Advertisement

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಕೊಡಲ್ಲ:ಜಾರ್ಜ್‌

07:45 AM Sep 13, 2017 | Team Udayavani |

ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರರಕಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯವರು ಫ್ಯಾಸಿಸ್ಟ್‌ ಮನಸ್ಥಿತಿಯಿಂದ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಿಬಿಐ ತನಿಖೆಯಿಂದ ಯಾವುದೇ ವರದಿ ಬರುವವರೆಗೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಐಎಎಸ್‌ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಅನಗತ್ಯವಾಗಿ ನಾನು ಹಾಗೂ ನನ್ನ ಕಂಪನಿಯ ಹೆಸರನ್ನು ಎಳೆದು ತರಲಾಯಿತು. ರಾಜಕೀಯ ಕಾರಣಕ್ಕಾಗಿ ಅವರ ಕುಟುಂಬದವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದು ಒತ್ತಡ ಹೇರಲಾಗಿತ್ತು. ಆದರೆ, ಸಿಬಿಐ ತನಿಖೆಯಲ್ಲಿ ನನ್ನ ಯವುದೇ ಪಾತ್ರ ಇಲ್ಲ ಎಂದು ಹೇಳಿದೆ. ಈಗ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತಂತೆಯೂ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅದರಂತೆ ಸಿಬಿಐ ಮೂರು ತಿಂಗಳಲ್ಲಿ ತನಿಖೆ ನಡೆಸಲಿದೆ. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿಲ್ಲ. ಆದರೂ ಸಿಬಿಐ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಈಗ ಮತ್ತೆ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಬಿಜೆಪಿಯವರಿಗೆ ನನ್ನ ರಾಜೀನಾಮೆ ಮುಖ್ಯವೋ ಗಣಪತಿ ಸಾವಿನ ಸತ್ಯ ಹೊರಬರುವುದು ಮುಖ್ಯವೋ ಎಂದು ಜಾರ್ಜ್‌ ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಿಂದೆಯೂ ರಾಜ್ಯ ಸರ್ಕಾರದ ಮೂವರು ಸಚಿವರುಗಳ ವಿರುದ್ಧ ದಾಖಲೆ ಇದೆ ಎಂದು ಹೇಳಿದ್ದರು. ಆದರೆ, ಯಾವುದೇ ದಾಖಲೆ ಬಿಡುಗಡೆ ಮಾಡಲಿಲ್ಲ. ಈಗಲೂ ಅದೇ ಮಾತನ್ನು ಹೇಳುತ್ತಿದ್ದಾರೆ. ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಅವರ ಬಳಿ ಏನಾದರೂ ದಾಖಲೆ ಇದ್ದರೆ, ಸಿಬಿಐಗೆ ನೀಡಲಿ ಎಂದು ಜಾರ್ಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next