Advertisement

ಗಾಣಾಳು ಫಾಲ್ಸ್‌ಗೆ ಬೇಕು ಅಭಿವೃದ್ಧಿ ಭಾಗ್ಯ

04:11 PM Nov 16, 2021 | Team Udayavani |

ಭಾರತೀನಗರ: ಮುತ್ತತ್ತಿ ಪ್ರವಾಸಿ ತಾಣದ ನಂತರ ಶಿಂಷಾ ನದಿ (ಕದಂಬ ನದಿ) ಮೈತುಂಬಿ ಹರಿದಾಗ ಗಾಣಾಳು ಸಮೀಪದ ಫಾಲ್ಸ್‌ (ಬೆಂಕಿ ಫಾಲ್ಸ್‌) ಪ್ರವಾಸಿಗರನ್ನು ಆಕರ್ಷಿಸಿ ಕೈ ಬೀಸಿ ಕರೆಯುತ್ತಿದೆ. ಈ ಬೆಂಕಿ ಫಾಲ್ಸ್‌ ಮೈತುಂಬಿ ಹರಿಯುತ್ತಿದ್ದರೆ ಯಾವುದೇ ಜಲಪಾತಕ್ಕೂಕಡಿಮೆ ಏನು ಇಲ್ಲ.

Advertisement

ಭೋರ್ಗರೆಯುತ್ತ ಧುಮುಕುವ ಈ ಸ್ಥಳ ‌ರಮ್ಯ ಮನೋಹರ. ಹಲಗೂರಿನಿಂದ ಮುತ್ತತ್ತಿಗೆ ಹೋಗುವ ರಸ್ತೆಯಲ್ಲಿ ಸಿಗುವ ಕರಲಕಟ್ಟೆ ವೃತ್ತದ ಬಳಿ ಬೀರೋಟಕ್ಕೆ ಹೋಗುವ ರಸ್ತೆಯಲ್ಲಿ ಹೋದರೆ ಅಲ್ಲೇ ಗಾಣಾಳು ಗ್ರಾಮ ಸಿಗುತ್ತದೆ. ಅಲ್ಲಿಂದ ಫಾಲ್ಸ್‌ಗೆ ಹೋಗಬಹುದು. ಅಷ್ಟಾಗಿ ಯಾರಿಗೂ ತಿಳಿದಿಲ್ಲ: ಜಲಧಾರೆ ಮಳೆಗಾಲ ದಲ್ಲಿ ಮಾತ್ರ ಶಿಂಷಾ ನದಿ ಹರಿದರೆ ರುದ್ರ ರಮಣೀಯ ದೃಶ್ಯ ಕಂಡು ಬರುತ್ತದೆ. ಉಳಿದ ಸಮಯದಲ್ಲಿ ಸೌಮ್ಯವಾಗಿರುತ್ತದೆ. ಈ ಸ್ಥಳದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಇತ್ತೀಚೆಗಷ್ಟೇ ಈ ಜಲಪಾತ ಸ್ಥಳೀಯರಿಂದ ಮತ್ತು ಇಲ್ಲಿಗೆ ಹೋಗಿ ಬಂದಿರುವ ಪ್ರವಾಸಿಗರದಿಂದ ಬಾಯಿಂದ ಬಾಯಿಗೆ ಹರಡಿ ಈ ಸ್ಥಳದ ಹೆಸರು ಪ್ರಸ್ತುತತೆಗೆ ಬರುತ್ತಿದೆ.

