ರಾಮನಗರ: ವಿನಾಯಕ ಮೂರ್ತಿಗಳ ವಿಸರ್ಜನೆಗೆಂದೇ ವಿಶೇಷವಾಗಿ ನಿರ್ಮಿಸಿರುವ ಸಿರಿಗೌರಿ ಕಲ್ಯಾಣಿಯಲ್ಲಿನ ಹೂಳೆತ್ತುವ ಹಾಗೂ ಸ್ವತ್ಛಗೊಳಿಸುವ ಕಾರ್ಯವನ್ನು ಕೈಗೊಂಡ ನಗರಸಭೆಯ ಪೌರಕಾರ್ಮಿಕರು, ಗಣಪನ
ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಯನ್ನು ಸಿದ್ಧಪಡಿಸಿದ್ದಾರೆ.
ವಿಸರ್ಜನೆ ಸಿರಿಗೌರಿ ಕಲ್ಯಾಣಿಯಲ್ಲಿ ಮಾತ್ರ: ಈ ಬಾರಿ ಸಿರಿಗೌರಿ ಕಲ್ಯಾಣಿಯಲ್ಲೇ ಗಣಪತಿ ಮೂರ್ತಿಗಳನ್ನು ನಾಗರಿಕರು ವಿಸರ್ಜಿಸಬೇಕಾಗಿದ್ದು, ಮಲ್ಲೇಶ್ವರ ಕೆರೆ, ಶ್ರೀರಾಮದೇವರ ಬೆಟ್ಟದ ಬಳಿಯ ಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಇಲ್ಲ ಎಂದು ನಗರಸಭೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರಾದ್ಯಂತ ಸಂಚಾರ: ಮೂರು ಮೊಬೈಲ್ ವಾಹನಗಳು ನಗರಾದ್ಯಂತ ಸಂಚರಿಸಲಿದ್ದು, ಭಕ್ತರು ಗಣೇಶನ ಮೂರ್ತಿಯನ್ನು ಮನೆಬಾಗಿಲಿನಲ್ಲೇ ವಿಸರ್ಜಿಸಬಹುದು. ಅಲ್ಲದೆ, ನಗರಸಭೆ ಕಾಂಪ್ಲೆಕ್ಸ್, ಅಂಬೇಡ್ಕರ್ ಭವನ, ವಿಜಯನಗರ ಆರ್ಚ್ ಮತ್ತು ರೋಟರಿ ಆಸ್ಪತ್ರೆಯ ಬಳಿ ವಿಸರ್ಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಕಲ ವ್ಯವಸ್ಥೆಯೊಂದಿಗೆ ಸಿದ್ಧ: ನಗರದ ರಂಗರಾಯರದೊಡ್ಡಿ ಕೆರೆ ಬಳಿಯಲ್ಲಿ ನಗರಸಭೆ ಹಾಗೂ ರಾಮನಗರ ಅಭಿವೃದ್ಧಿ ಪ್ರಾಧಿಕಾರಗಳು ಜಂಟಿಯಾಗಿ ನಿರ್ಮಿಸಿರುವ ಸಿರಿಗೌರಿ ಕಲ್ಯಾಣಿಯಲ್ಲಿ ಕಳೆದ ಮೂರು ವರ್ಷಗಳಿಂದ ಗಣಪತಿ ಹಾಗೂ ಗೌರಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಅನಾಹುತಗಳಿಗೆ ಅವಕಾಶವಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಈ ಬಾರಿಯೂ ಗಣೇಶ ವಿಸರ್ಜನೆ ಕಾರ್ಯವನ್ನು ನಾಗರಿಕರು ಸುಸೂತ್ರವಾಗಿ ನೆರವೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಯಾರಿ ನಡೆಸಿದರು.
ಬೆಳಕಿನ ವ್ಯವಸ್ಥೆ: ಉದಯವಾಣಿಯೊಂದಿಗೆ ಮಾತನಾಡಿದ ನಗರಸಭೆ ಪ್ರಭಾರ ಪರಿಸರ ಅಧಿಕಾರಿ ಜಿ.ಶ್ರೀನಿವಾಸ್, ಸಿರಿಗೌರಿ ಕಲ್ಯಾಣಿಯ ಆವರಣದಲ್ಲಿ ರಾತ್ರಿ ವೇಳೆಯಲ್ಲೂ ವಿಸರ್ಜನೆಗೆ ಅವಕಾಶವಾಗುವಂತೆ ಧಾರಾಳ ಬೆಳಕಿನ ವ್ಯವಸ್ಥೆ, ವಿದ್ಯುತ್ ಸರಬರಾಜಿಗೆ ಯೂಪಿಎಸ್, ಜನರೇಟರ್ ವ್ಯವಸ್ಥೆ, ಕ್ರೇನ್ ವ್ಯವಸ್ಥೆ, ನುರಿತ ಈಜುಗಾರರು ಗಣಪನ ಮೂರ್ತಿಯ ವಿಸರ್ಜನೆಗೆ ಸಹಕರಿಸಲಿದ್ದಾರೆ. ಸಿಕ್ಯಾಮೆರಾಗಳ ಕಣ್ಗಾವಲು, ಪೊಲೀಸ್ ಕಾವಲು ಹೀಗೆ ಪ್ರತಿಯೊಂದು ವಿಚಾರದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಹಿರಿಯ ಆರೋಗ್ಯ ಅಧಿಕಾರಿ ವಿಜಯ್ ಕುಮಾರ್, ಪ್ರಭಾರ ಎಇಇ ರಾಜೇಗೌಡ ಹಾಜರಿದ್ದರು.
ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ: ನಗರದಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ನಿಷೇಧಿಸಿರುವ ಸ್ಥಳಿಯ ನಗರಸಭೆಯ ಅಧಿಕಾರಿಗಳು, ಬುಧವಾರ ನಗರ ಸಂಚಾರ ನಡೆಸಿ ಪಿಒಪಿ ಗಣಪತಿ ಮೂರ್ತಿಗಳ ಮಾರಾಟವಾಗುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರು. ನಗರ ಸಭೆಯ ಆಯುಕ್ತರಾದ ಶುಭಾ, ಪ್ರಭಾರ ಪರಿಸರ
ಅಧಿಕಾರಿ ಜಿ.ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ವಿಜಯ ಕುಮಾರ್ ಸೇರಿದಂತೆ ನಗರಸಭೆಯ ಅಧಿಕಾರಿಗಳು ಎರಡು ತಂಡಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಗಣಪತಿ ಮೂರ್ತಿ ಮಾರಾಟಗಾರರ ಮಳಿಗೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಮಾರಾಟಗಾರರಿಗೆ ತಿಳುವಳಿಕೆ ಪತ್ರ ಕೊಟ್ಟು ಕಾನೂನು ಉಲ್ಲಂ ಸಿದರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆಯನ್ವಯ ಮತ್ತು ಜಲ ಮಾಲಿನ್ಯ ಕಾಯ್ದೆ 1974ರ ಕಲಂ 33ಬಿ ಪ್ರಕಾರ ಸದರಿ ಕಾಯ್ದೆಯ ಕಲಂ 45ರ ಪ್ರಕಾರ 10 ಸಾವಿರ ರೂ. ದಂಡ ಹಾಗೂ ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಗಣಪತಿ ಮಾರಾಟಕ್ಕೆ ಪರವಾನಿಗೆ ಪಡೆಯದವರಿಗೂ ಅಧಿಕಾರಿಗಳು ಎಚ್ಚರಿಗೆ ನೀಡಿದ್ದಾರೆ.