Advertisement

ಜಾಗತಿಕ ಸಮಸ್ಯೆಗಳಿಗೆ ಗಾಂಧಿ ಮಾರ್ಗ ಪರಿಹಾರ

12:13 PM Nov 19, 2019 | Suhan S |

ಧಾರವಾಡ: ಮಹಾತ್ಮಾ ಗಾಂಧಿಧೀಜಿಯವರ ಸನಾತನ ಸಂಸ್ಕೃತಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಮಾರ್ಗಗಳಿದ್ದು, ಈ ಗಾಂಧಿ ಮಾರ್ಗದಲ್ಲಿ ಜಾಗತಿಕ ತಾಪಮಾನ ಏರಿಕೆ ಸಮಸ್ಯೆಗೂ ಪರಿಹಾರಗಳಿವೆ. ಅವುಗಳನ್ನು ಮನಪೂರ್ವಕವಾಗಿ ಅನುಷ್ಠಾನ ಮಾಡುವ ಸಂಕಲ್ಪ, ಮನೋಭಾವನೆ ನಮ್ಮೆಲ್ಲರಲ್ಲಿ ಬರಬೇಕಾಗಿದೆ ಎಂದು ಜಲತಜ್ಞ ಡಾ| ರಾಜೇಂದ್ರ ಸಿಂಗ್‌ ಹೇಳಿದರು.

Advertisement

ನಗರದ ಆಲೂರು ಭವನದಲ್ಲಿ ವಾರ್ತಾ ಇಲಾಖೆ ಹಾಗೂ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ  ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಸಮಾರೋಪ, 151ನೇ ಜಯಂತಿ ಅಂಗವಾಗಿ “ಗಾಂಧಿ  ಮಾರ್ಗ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನದಿ, ಭೂಮಿಗೆ ನಾವು ತಾಯಿಯ ಸ್ಥಾನ ನೀಡಿದ್ದೇವೆ. ತಾಯಿಗೆ ತೋರುವ ಪ್ರೀತಿ ಗೌರವಗಳ ಜೊತೆಗೆ ನದಿ, ಭೂಮಿ, ನಿಸರ್ಗಗಳಿಗೆ ಚಿಕಿತ್ಸೆಯ ಅಗತ್ಯವೂ ಇದೆ. ನೀರು ಎಂದರೆ ಜೀವನ, ನಿಸರ್ಗ ಎಂದರೆ ಜನನಿ, ಗಾಂಧಿ ಮಾರ್ಗ ಎಂದರೆ ಅದೊಂದು ಪ್ರವಾಹವಾಗಿ ಪಂಚಭೂತಗಳನ್ನು ರಕ್ಷಿಸುವ ಕಾರ್ಯವಾಗಿದೆ. ಗಾಂಧೀಜಿಯವರ ಮಾರ್ಗವು ಜಡವಲ್ಲ. ಅದು ಸದಾಚಲನಶೀಲವಾಗಿ ಹರಿಯುವ ಸಂಸ್ಕೃತಿಯಾಗಿದೆ. ನೀರು, ನಿಸರ್ಗ, ಆರ್ಥಿಕತೆ, ಪ್ರಗತಿ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಗಾಂಧೀಜಿ ಬೆಳಕು ಚೆಲ್ಲಿದ್ದಾರೆ ಎಂದರು.

ಬಡ ರೈತರು ನಿಜವಾಗಿಯೂ ಗಾಂಧಿ  ಮಾರ್ಗದಲ್ಲಿ ಸಾಗುತ್ತಿದ್ದಾರೆ. ನಿಸರ್ಗವನ್ನು ಅತಿಕ್ರಮಿಸಿ, ಮಾಲಿನ್ಯಗೊಳಿಸಿ ಗ್ರಾಮ, ನಗರಗಳನ್ನು ರೋಗಗ್ರಸ್ತ ಮಾಡುತ್ತಿರುವವರು ಉಳ್ಳವರ ವರ್ಗವೇ ಆಗಿವೆ. ಬಾಪು, ಕಸ್ತೂರಬಾ ಮತ್ತು ಅವರ ಕೋಟ್ಯಂತರ ಅನುಯಾಯಿಗಳು ತಮ್ಮ ಜೀವನದುದ್ದಕ್ಕೂ ನೀರು, ನಿಸರ್ಗಕ್ಕಾಗಿ ಬದುಕು ಸವೆಸಿದ್ದಾರೆ. ಬತ್ತಿ ಹೋದ ನದಿ, ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿಯೊಬ್ಬರೂ ನಿಸರ್ಗ ಉಳಿಸಲು ಸಂಕಲ್ಪ ಮಾಡಿ, ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು. ಇಲ್ಲವಾದರೆ ಮುಂದೊಂದು ದಿನ ನೀರನ್ನೂ ಸಹ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ರೇಷನ್‌ ಕಾರ್ಡಿನ ಮೂಲಕ ಪಡೆಯುವ ಕಾಲ ಬರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ  ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ಅಹಿಂಸಾತ್ಮಕಬದುಕಿನ ಮೂಲಕ ಗಾಂಧಿಧೀಜಿಯವರನ್ನು ಅನುಸರಿಸಿದಾಗ ಮಾತ್ರ ನೀರು, ನಿಸರ್ಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

Advertisement

ಡಿಸಿ ದೀಪಾ ಚೋಳನ್‌, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಮಲಾತಾಯಿ ಕಡಗದ ಮಾತನಾಡಿದರು. ಡಾ|ಅರುಣಾ ಹಳ್ಳಿಕೇರಿ, ಕವಿವಿ ವಿಶ್ರಾಂತ ಕುಲಪತಿ ಡಾ| ಪ್ರಮೋದ ಗಾಯಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಇದ್ದರು. ರೈತರು, ವಿದ್ಯಾರ್ಥಿಗಳು ಹಾಗೂಸಾರ್ವಜನಿಕರು ಜಲ ಪ್ರತಿಜ್ಞೆ ಸ್ವೀಕರಿಸಿದರು.

ಅನಿಲ ಮೇತ್ರಿ ಮತ್ತು ತಂಡ, ಬಾಲಬಳಗದ ಶಾಲಾ ಮಕ್ಕಳು ಗಾಂಧಿ ಭಜನೆಗಳನ್ನು ಪ್ರಸ್ತುತ ಪಡಿಸಿದರು. ಮಹದೇವಗೌಡ ಹುತ್ತನಗೌಡ್ರ ಹಾಗೂ ಆರತಿ ದೇವಶಿಖಾಮಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next