Advertisement

ಎಸ್ಸೆಸ್‌ ಮೇಷ್ಟ್ರು, ಗಾಂಧೀಜಿ, ಎಚ್ಚೆನ್‌…

06:00 AM Jun 12, 2018 | Team Udayavani |

ಸಂದರ್ಶನ ಮುಗಿಸಿ ಎದ್ದು ಹೋಗುತ್ತಿರುವಾಗ ಎಚ್‌. ನರಸಿಂಹಯ್ಯನವರು ಹತ್ತಿರ ಕರೆದು, ಬೆನ್ನು ಚಪ್ಪರಿಸಿ- “ನೋಡು, ಮಕ್ಕಳ ಮೇಲೆ ಬಹಳಷ್ಟು ಕಾಳಜಿ ಇಟ್ಟುಕೊಂಡಿದ್ದೀಯ. ನಿನಗೆ ಒಳ್ಳೆಯದಾಗಲಿ, ಹೋಗಿ ಬಾ’ ಎಂದು ಹರಸಿದರು…

Advertisement

1968ರಲ್ಲಿ ನಡೆದ ಘಟನೆ. ಆಗ ವಿಜಯಪುರದ ಪಿ.ಡಿ.ಜೆ. ಪ್ರೌಢಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಉಡಾಳ ಗೆಳೆಯರ ಸ್ನೇಹ ಮಾಡಿ, ಅವ್ವ ದೇವರಿಗೆ ಮುಡುಪಿಟ್ಟ ಹಣವನ್ನು ಅವಳಿಗೆ ಗೊತ್ತಾಗದಂತೆ ಕದ್ದು, ಸಿನಿಮಾ ನೋಡುತ್ತಿದ್ದೆ. ಮುಂದೊಂದು ದಿನ ಅದು ಅವ್ವನಿಗೆ ಗೊತ್ತಾಗಿ, ಕೋಪದಿಂದ ಬೆನ್ನಿನ ಮೇಲೆ ಬಾಸುಂಡೆ ಮೂಡುವ ಹಾಗೆ ಬೆತ್ತದಿಂದ ಬಾರಿಸಿ, ನನ್ನನ್ನು ತಬ್ಬಿಕೊಂಡು ಅತ್ತಿದ್ದಳು. ಆಗ, ಪಶ್ಚಾತ್ತಾಪದಿಂದ- “ಇನ್ಮುಂದೆ ಕಳ್ಳತನ ಮಾಡೋದಿಲ್ಲ’ ಅಂತ ಅವ್ವನಿಗೆ ಭಾಷೆ ಕೊಟ್ಟೆ.

  ಆದರೆ, ಆ ಭಾಷೆ ಬಹಳ ದಿನ ಉಳಿಯಲಿಲ್ಲ. ಸಿನಿಮಾ ನೋಡದೆ ಮನಸ್ಸು ಚಡಪಡಿಸಿತು. ಶಾಲೆಯಲ್ಲಿ ಸ್ನೇಹಿತರ ಹಣ ಕದ್ದು ಸಿನಿಮಾ ನೋಡತೊಡಗಿದೆ. ಆಗಲೂ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದೆ. ಮರುಕ್ಷಣವೇ ಎಸ್ಸೆಸ್‌ (ಎಸ್‌.ಎಸ್‌. ಕುಲಕರ್ಣಿ) ಮಾಸ್ತರರ ಮುಂದೆ ಅವಮಾನದಿಂದ ತಲೆ ತಗ್ಗಿಸಿ ನಿಂತಿದ್ದೆ. ಅವರ ಮುಖ ಗಂಭೀರವಾಗಿತ್ತು. ಎಸ್ಸೆಸ್‌ ಮಾಸ್ತರು ಹೊಡೆಯುತ್ತಾರೆಂದು ಭಾವಿಸಿ ಗಾಬರಿಯಾಗಿದ್ದೆ. ಆದರೆ, ಹಾಗಾಗಲಿಲ್ಲ. ಅವರು ನನ್ನ ಬೆನ್ನ ಮೇಲೆ ನವಿರಾಗಿ ಕೈ ಆಡಿಸಿ, ನನ್ನ ಗುರಿಯ ಬಗ್ಗೆ ನಯವಾಗಿ ಎಚ್ಚರಿಸಿ, “ಮಧ್ಯಾಹ್ನ ಭಗವದ್ಗೀತೆ ಪಾಠಕ್ಕೆ ಬಾ’ ಎಂದು ಹೇಳಿದರು. ಅವರ ಮಾತಿನಂತೆ ಅಲ್ಲಿಗೆ ಹೋಗತೊಡಗಿದೆ. ಅಲ್ಲಿ ಅವರು ಹೇಳಿದ ಪ್ರತಿಯೊಂದು ಮಾತೂ ಮನಸ್ಸಿನ ಆಳಕ್ಕೆ ನಾಟಿತು. ಅವರು ಕೊಟ್ಟ ರಾಮಾಯಣ, ಮಹಾಭಾರತ ಹಾಗೂ ಗಾಂಧೀಜಿಯವರ ಪುಸ್ತಕಗಳನ್ನು ಶ್ರದ್ಧೆಯಿಂದ ಓದಿದೆ. ಅವುಗಳಲ್ಲಿನ ಮಾನವೀಯ ಮೌಲ್ಯಗಳನ್ನು ಅರಿತುಕೊಂಡೆ. ಮುಂದೆ ಶಾಲೆಯಲ್ಲಿ “ಆದರ್ಶ ವಿದ್ಯಾರ್ಥಿ’ ಎನಿಸಿಕೊಂಡೆ. ಆಗ ಅವ್ವನಿಗಾದ ಸಂತಸ ಅಷ್ಟಿಷ್ಟಲ್ಲ.