ರಮಣೀಯ ದೃಶ್ಯ: ಶಿಂಷಾನದಿ ಹಿನ್ನೀರಿನಲ್ಲಿ ಈಗ ವ್ಯಾಪಕ ಮಳೆಯಾಗುತ್ತಿದೆ. ಈ ನೀರು ಶಿಂಷಾ ನದಿ ಮೂಲಕ ಇಗ್ಗಲೂರು ಡ್ಯಾಂ ತುಂಬಿ ಹರಿದರೆ ಅಲ್ಲಿಂದ ನೀರು ಬಿಡುಗಡೆ ಮಾಡಿದಾಗ ಮಾತ್ರ ಬೆಂಕಿ ಫಾಲ್ಸ್‌ ಕಾಣಬಹುದು. ನಂತರ ಮುತ್ತತ್ತಿ ಬಳಿ ನೀರು ಕಾವೇರಿ ನದಿಗೆ ಸೇರುತ್ತದೆ. ಮಳೆಗಾಲ ಆರಂಭವಾಗಿರುವು ದರಿಂದ ಈ ರಮಣೀಯ ದೃಶ್ಯವನ್ನು ಈಗ ಕಾಣಬಹುದು.

ಮಾರ್ಗ: ಫಾಲ್ಸ್‌ ಹೆಸರು ಪ್ರಚಾರ ಪಡೆಯುತ್ತಿದ್ದಂತೆ ಈಗ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತಿದೆ. ಈ ಸ್ಥಳಕ್ಕೆ ಹೋಗಬೇಕಾದರೆ ಹಲಗೂರುನಿಂದ 5 ಕಿ.ಮೀ.ಚಲಿಸಿದರೆ ಕರಲಕಟ್ಟೆ ವೃತ್ತದಲ್ಲಿ ಎಡಕ್ಕೆ ತಿರುಗಿದರೆ ಮುತ್ತತ್ತಿಗೆ ಹೋಗುವ ದಾರಿ ಮಧ್ಯೆ ಗಾಣಾಳು ಬೀರೋಟಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ ಗಾಣಾಳು ಗ್ರಾಮ ಸಿಗುತ್ತದೆ. ನಂತರ ಪ್ರವಾಸಿಗರು ಸ್ಥಳೀಯರನ್ನು ವಿಚಾರಿಸಿಕೊಂಡು ಹೋಗಬೇಕು.

ಪ್ರತಿ ವರ್ಷದಂತೆ ಮಳೆ ಬಿದ್ದಾಗ ಮಾತ್ರ ಈ ಜಲಪಾತ ಭೋರ್ಗರೆಯುವ ಸಾಧ್ಯತೆ ಹೆಚ್ಚು. ಶಿಂಷಾ ನದಿ ಮೈತುಂಬಿ ಹರಿಯುತ್ತಿರುವ ವೇಳೆ ಕೆಮ್ಮಣ್ಣು ಮಿಶ್ರಿತವಾಗಿ ಕೆಳೆಕ್ಕೆ ನೀರು ಧುಮುಕುವುದರಿಂದ ಬೆಂಕಿಯ ಉಂಡೆಯಂತೆ ಈ ಸ್ಥಳ ಕಾಣುತ್ತದೆ. ಆದುದ್ದರಿಂದ ಇದನ್ನು ಬೆಂಕಿ ಫಾಲ್ಸ್‌ ಎಂದು ಕರೆಯುತ್ತಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಸಿದ್ಧವಾದ ತಾಣ: ಈ ಬೆಂಕಿ ಹಳ್ಳ ತುಂಬಾ ಮನೋಹರ, ಸೌಂದರ್ಯದಿಂದ ಕೂಡಿದೆ. ಈ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆಯವರು ಗಗನಚುಕ್ಕಿಯಲ್ಲಿ ಧುಮುಕುವ ನೀರನ್ನು ಪ್ರವಾಸಿಗರು ವೀಕ್ಷಿಸಲು ಮಾಡಿರುವ ವ್ಯವಸ್ಥೆಯನ್ನು ಇಲ್ಲೂ ಮಾಡಿದರೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಹಲಗೂರು ವ್ಯಾಪ್ತಿಗೆ ಬರುವ ಮುತ್ತತ್ತಿ, ಬೆಂಗಳೂರು, ಮೈಸೂರು ಸೇರಿದಂತೆ ಸುತ್ತ ಮುತ್ತಲಿನ ಪ್ರವಾಸಿಗರಿಗೆ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ.

