ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಈಶ್ವರಪ್ಪ ಅವರ ತಲೆದಂಡ ಬಹುತೇಕ ಖಚಿತವಾಗುತ್ತಿದ್ದು, ಐಎಎಸ್ ಅಧಿಕಾರಿ ಡಿವೈ ಎಸ್ಪಿ ಗಣಪತಿ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ ಸನ್ನಿವೇಶ ಮತ್ತೆ ಮರುಕಳಿಸುತ್ತಿದೆ.
ಇದನ್ನೂ ಓದಿ:ಕರಾಳ ದಿನಾಚರಣೆ-ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ; ಹುತಾತ್ಮರಿಗೆ ಪ್ರಧಾನಿ ಮೋದಿ ಗೌರವ
ಬಿಜೆಪಿ ಮೂಲಗಳ ಪ್ರಕಾರ ಈಶ್ವರಪ್ಪ ಪ್ರಕರಣ ಸಂಬಂಧ ಬಿಜೆಪಿ ವರಿಷ್ಠರು ಈಗಾಗಲೇ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಪ್ರತ್ಯೇಕವಾಗಿ ವಿವರಣೆ ಪಡೆದುಕೊಂಡಿದೆ.
ಸದ್ಯ ಮೈಸೂರು ಪ್ರವಾಸದಲ್ಲಿರುವ ಈಶ್ವರಪ್ಪ ಶಿವಮೊಗ್ಗ ಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಸಂಪೂರ್ಣ ವಿವರಣೆ ನೀಡಿ ಅಲ್ಲಿಯೇ ರಾಜೀನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಸಂಘದ ಪ್ರಮುಖರ ಜತೆಗೆ ಕರೆ ಮಾಡಿ ವಿವರಣೆ ನೀಡಿರುವ ಈಶ್ವರಪ್ಪ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮುಜುಗರ ತರುವ ಕೆಲಸ ಮಾಡುವುದಿಲ್ಲ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ.
ಈಶ್ವರಪ್ಪ ರಾಜೀನಾಮೆ ನೀಡದೇ ಇದ್ದರೆ ದೇಶಾದ್ಯಂತ ಕಾಂಗ್ರೆಸ್ ಈ ವಿಚಾರದಲ್ಲಿ ಹೋರಾಟ ನಡೆಸಬಹುದು. ಇದರಿಂದ ಪಕ್ಷಕ್ಕೆ ಮುಜುಗರವಾಗಲಿದ್ದು ಅದನ್ನು ತಪ್ಪಿಸಿಕೊಳ್ಳಲು ಈಶ್ವರಪ್ಪ ರಾಜೀನಾಮೆ ಬಿಜೆಪಿಗೆ ಅನಿವಾರ್ಯವಾಗಬಹುದು ಎಂದು ಎನ್ನಲಾಗುತ್ತಿದೆ.