Advertisement

ಊಹಾತೀತ ಗಾಂಧಿ: ಡಾ|ನಂದಕಿಶೋರ್‌ ಬಣ್ಣನೆ

01:25 AM Oct 03, 2018 | Team Udayavani |

ಉಡುಪಿ: ಗಾಂಧೀಜಿಯವರನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಅವರನ್ನು ಧಾರ್ಮಿಕರು, ರಾಜಕಾರಣಿ, ವಕೀಲರು, ರಾಷ್ಟ್ರೀಯ ಆಂದೋಲನ ಕಾರರು, ಮೆನೇಜ್ಮೆಂಟ್‌ ಗುರು ಎಂದೂ ಬಣ್ಣಿಸುವವರಿದ್ದಾರೆ. ಹೀಗೆಯೇ ಎಂದು ವ್ಯಾಖ್ಯಾನಿಸುವುದು ಕಷ್ಟ. ಶ್ರೀಕೃಷ್ಣನೂ ಹೀಗೆ ಬೇರೆ ಬೇರೆ ವ್ಯಕ್ತಿತ್ವ ಹೊಂದಿದ್ದ ಎಂದು ಮಣಿಪಾಲ ವಿ.ವಿ. ಜಿಯೋಪಾಲಿಟಿಕ್ಸ್‌ ವಿಭಾಗದ ಪ್ರಾಧ್ಯಾಪಕ ಡಾ|ನಂದಕಿಶೋರ್‌ ಹೇಳಿದರು.

Advertisement

ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ ಗಾಂಧಿ ಜಯಂತಿಯಲ್ಲಿ ಮುಖ್ಯ ಉಪನ್ಯಾಸ ನೀಡಿದ ಅವರು, ಮುಂದಿನ ಪೀಳಿಗೆ ಕುರಿತು ಚಿಂತನೆ ನಡೆಸುವ ಮುತ್ಸದ್ದಿ ಮತ್ತು ಮುಂದಿನ ಚುನಾವಣೆ ಕುರಿತು ಚಿಂತನೆ ನಡೆಸುವ ರಾಜಕಾರಣಿಗಿಂತಲೂ ಮಿಗಿಲಾದ ವ್ಯಕ್ತಿತ್ವ ಗಾಂಧೀಜಿಯವರದ್ದು. ಅವರಿಗೆ ನೋಬೆಲ್‌ ಪಾರಿತೋಷಕ ಬರಲಿಲ್ಲವೆಂದರೆ ಅವರು ಊಹೆಗೆ ನಿಲುಕದವರು ಎಂದರು. ಪ್ರಾಂಶುಪಾಲ ಡಾ|ಎಂ.ಜಿ.ವಿಜಯ್‌ ಅಧ್ಯಕ್ಷತೆ ವಹಿಸಿದ್ದರು. ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರ ಸಂಯೋಜಕ ಯು.ವಿನೀತ್‌ ರಾವ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು.