Advertisement

ಈಗ ಈ ಬೆಂಕಿ ಫಾಲ್ಸ್‌ನ್ನು ಅಭಿವೃದ್ಧಿಪಡಿದರೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸಹ ಇದು ಒಂದು ಸೇರ್ಪಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಈಸ್ಥಳವನ್ನು ಅಭಿವೃದ್ಧಿಪಡಿಸಬೇಕಿದೆ.

ಮುತ್ತತ್ತಿಯಂತೆ ಪ್ರಸಿದ್ಧವಾಗುವುದು ನಿಶ್ಚಿತ : ಕರಲಕಟ್ಟೆ ವೃತ್ತದಲ್ಲಿ ಗಾಣಾಳು ಫಾಲ್ಸ್‌ಗೆ ಹೋಗುವ ದಾರಿ ಎಷ್ಟು ಕಿ.ಮೀ ಇದೆ ಎಂಬುವುದನ್ನು ನಾಮಫ‌ಲಕದ ಮೂಲಕ ಹಾಕಿದರೆ ಪ್ರವಾಸಿಗರಿಗೆ ಅನುಕೂಲಕವಾಗುತ್ತದೆ. ಪ್ರತಿ ಶನಿವಾರ-ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಮುತ್ತತ್ತಿಗೆ ಹೆಚ್ಚು ಪ್ರವಾಸಿಗರು ಬರುತ್ತಾರೆ. ಅವರಿಗೆ ಈ ಜಲಪಾತ ಅರಿವು ಇರುವುದಿಲ್ಲ. ಇವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಈ ಸ್ಥಳವು ಸಹ ಮುತ್ತತ್ತಿಯಂತೆ ಪ್ರಸಿದ್ಧವಾಗುತ್ತದೆ.

ಗಾಣಾಳು ಫಾಲ್ಸ್‌ (ಬೆಂಕಿಫಾಲ್ಸ್‌) ಪ್ರವಾಸಿಗರಿಗೆ ಅಷ್ಟೊಂದು ಪರಿಚಯವಿಲ್ಲ.ಈ ಸ್ಥಳವನ್ನು ಪ್ರವಾಸೋಧ್ಯಮ ಇಲಾಖೆ ಅಭಿವೃದ್ಧಿಪಡಿಸಲು ಮುಂದಾಗಬೇಕು. -ಜಯಣ್ಣ, ಹಲಗೂರು

ಬೆಂಕಿ ಫಾಲ್ಸ್‌ ಮೈದುಂಬಿ ಹರಿಯುತ್ತಿದ್ದರೆ ಯಾವುದೇ ಜಲಪಾತಕ್ಕೂ ಕಡಿಮೆ ಇಲ್ಲ ಇಲ್ಲಿಯ ಸೊಬಗು. ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಈ ಸ್ಥಳವನ್ನು ಅಭಿವೃದ್ಧಿಪಡಿಸಿದರೆ ಇದು ಸಹ ಪ್ರಸಿದ್ಧ ಪ್ರವಾಸಿ ತಾಣವಾಗುವುದು ನಿಶ್ಚಿತ. – ಬೆಟ್ಟೇಗೌಡ, ಎಸ್‌.ಕೆ.ಕೆಫೆ, ಭಾರತೀನಗರ

ಬೆಂಕಿ ಹಳ್ಳ ರಮಣೀಯ, ಮನೋಹರ, ಸೌಂದರ್ಯದಿಂದ ಕೂಡಿದೆ. ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿ ಹಲವು ಸೌಕರ್ಯ, ಅನುಕೂಲ ಮಾಡಿಕೊಡಬೇಕಿದೆ. -ಬೇಕರಿ ರವಿ, ಕೆ.ಎಂ.ದೊಡ್ಡಿ

– ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next