ಬೆಂಗಳೂರು: ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿರುವ ಬೆನ್ನಲ್ಲೇ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾ| ಕೆ.ಎನ್. ಕೇಶವನಾರಾಯಣ ನೇತೃತ್ವದ ಆಯೋಗ, ಗಂಭೀರ ಪ್ರಕರಣವೊಂದರ ತನಿಖೆಯಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸದ ಸ್ಥಳೀಯ ಪೊಲೀಸರ ಕರ್ತವ್ಯ ಲೋಪಕ್ಕೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆ ಸಂಬಂಧ ಮಂಗಳವಾರ ಮಡಿಕೇರಿ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಐ. ಮೇದಪ್ಪ ಅವರನ್ನು 6 ಗಂಟೆಗಳ ಕಾಲ ಆಯೋಗ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತು.
ಹಲವು ಆಯಾಮಗಳಲ್ಲಿ ಮೇದಪ್ಪ ಅವರನ್ನು ವಿಚಾರಣೆ ನಡೆಸಿದ ಆಯೋಗ, ಕೊಠಡಿ ಬಾಗಿಲು ತೆರೆಯುವ ಮೊದಲೇ ಆತ್ಮಹತ್ಯೆ ಎಂದು ಹೇಗೆ ನಿರ್ಧರಿಸಿದಿರಿ. ನೀವು ಕೊಠಡಿ ಪ್ರವೇಶಿಸುವ ಮುನ್ನವೇ ವಿಧಿವಿಜ್ಞಾನ ಪ್ರಯೋಗಾಲಯದ ಸಿಬಂದಿ ಯನ್ನು ಏಕೆ ಕರೆಸಲಿಲ್ಲ. ವಿನಾಯಕ ಲಾಡ್ಜ್ನ ಸಿಸಿಟಿವಿ ಫೂಟೇಜಸ್ ಪರಿಶೀಲನೆ ಏಕೆ ನಡೆಸಿಲ್ಲ. ಗಣಪತಿಯವರ ಬಳಿಯಿದ್ದ ಪರ್ಸ್, ಪೆನ್ ಇನ್ನಿತರ ವಸ್ತುಗಳನ್ನು ಸೀಜ್ ಮಾಡಿದಂತೆ ಗಣಪತಿ ಅವರ ಮೊಬೈಲ್ ಫೋನ್ ಯಾಕೆ ಸೀಜ್ ಮಾಡಲಿಲ್ಲ? ಕೊಠಡಿ ಬಾಗಿಲಿನ ಕ್ಲಾ ಂಪ್ ಏಕೆ ಸೀಜ್ ಮಾಡಲಿಲ್ಲ ಎಂಬ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಜತೆಗೆ ಇಂತಹ ಸೂಕ್ಷ್ಮ ಲೋಪಗಳೇ ಪ್ರಕರಣದ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ ಎಂದು ಅಸಮಾ ಧಾನ ವ್ಯಕ್ತಪಡಿಸಿತು.