   ಮುಂದೊಂದು ದಿನ ನನ್ನ ಬಯಕೆಯಂತೆ ನಾನೂ ಮಾಸ್ತರನಾದೆ. ಮುದ್ದು ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾದೆ. 2001-02ರಲ್ಲಿ, ಬೆಂಗಳೂರಿನ ಆಯುಕ್ತರ ಕಚೇರಿಯಿಂದ ರಾಷ್ಟ್ರಪ್ರಶಸ್ತಿ ಆಯ್ಕೆ ಕುರಿತು ಸಂದರ್ಶನಕ್ಕೆ ಕರೆ ಬಂತು. ಸಂದರ್ಶನದಲ್ಲಿ ಆಯುಕ್ತರ ಜೊತೆ ಶಿಕ್ಷಣತಜ್ಞ, ಗಾಂಧೀವಾದಿ ಎಚ್‌. ನರಸಿಂಹಯ್ಯನವರೂ ಇದ್ದರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆ ಕೇಳುತ್ತಾ, “ಮಕ್ಕಳಿಗೆ ಶಿಕ್ಷೆ ಕೊಡುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?’ ಎಂದು ಕೇಳಿದರು. ಆಗ ನನಗೆ ಗಾಂಧೀಜಿಯವರು ನಡೆಸುತ್ತಿದ್ದ ವಾರ್ಧ ಶಾಲೆಯಲ್ಲಿ ನಡೆದ ಘಟನೆಯೊಂದು ನೆನಪಾಗಿ, ಅದನ್ನು ವಿವರಿಸಿದೆ.

   ಶಾಲೆಯಲ್ಲಿ ಬಹಳ ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಗೆ ಶಿಕ್ಷೆ ಕೊಡಲು ಅಲ್ಲಿನ ಶಿಕ್ಷಕರು ಗಾಂಧೀಜಿಯವರ ಅನುಮತಿ ಕೇಳಲು ಬಂದಾಗ, ಅವರು ಮಂದಹಾಸ ಬೀರುತ್ತಾ- “ಆಗಲಿ, ಶಿಕ್ಷೆ ಕೊಡಿ. ಆದರೆ ನಿಮ್ಮ ಮನಸ್ಸಿನಲ್ಲಿ ತಾಯಿಯ ಪ್ರೇಮ ಇರಲಿ’ ಎಂದರಂತೆ. ಈ ಮಾತುಗಳನ್ನು ತುಂಬಾ ಭಾವುಕನಾಗಿ ಹೇಳಿದೆ.

Advertisement

  ಹೀಗೆ ನಾನು ಗಾಂಧೀಜಿಯವರು ಪಾಲಿಸಿದ ಸಮಯಪಾಲನೆ, ಅಪರಿಗ್ರಹ ಹಾಗೂ ಶಿಕ್ಷಣ ಕ್ರಮ ಮೊದಲಾದ ಪ್ರಮುಖ ಘಟನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಯಾವ ರೀತಿ ಬಿಂಬಿಸಬೇಕೆಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದಾಗ ಎಲ್ಲರ ಮುಖ ಅರಳಿತು.
 ಸಂದರ್ಶನ ಮುಗಿಸಿ ಎದ್ದು ಹೋಗುತ್ತಿರುವಾಗ ಎಚ್‌. ನರಸಿಂಹಯ್ಯನವರು ಹತ್ತಿರ ಕರೆದು, ಬೆನ್ನು ಚಪ್ಪರಿಸಿ- “ನೋಡು, ಮಕ್ಕಳ ಮೇಲೆ ಬಹಳಷ್ಟು ಕಾಳಜಿ ಇಟ್ಟುಕೊಂಡಿದ್ದೀಯ. ನಿನಗೆ ಒಳ್ಳೆಯದಾಗಲಿ, ಹೋಗಿ ಬಾ’ ಎಂದು ಹರಸಿದರು.

  “ಉತ್ತಮ ಶಿಕ್ಷಕ’ ರಾಷ್ಟ್ರಪ್ರಶಸ್ತಿಯನ್ನು ಆಗಿನ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಅವರಿಂದ, ಗಾಂಧಿ ಟೊಪ್ಪಿ ಧರಿಸಿಕೊಂಡೇ ಸ್ವೀಕರಿಸಿದೆ. ಇದಕ್ಕೆಲ್ಲಾ ಪ್ರೇರಣಾ ಶಕ್ತಿ ನನ್ನ ಎಸ್ಸೆಸ್‌ ಮಾಸ್ತರರು ಅಂತ ಬೇರೆ ಹೇಳಬೇಕಾಗಿಲ್ಲ. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಆದರ್ಶವನ್ನು ಈಗಲೂ ನನ್ನ ಹೃದಯದಲ್ಲಿ  ಸದಾ ಬಚ್ಚಿಟ್ಟುಕೊಂಡಿದ್ದೇನೆ.

ಚಂದ್ರಕಾಂತ ಮ. ತಾಳಿಕೋಟಿ

Advertisement

Udayavani is now on Telegram. Click here to join our channel and stay updated with the latest news.

Next