Advertisement

ರಚನೆಯಾಗಿ ಎಂಟು ವರ್ಷಕ್ಕೇ ಸೋಂದಾ ಗ್ರಾಪಂಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ

06:44 PM Mar 30, 2023 | Team Udayavani |

ಶಿರಸಿ: ರಚನೆಯಾಗಿ ಎಂಟೇ ವರ್ಷದಲ್ಲಿ ತಾಲೂಕಿನ ಸೋಂದಾ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದೆ.
ಉದ್ಯೋಗ ಖಾತ್ರಿ, 15 ನೇ ಹಣಕಾಸು ಯೋಜನೆ , ಕರ ವಸೂಲಿ, ಕೋವಿಡ್ ನಿರ್ವಹಣೆ ಮುಂತಾದ ಕಾರ್ಯಕ್ರಮಗಳ ಪ್ರಗತಿಯನ್ನು ಆಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2021-22 ನೇ ಸಾಲಿನ ಪುರಸ್ಕಾರಕ್ಕೆ ಸೋಂದಾವನ್ನು ಆಯ್ಕೆ ಮಾಡಿದೆ.

Advertisement

ಹುಲೇಕಲ್ ಗ್ರಾಮ ಪಂಚಾಯಿತಿಯಿಂದ ಭಾಗವಾಗಿ 2015 ರಲ್ಲಿ ಪ್ರತ್ಯೇಕ ಸೋಂದಾ ಗ್ರಾಪಂ ರಚನೆಯಾಯಿತು. ಒಟ್ಟು 4 ಕಂದಾಯ ಗ್ರಾಮಗಳಿದ್ದು, 2800 ರಷ್ಟು ಜನಸಂಖ್ಯೆಯಿತಿದೆ. ಎಂಟು ಜನ ಚುನಾಯಿತ ಸದಸ್ಯರಿದ್ದಾರೆ. ಮಠ, ಮಂದಿರಗಳಂಥ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ, ನೈಸರ್ಗಿಕ ಪ್ರವಾಸಿ ತಾಣಗಳನ್ನು ಹೊಂದಿದ ಸುಂದರ ಗ್ರಾಮ ಇದಾಗಿದೆ.

ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ, ಶಿರಸಿ ತಾಲೂಕು ಪಂಚಾಯಿತಿ ಮಾರ್ಗದರ್ಶನದಲ್ಲಿ ಸ್ವಚ್ಛ ಭಾರತ ಮಿಷನ್ ಸಹಾಯಧನದೊಂದಿಗೆ ಗ್ರಾಮದ ಸೋದೇ ವಾದಿರಾಜ ಮಠದಲ್ಲಿ ರಾಜ್ಯದ ಮೊದಲ ಸಮುದಾಯ ಗೋಬರ್‌ಧನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿನ ಮಾದರಿಯನ್ನು ಆಧರಿಸಿ ಜಿಲ್ಲೆಯ ಹಾಗೂ ರಾಜ್ಯದ ಇತರೆಡೆ ಈ ಘಟಕಗಳು ಈಗ ನಿರ್ಮಾಣವಾಗುತ್ತಿವೆ. ವಾದಿರಾಜ ಮಠ ಹಾಗೂ ಸದಾಶಿವ ದೇವಸ್ಥಾನದಲ್ಲಿ ತಲಾ 3 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಹುಲೇಕಲ್ ಗ್ರಾಪಂ ಸಹಯೋಗದೊಂದಿಗೆ ಸಮರ್ಪಕ ಘನ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

2021-22 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 4 ಸಾವಿರ ಮಾನವದಿನಗಳ ಗುರಿ ಹೊಂದಲಾಗಿತ್ತು. 9200 ಮಾನವದಿನವನ್ನು ಬಳಸಿಕೊಳ್ಳುವ ಮೂಲಕ ಗ್ರಾಪಂ ಗುರಿ ಮೀರಿ ಸಾಧನೆ ಮಾಡಿದೆ. ಕೋವಿಡ್ ಸಂಕಷ್ಟ ಕಾಲದಲ್ಲೂ 5.6 ಲಕ್ಷ ರೂ. ಸಂಪೂರ್ಣ ತೆರಿಗೆ (ಶೇ.100) ರಷ್ಟು ವಸೂಲಿ ಮಾಡಲಾಗಿತ್ತು. ಅಲ್ಲದೆ, 15 ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಪಂ ತಾಲೂಕಿನ ಇತರ ಗ್ರಾಪಂಗಳಿಗೆ ಮಾದರಿಯಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮನೆಗಳಿಗೆ ತರಕಾರಿ, ಔಷಽಗಳನ್ನು ತಲುಪಿಸುವುದು, ಆರೋಗ್ಯ ಸೇವೆ ಒದಗಿಸಿದ್ದು, ಸೇರಿ ಉತ್ತಮ ನಿರ್ವಹಣೆಯನ್ನೂ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ.

ಉಪಾಧ್ಯಕ್ಷರು, ಎಲ್ಲ ಸದಸ್ಯರು, ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಹಾಗೂ ಮುಖ್ಯವಾಗಿ ಜನರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಗಾಂಧಿ ಗ್ರಾಮ ಪುರಸ್ಕಾರದ ಮೂಲಕ ನಮ್ಮ ಕಾರ್ಯಕ್ಕೆ ಮನ್ನಣೆ ದೊರಕಿದಂತಾಗಿದೆ. ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಸಾಧನೆ ಮಾಡಲು ಹುಮ್ಮಸ್ಸು ಬಂದಿದೆ.
~ಮಮತಾ ಚಂದ್ರರಾಜ ಜೈನ್ , ಗ್ರಾ.ಗ್ರಾಪಂ ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next