ಗಾಂಧೀಜಿ ಏಕೆ, ಹೇಗೆ ವಿಭಿನ್ನ?
ಅವರು ಸಾಮಾನ್ಯರ ಕಾಮನ್‌ಸೆನ್ಸ್‌ಗೆ ವಿರುದ್ಧವಾಗಿ ನಡೆದವರು. ನಾವು ಬುದ್ಧಿ ಬೆಳೆಯುತ್ತ ಹೊಸ ಹೊಸ ಬಟ್ಟೆಗಳನ್ನು ಧರಿಸಿದರೆ, ಅವರು ಮೊದಲು ಆಧುನಿಕ ದಿರಿಸುಗಳನ್ನು ಧರಿಸಿ ಕೊನೆಗೆ ಅರೆ ಬಟ್ಟೆ ತೊಟ್ಟವರು. ಅವರು ಆಧುನಿಕ ಜೀವನವನ್ನು ಮೊದಲು ಸ್ವೀಕರಿಸಿ ಬಳಿಕ ತತ್ವಜ್ಞಾನದೆಡೆಗೆ ವಾಲಿದವರು. ನಾವು ಕುಡಿತವನ್ನು ಪ್ರತಿಷ್ಠೆ ಎಂದು ಒಪ್ಪಿ ನಡೆದುಕೊಳ್ಳುತ್ತಿದ್ದೇವೆ. ಗಾಂಧೀಜಿ ಮೊದಲು ಧೂಮಪಾನ ಮಾಡಿ ಕೊನೆಗೆ ಕಠಿನ ಸಸ್ಯಾಹಾರಿಯಾದವರು. ಆಫ್ರಿಕಾದಲ್ಲಿ ಅವಮಾನವಾದಾಗ ಅದರಿಂದಲೇ ಸಕಾರಾತ್ಮಕ ಹೋರಾಟವನ್ನು ಆರಂಭಿಸಿದರು. ಬಹುತೇಕರು ಧರ್ಮವನ್ನು ಅಫೀಮು ಎಂದು ಕರೆದರೆ ಗಾಂಧೀಜಿ ಪಾಶ್ಚಾತ್ಯ ಶಿಕ್ಷಣ ಪಡೆದೂ ಗೀತೆ, ಉಪನಿಷತ್ತುಗಳನ್ನು ಓದಿ ಅದನ್ನು ವ್ಯಾಖ್ಯಾನಿಸಿದವರು. 

ಇಂಗ್ಲೆಂಡಿನಲ್ಲಿ ಇಂಗ್ಲಿಷ್‌ ಓದಿದ್ದರೂ ಗುಜರಾತಿಯಲ್ಲಿಯೇ ಬರೆಯುತ್ತಿದ್ದರು. ಮಾತೃಭಾಷೆಯಲ್ಲಿ ಬರೆದರೆ ಅರ್ಥಪೂರ್ಣ ಎಂದು ನಂಬಿದವರು. ಮನಸ್ಸು ಮಾಡಿದ್ದರೆ ಅವರು ಪ್ರಧಾನಿ, ಅಧ್ಯಕ್ಷರಾಗಬಹುದಿತ್ತು. ಅಧಿಕಾರವನ್ನು ಬಿಟ್ಟವರು. ಅದರಿಂದಲೇ ಅವರು “ಮಹಾತ್ಮ’ರಾದರು. ಇಲ್ಲವಾದರೆ ಕೇವಲ “ಆತ್ಮ’ ಆಗುತ್ತಿದ್ದರು ಎಂದು ನಂದಕಿಶೋರ್‌ ಹೇಳಿದರು.

ಚಿನ್ನ ಹೇರಿಕೊಂಡವರ ವಿರೋಧ
ಬನಾರಸ್‌ ಹಿಂದು ವಿ.ವಿ. ಉದ್ಘಾಟನೆಗೆ ಹೋದಾಗ ರಾಜಮನೆತನದವರು ಆಭರಣಗಳನ್ನು ಮೈಮೇಲೆ ಹೇರಿಕೊಂಡು ಬಂದಿದ್ದರು. ಇದನ್ನು ಕಂಡ ಗಾಂಧೀಜಿಯವರು ಭಾರತ ಬಡದೇಶ. ನಿಮ್ಮ ಮೈಮೇಲಿದ್ದ ಸ್ವಲ್ಪ ಚಿನ್ನವನ್ನೂ ತ್ಯಾಗ ಮಾಡಿದರೆ ದೇಶದ ಬಡತನ ನಿವಾರಣೆಯಾಗುತ್ತದೆ ಎಂದರು. ಇದರಿಂದ ಕ್ರುದ್ಧರಾದ ರಾಜಕುಮಾರ/ಕುಮಾರಿಯರು ಭಾಷಣ ಮಾಡಲು ಅಡ್ಡಿಪಡಿಸಿದರು. ಈ ಅನುಭವದ ಬಳಿಕ ಗಾಂಧೀಜಿ ಮತ್ತೆ ರಾಜವಂಶಸ್ಥರ ವಿರುದ್ಧ ಏನೊಂದನ್ನೂ ಮಾತನಾಡಲಿಲ್ಲ. ರಾಜರ ಬಗ್ಗೆ ಜನಸಾಮಾನ್ಯರಿಗೆ ಎಂತಹ ಭಾವನೆ ಇತ್ತು ಎನ್ನುವುದನ್ನು ಅವರು ಅರಿತಿದ್ದರು.

