ಬೆಂಗಳೂರು: ನಮ್ಮ ಸರ್ಕಾರ 4 ಗ್ಯಾರಂಟಿಗಳನ್ನು ಕೊಟ್ಟಿದೆ. ಐದನೇ ಗ್ಯಾರಂಟಿಯು ಜನವರಿಯಲ್ಲಿ ಜಾರಿಗೆ ಬರಲಿದೆ. ಇದೆಲ್ಲದರ ಹಿಂದೆ ಗಾಂಧೀಜಿ ಅವರ ಚಿಂತನೆ, ಪ್ರೇರಣೆ ಇದೆ. ಮಹಿಳಾ ಸಬಲೀಕರಣ ಆಗಬೇಕು ಎಂಬ ಅವರ ಚಿಂತನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಸಾಮಾಜಿಕ ಶಕ್ತಿಯನ್ನು ಕಾಂಗ್ರೆಸ್ ಕೊಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇನ್ನು ಕರ್ನಾಟಕದಲ್ಲಿ ಕೈಮಗ್ಗ ಉತ್ಪನ್ನಗಳ ಕ್ಷೇತ್ರವಾದ ಬದನವಾಳು ಗ್ರಾಮಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಸಹ ಭೇಟಿ ನೀಡಿ ಈ ಗ್ರಾಮದ ಅಭಿವೃದ್ಧಿ ಮಾಡಬೇಕು ಎಂದಿದ್ದರು. ಅದರಂತೆ ಬದನವಾಳು ಗ್ರಾಮದಲ್ಲಿನ ಖಾದಿ ಗ್ರಾಮೋದ್ಯೋಗ ಸ್ಥಳವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ 223 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ, 4 ಗ್ರಾಪಂಗಳಿಗೆ ವಿಶೇಷ ಗಾಂಧಿ ಗ್ರಾಮ ಪುರಸ್ಕಾರ, 15 ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿಗಳನುನ ನೀಡಲಾಯಿತು. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ಗ್ರಾಮ ಪಂಚಾಯತಿಗಳಿಗೆ ಪ್ರಮಾಣಪತ್ರದ ಜತೆಗೆ 5 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನೂ ವಿತರಿಸಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಗೋವಿಂದರಾಜು, ಮೇಲ್ಮನೆ ಮುಖ್ಯ ಸಚೇತಕ ಸಲೀಂ ಅಹ್ಮದ್ ಸೇರಿದಂತೆ ಇನ್ನಿತರರು ಇದ್ದರು.
ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಸ್ವತ್ತು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಪಂಚಾಯಿತಿಗಳಿಗೆ ತಮ್ಮ ಶಕ್ತಿ ಏನೆಂಬುದು ಗೊತ್ತಿಲ್ಲ. ಪಂಚಾಯಿತಿಗಳಿಗೆ ಸರ್ಕಾರ ದೊಡ್ಡ ಅಧಿಕಾರ ಕೊಟ್ಟಿದೆ. ಆಸ್ತಿ ಸೃಜನೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮೀಣ ಪ್ರದೇಶದ ಶೇ.93 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ, ಶೇ.94 ರಷ್ಟು ಜನರಿಗೆ ಗೃಹಜ್ಯೋತಿ ಹಾಗೂ ಶೇ.100 ರಷ್ಟು ಮಹಿಳೆಯರಿಗೆ ಶಕ್ತಿ ಯೋಜನೆಯ ಲಾಭ ಸಿಗುತ್ತಿದೆ. ಭೂಮಿ ಯೋಜನೆಯಂತೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವತ್ತುಗಳ ದಾಖಲೀಕರಣ ಆಗಬೇಕು. ತೆರಿಗೆ ವ್ಯಾಪ್ತಿಗೆ ಅವುಗಳನ್ನು ತಂದು ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು. ಅಧಿಕಾರಿಗಳು ಗುತ್ತಿಗೆ, ಕಮಿಶನ್ ಹಿಂದೆ ಬೀಳದೆ ಉತ್ತಮ ಅಭ್ಯಾಸ ಇಟ್ಟುಕೊಳ್ಳಬೇಕು. ಕೇಂದ್ರ ಸ್ಥಾನದಲ್ಲಿ ಸದಾ ಇರಬೇಕು. ಜನರು ನಿಮಗಾಗಿ ಹುಡುಕಾಟ ನಡೆಸಬಾರದು ಎಂದು ತಾಕೀತು ಮಾಡಿದರು.