ಲಕ್ಷ್ಮೇಶ್ವರ: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ, ಜನರ ಜೀವನಮಟ್ಟ ಸುಧಾರಣೆಗಾಗಿ ಸರಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಮಾಡಿದ
ಗ್ರಾಪಂಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಪ್ರತಿವರ್ಷ ಗಾಂಧಿ ಜಯಂತಿಯಂದು “ಗಾಂಧಿ ಗ್ರಾಮ’ ಪುರಸ್ಕಾರ ನೀಡುತ್ತದೆ. ಈ ಪುರಸ್ಕಾರಕ್ಕೆ ತಾಲೂಕಿನ ಶಿಗ್ಲಿ ಗ್ರಾಪಂ 3ನೇ ಬಾರಿಗೆ ಪಾತ್ರವಾಗಿದೆ. ಅ. 2ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 5 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪಡೆಯಲಿದೆ. ಈ ಮೂಲಕ 2015-16, 2017-18 ಮತ್ತು 2018-19ರಲ್ಲಿ ಪುರಸ್ಕಾರ ಪಡೆಯುವ ಮೂಲಕ ಗಮನ ಸೆಳೆಯಲಿದೆ.
ಪಂಚತಂತ್ರ ತಂತ್ರಾಂಶದ ಮೂಲಕ ರೂಪಿಸಿರುವ ಪ್ರಶ್ನಾಳಿಗಳಿಗೆ ತಕ್ಕಂತೆ ಗ್ರಾಪಂ ಅನುಷ್ಠಾನಗೊಳಿಸಿದ ಶೇಕಡಾವಾರು ಸಾಧನೆಯ ಉತ್ತರಗಳನ್ನು ಆನ್‌ಲೈನ್ ಮೂಲಕ ಉತ್ತರ ಪಡೆದು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಮೊದಲ
ಹಂತದಲ್ಲಿ ಉತ್ತಮ ಅಂಕ ಪಡೆದ ಪ್ರತಿ ತಾಲೂಕಿನ 5 ಗ್ರಾಪಂಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ತಾಲೂಕಿನ ಯಳವತ್ತಿ, ದೊಡೂರ, ಹೆಬ್ಟಾಳ, ಬೆಳ್ಳಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಇದರಲ್ಲಿ ಉತ್ತಮ ಸಾಧನೆ ಮಾಡಿದ ಒಂದು ಗ್ರಾಪಂ ಆಯ್ಕೆಗೆ ಆಯಾ ಜಿಪಂ ಆಯ್ಕೆ ಸಮಿತಿ ರಚಿಸಿ ಒಂದು ಗ್ರಾಪಂ ಹೆಸರನ್ನು ಜಿಪಂರಾಯಿ ಇಲಾಖೆಗೆ ಕಳುಹಿಸಲಾಗುತ್ತದೆ. ಇದರಲ್ಲಿ ಗ್ರಾಪಂ 139 ಅಂಕಗಳನ್ನು ಶಿಗ್ಲಿ ಪಡೆದು ಆಯ್ಕೆಯಾಗಿದೆ.
ತಾಲೂಕಿನಲ್ಲಿಯೇ ದೊಡ್ಡ ಗ್ರಾಪಂ ಶಿಗ್ಲಿ ಗ್ರಾಮವು ಸುಮಾರು 2011ರ ಜನಗಣತಿ ಪ್ರಕಾರ 11159 ಸಾವಿರ ಜನಸಂಖ್ಯೆ ಹೊಂದಿ ಶೈಕ್ಷಣಿಕ, ಔದ್ಯೋಗಿಕವಾಗಿ ಮುಂದುವರೆದಿದೆ. ಒಟ್ಟು 28 ಸದಸ್ಯರು ಮತ್ತು 8 ವಾರ್ಡ್‌ನ ವ್ಯಾಪ್ತಿಯನ್ನು ಹೊಂದಿದೆ. 2365 ಕುಟುಂಬಗಳಿದ್ದು, ದೊಡ್ಡ ಗ್ರಾಮವಾದರೂ ಲಭ್ಯವಿರುವ ಪೌರಕಾರ್ಮಿಕರನ್ನು ಬಳಸಿಕೊಂಡು ಗ್ರಾಮ ನೈರ್ಮಲ್ಯ ಕಾಪಾಡುವ ಮತ್ತು ಜಾಗೃತಿ ಮೂಡಿಸುವಲ್ಲಿ ಸ್ಥಳೀಯ ಗ್ರಾಪಂ ಯಶಸ್ವಿಯಾಗಿದೆ. ಸರಕಾರದ ಪ್ರೋತ್ಸಾಹಧನ, ಎನ್‌ಆರ್ ಇಜಿ ಯೋಜನೆ, 14ನೇ ಹಣಕಾಸು ಅನುದಾನಗಳನ್ನು ಸಮರ್ಪಕವಾಗಿ ಬಳಸಲಾಗಿದೆ.
ತಮ್ಮ ಅಧಿಕಾರಾವಧಿಯಲ್ಲಿಯೇ 3ನೇ ಬಾರಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸ ತಂದಿದೆ. ಇದಕ್ಕೆ ಎಲ್ಲ ಗ್ರಾಪಂ ಸದಸ್ಯರ, ಪಿಡಿಒ ಮತ್ತು ಸಿಬ್ಬಂದಿ ಮತ್ತು ಗ್ರಾಮದ ಹಿರಿಯರ, ಜಿಪಂ ಸದಸ್ಯರ ಸಹಕಾರ ಕಾರಣವಾಗಿದೆ.
-ರಾಧಕ್ಕ ಎಸ್. ಮುದಗಲ್, ಗ್ರಾಪಂ ಅಧ್ಯಕ್ಷ