Advertisement

ಇಂದಿರಾ ಮದುವೆಗೆ ನೆಹರು ವಿರೋಧ
ಇಂದಿರಾ ಗಾಂಧಿಯವರು ಫಿರೋಜ್‌ ಗಾಂಧಿಯವರನ್ನು ಮದುವೆಯಾಗಲು ನಿರ್ಧರಿಸಿದಾಗ ಆಧುನಿಕ ಚಿಂತನೆಯ ಜವಾಹರಲಾಲ್‌ ನೆಹರು ವಿರೋಧ ಸೂಚಿಸಿದ್ದರು. ಆದರೆ ಗಾಂಧೀಜಿ ಒಪ್ಪಿಗೆ ಕೊಟ್ಟ ಬಳಿಕ ಮದುವೆ ನಡೆಯಿತು. ಗಾಂಧೀಜಿಯವರ ಸೆಕ್ಯುಲರಿಸಂ ಅಲ್ಪಸಂಖ್ಯಾಕರನ್ನು ಮೆಚ್ಚಿಸುವ ಸೆಕ್ಯುಲರಿಸಂ ಆಗಿರಲಿಲ್ಲ. ಅವರು ಅಪ್ರಿಯಸತ್ಯವನ್ನೇ ಸದಾ ಹೇಳುತ್ತಿದ್ದರು. ಅವರು ಮತಾಂತರಕ್ಕೆ ವಿರೋಧವಿದ್ದರು.

ಬುದ್ಧನ ಪ್ರತಿಮೆ ಏಕೆ?
ಸಾಮಾನ್ಯವಾಗಿ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳ ಕಚೇರಿಯಲ್ಲಿ ಬುದ್ಧನ ಚಿತ್ರ, ಪ್ರತಿಮೆಗಳಿರುತ್ತದೆ. ಈ ಚಿತ್ರಗಳು ಸಾಮಾನ್ಯವಾಗಿ ಕಣ್ಣು ಮುಚ್ಚಿಕೊಂಡು ಇರುತ್ತದೆ. ‘ನೀವು ಮಾಡುವ ಕೆಲಸವನ್ನು ಬುದ್ಧ ಕಣ್ಮುಚ್ಚಿಕೊಂಡು ಕುಳಿತ ಕಾರಣ ಆತ ನೋಡುವುದಿಲ್ಲ’ ಎಂದು ನಾನು ಹೇಳುವುದಿದೆ. ಇತ್ತೀಚಿಗೆ ಉಡುಪಿಯಲ್ಲಿ ಮದ್ಯ ಉತ್ಸವ (ವೈನ್‌ ಫೆಸ್ಟ್‌) ಕೂಡ ನಡೆದಿದೆ. ಆತ ಕಣ್ಮುಚ್ಚಿ ಕುಳಿತಿದ್ದಾನಲ್ಲವೆ? ಬುದ್ಧ ಅಹಿಂಸೆಯನ್ನು ಹೇಳಿದನೆ ಹೊರತು ಮಾಂಸಾಹಾರವನ್ನು ನಿಷೇಧಿಸಲಿಲ್ಲ. ಹಿಂದು ಧರ್ಮದ ಜಾತಿಗಳಿರುವಂತೆ ಕ್ರೈಸ್ತ, ಇಸ್ಲಾಂ ಧರ್ಮದಲ್ಲಿರುವ ಪಂಗಡಗಳು, ಜೈನ ಧರ್ಮದ ಅಹಿಂಸೆ ಮೊದಲಾದ ಕಠಿನ ನಿಯಮಗಳನ್ನು ಕಂಡ ಡಾ| ಅಂಬೇಡ್ಕರ್‌ ಅವರು ತನ್ನದೇ ಆದ ಬುದ್ಧಿಸಂ ಅನುಸರಿಸಿದರು. 
– ಡಾ| ನಂದಕಿಶೋರ್‌

Advertisement

Udayavani is now on Telegram. Click here to join our channel and stay updated with the latest news.

Next