ಯಾದಗಿರಿ: ಬಯಲು ಬಹಿರ್ದೆಸೆ ಮುಕ್ತ ಅಲ್ಲಿಪೂರ ಗ್ರಾಮ ಪಂಚಾಯಿತಿ “ಗಾಂಧಿ ’ ಗ್ರಾಮ ಪುರಸ್ಕಾರದ ಕಿರೀಟ ಮುಡಿಗೇರಿಸಿಕೊಂಡಿದೆ.
ಕಳೆದ ವರ್ಷವಷ್ಟೇ ವೈಯಕ್ತಿಕ ಶೌಚಾಲಯಗಳ ನಿರ್ಮಾಣದಲ್ಲಿ ಸಂಪೂರ್ಣ ಗುರಿ ಸಾ ಧಿಸಿರುವ ಪಂಚಾಯಿತಿ ಬಯಲು ಬಹಿರ್ದೆಸೆ ಮುಕ್ತವಾಗಿ ಘೋಷಣೆಯಾಗಿತ್ತು. ಇದೀಗ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಜಿಲ್ಲಾ ಕೇಂದ್ರದಿಂದ 12 ಕಿ.ಮೀ ಅಂತರದಲ್ಲಿರುವ ಗ್ರಾಮವು ಪಂಚಾಯಿತಿ ಕೇಂದ್ರವಾಗಿದ್ದು, ಸುಮಾರು 2 ಸಾವಿರದಷ್ಟು ಜನ ಸಂಖ್ಯೆ ಹೊಂದಿದ್ದು, 364 ಕುಟುಂಬಗಳು ಗ್ರಾಮದಲ್ಲಿ ವಾಸವಾಗಿದ್ದು, ಪಂಚಾಯಿತಿಯು ಹೋರುಂಚಾ, ಕಂಚಗಾರಹಳ್ಳಿ ಗ್ರಾಮ ಮತ್ತು ತಾಂಡ ಸೇರಿದಂತೆ ಅಲ್ಲಿಪೂರ ಸಣ್ಣ ತಾಂಡ, ಅಲ್ಲಿಪೂರ ವಾರಿ ತಾಂಡ, ಹೋರುಂಚಾ ನಡುವಿನ ತಾಂಡ, ಹೋರುಂಚಾ ಲಾಲಸಿಂಗ್ ತಾಂಡ, ಹೋರುಂಚಾ ಜಕಲಕಲ ತಾಂಡ, ವೆಂಕಟೇಶ ನಗರ, ಗುಲಗುಂದಿ ತಾಂಡಗಳನ್ನು ಒಳಗೊಂಡಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಾದ ಸಿಸಿ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ಉದ್ಯೋಗ ಖಾತರಿ, ಕೆರೆ ಹೂಳು ತೆಗೆಯುವುದು, ನಾಲಾ ನಿರ್ಮಾಣ, ತಡೆಗೋಡೆ, ಬದು ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ, ಕೃಷಿ ಹೊಂಡ ಸೇರಿದಂತೆ ವಸತಿ ಯೋಜನೆಗಳಲ್ಲಿನ ಅಭಿವೃದಿ ಮಾನದಂಡಗಳನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಗ್ರಾಮಸ್ಥರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿ ಧಿಗಳಲ್ಲಿ ಸಂತಸ ಮೂಡಿಸಿದೆ.
ಗಡಿ ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಅವಿಭಜಿತ ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮ ಪಂಚಾಯಿತಿ, ಶಹಾಪೂರ ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ಹಾಗೂ ಸುರಪೂರ ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮ ಪಂಚಾಯಿತಿಗಳು 2018-19ರ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಉತ್ತಮ ಸಾಧನೆ ಮಾಡಿರುವ ಪಂಚಾಯಿತಿಯ 2018-19ರ ಸಾಲಿನ ಪ್ರಗತಿ, ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳನ್ನೊಳಗೊಂಡ ಮಾರ್ಗಸೂಚಿಯ 150 ಅಂಶಗಳ ಪ್ರಶ್ನಾವಳಿಗಳನ್ನು ಪಂಚತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾಮ ಪಂಚಾಯಿತಿಗಳಿಂದ ಅರ್ಜಿ ಆಹ್ವಾನಿಸಿ, ಅಲ್ಲದೆ ಜಿ.ಪಂ ಅಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಹೆಸರನ್ನು ಅಂತಿಮಗೊಳಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳಿಗೆ ಅ.2ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ವಿತರಿಸಿ 5 ಲಕ್ಷ ರೂಪಾಯಿ ನಗದು ವಿತರಿಸಲಾಗುವುದು.
-ಅನಿಲ ಬಸೂದೆ