬಾ, ಮನು ಜೊತೆ ಸಾಗುತ್ತಿರುವ ಗಾಂಧೀಜಿ, ಸರ್ದಾರ್‌ ವಲ್ಲಬಾಯಿ ಪಾಟೀಲ್‌ ಮತ್ತು ಜವಾಹರಲಾಲ್‌ ನೆಹರು ಅವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು, ಕಸ್ತೂರಿ ಬಾ ಅವರ ಜೊತೆ ಚರಕ ಹಿಡಿದು ನೂಲು ತೆಗೆಯುತ್ತಿರುವುದು… ಹೀಗೆ ವೈವಿಧ್ಯಮಯವಾದ ಆಕೃತಿಗಳನ್ನು ಕೆತ್ತಿ ನಿಲ್ಲಿಸಲಾಗಿದೆ. 

Advertisement

ಗಾಂಧೀಜಿ ಹರಪನಹಳ್ಳಿಗೆ ಆಗಮಿಸಿದಾಗ, ಸ್ಥಳೀಯ ಮುಖಂಡರಾದ ಇಜಾರಿ ವಸುಪಾಲಪ್ಪ, ಇಜಂತಕರ ಶಂಕ್ರಪ್ಪ, ನೆಲ್ಲು ಕುದರಿ ಗುರುಬಸಪ್ಪ ಅವರು ಬೆಳ್ಳಿ ನಾಣ್ಯಗಳನ್ನು ಬೆಳ್ಳಿ ತಟ್ಟೆಯಲ್ಲಿಟ್ಟು ಗಾಂಧೀಜಿ ಅವರಿಗೆ ಅರ್ಪಿಸಿದ್ದರು. ಆಗ ಗಾಂಧೀಜಿ, ತಟ್ಟೆ ಸಹಿತ ಹರಾಜು ಹಾಕಿ,  ತಾವೇ ಹಣ ಕೊಟ್ಟು, ತಮ್ಮ ತಟ್ಟೆಗಳನ್ನು ಪಡೆದುಕೊಂಡರು. 1958ರಲ್ಲಿ ಆಚಾರ್ಯ ವಿನೋಭಾಬಾವೆಯವರು ಹರಪನಹಳ್ಳಿಯ ಪಾದಯಾತ್ರೆಯಲ್ಲಿ ಭಾಗವಹಿಸಿ, ಗಾಂಧೀಜಿ ತಂಗಿದ್ದ ಈ ಕೋಣೆಯಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಇಂಥ ವಿಶಿಷ್ಟ ಹಿನ್ನೆಲೆಯ ಕೊಠಡಿ ಇದೀಗ ಸ್ಮಾರಕವಾಗಿ ಬದಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next