Advertisement

ನಿಷ್ಕ್ರಿಯ ಪ್ರತಿರೋಧವು ‘ಸತ್ಯಾಗ್ರಹ’ಕ್ಕೆ ಸಮಾನಾರ್ಥಕವಲ್ಲ: ಡಾ ಚಂದನ್ ಗೌಡ

03:41 PM Oct 04, 2021 | Team Udayavani |

ಮಣಿಪಾಲ: ಮಹಾತ್ಮಾ ಗಾಂಧಿಯವರು ಬರೆದಿರುವ ಪುಟ್ಟ ಪುಸ್ತಕ  ‘ಹಿಂದ್ ಸ್ವರಾಜ್’, ಆಧುನಿಕ ನಾಗರಿಕತೆಯ ಕಟು ಮೆಟೀರಿಯಲಿಸ್ಟ್ ಮತ್ತು ಕನ್ಸೂಮರಿಸ್ಟ್ ಮನಸ್ಥಿತಿಗೆ ಪರ್ಯಾಯವಾಗಿ ನೈತಿಕ ಮೌಲ್ಯಗಳೇ ಆಧಾರವಾಗಿರುವ ನಾಗರೀಕತೆಯನ್ನು ಪ್ರತಿಪಾದಿಸುತ್ತದೆ ಎಂದು ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC), ಬೆಂಗಳೂರಿನ ಪ್ರೊಫೆಸರ್ ಚಂದನ್ ಗೌಡ ನುಡಿದರು.

Advertisement

ಅವರು ಅ.2(ಶನಿವಾರದಂದು) ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನ ‘ಗಾಂಧಿ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ‘(GCPAS) ಗಾಂಧಿ ಜಯಂತಿಯ ಸಂದರ್ಭದಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ನಮ್ಮ ಸಮಯದಲ್ಲಿ ಹಿಂದ್ ಸ್ವರಾಜ್’ ಕುರಿತು ಉಪನ್ಯಾಸವನ್ನು ನೀಡಿ ಮಾತನಾಡಿದರು. ಡಾ ಚಂದನ್ ಗೌಡ ಬೆಂಗಳೂರಿನ ಐಎಸ್‌ಇಸಿಯಲ್ಲಿ ರಾಮಕೃಷ್ಣ ಹೆಗಡೆ ಚೇರ್ ನ ಮುಖ್ಯಸ್ಥರು.

1909 ರಲ್ಲಿ ಗಾಂಧೀಜಿಯವರು ಬರೆದ ಈ ಪುಟ್ಟ ಪುಸ್ತಕ ಅತೀಯಾಗಿ ಏರುತ್ತಿರುವ ಮಟೀರಿಯಲಿಸ್ಟ್ ಮತ್ತು ಕನ್ಸೂಮರಿಸ್ಟ್ ಮನೋಭಾವವು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಮತ್ತು ವಿವಿಧ ರೀತಿಯ ಹಿಂಸೆಗಳಂತಹ ವಿಪತ್ತಿನ ಹಾದಿಯಲ್ಲಿ ನಾಗರಿಕತೆಯನ್ನು ಕೊಂಡೊಯ್ಯುತ್ತಿರುವ ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಗಾಂಧೀಜಿಯವರು ‘ಸ್ವರಾಜ್’ – ಒಳ ಮತ್ತು ಹೊರಗಿನ ಸ್ವಯಂ-ಆಡಳಿತ, ನಾಗರಿಕತೆಯನ್ನು ದುರಂತದಿಂದ ರಕ್ಷಿಸುವ ನೈತಿಕ ಆಧಾರವಾಗಬಲ್ಲದು ಎಂದು ಯೋಚಿಸುತ್ತಿದ್ದರು. ಅಹಿಂಸಾ ಮಾರ್ಗದ ಮೂಲಕವೇ ಅಪೇಕ್ಷಣೀಯವಾದದ್ದನ್ನು ಸಾಧಿಸುವುದು ಗಾಂಧೀಜಿಗೆ ಅತ್ಯಂತ ಮಹತ್ವದ್ದಾಗಿತ್ತು ಎಂದು ಪ್ರೊ. ಚಂದನ್ ಹೇಳಿದರು.

‘ಹಿಂದ್ ಸ್ವರಾಜ್’ ದ ಓದಿನ ಜೊತೆಗೆ ಅದೇ ದಾರಿಯಲ್ಲಿ ಗಾಂಧೀಜಿಯವರ ಪುನರ್ನಿರ್ಮಾಣದ ಚಿಂತನೆಗಳನ್ನು ಅವಲೋಕಿಸುವ ಇನ್ನೊಂದು ಸಣ್ಣ ಪಠ್ಯ ‘ಕನ್ಸ್ ಸ್ಟ್ರಕ್ಟಿವ್ ಪ್ರೋಗ್ರಾಮ್ಸ್'(ರಚನಾತ್ಮಕ ಕಾರ್ಯಕ್ರಮಗಳು)ನ್ನು ಓದಬೇಕು ಎಂದು ಅವರು ಭಾವಿಸಿದರು.

Advertisement

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶದಲ್ಲಿ ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆ ಅಹಿಂಸೆಯ ದಾರಿಯಲ್ಲಿ ಸಾಗುವವರೆಗೂ ತನ್ನ ನೈತಿಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಷ್ಕ್ರಿಯ ಪ್ರತಿರೋಧವು ‘ಸತ್ಯಾಗ್ರಹ’ಕ್ಕೆ ಸಮಾನಾರ್ಥಕವಲ್ಲ ಎಂದು ಅವರು ಭಾವಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕರಾದ ಪ್ರೊ.ವರದೇಶ ಹಿರೇಗಂಗೆ, ಸರ್ವೋದಯವೇ ಗಾಂಧೀಜಿಯವರ ಅಂತಿಮ ಆದರ್ಶವಾಗಿದ್ದು, ಅದು ಪ್ರತಿಯೊಬ್ಬರ ಮತ್ತು ಪ್ರತಿಯೊಂದರ ಕಲ್ಯಾಣವನ್ನು ಒಳಗೊಂಡಿದೆ – ಪುರುಷರು, ಮಹಿಳೆಯರು, ಎಲ್ಲಾ ಜಾತಿ, ವರ್ಗಗಳು, ಪ್ರದೇಶ, ಧರ್ಮ, ದೇಶ, ಖಂಡ, ಪ್ರಕೃತಿ, ಸಂಸ್ಕೃತಿ, ಸಸ್ಯ, ಪ್ರಾಣಿ, ನದಿ ಮತ್ತು ಪರ್ವತಗಳೆಲ್ಲವೂ ಇದರ ಭಾಗ ಎಂದರು.

ಪ್ರೊಫೆಸರ್ ಫಣಿರಾಜ್,ಪ್ರೊಫೆಸರ್ ತುಂಗೇಶ್, ಬೆನಿಟಾ ಫೆರ್ನಾಂಡಿಸ್ ಮತ್ತು ಅನೇಕರು ಇವತ್ತಿನ ಚರ್ಚೆಯಲ್ಲಿ ಭಾಗವಹಿಸಿದ್ದರು. ಜೂಡಿ ಫೇಬರ್ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ ಬಾಸ್ರಿ – ‘ವೈಷ್ಣವ ಜನತೋ’ ಮೂಲ ಮತ್ತು ಕನ್ನಡ ಅವತರಣಿಕೆಗಳನ್ನು ಹಾಡಿದರು. ಮರಿಯಮ್ ರಾಯ್ ಧನ್ಯವಾದಗಳನ್ನು ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next