Advertisement

ರಸಗ್ರಹಣ ಶಿಬಿರದಲ್ಲಿ ಮೆರೆದ ಗಾನ ನಾಟ್ಯ

10:03 PM May 02, 2019 | Sriram |

ಇತ್ತೀಚೆಗೆ ಉಡುಪಿಯ ಎಮ್‌.ಜಿ.ಎಮ್‌ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ, ಎರಡು ದಿನಗಳ ಕನಕದಾಸ ಕೀರ್ತನ ಹಾಗೂ ಸಂಗೀತ ರಸ ಗ್ರಹಣ ಶಿಬಿರವನ್ನು ಆಯೋಜಿಸಲಾಗಿತ್ತು.

Advertisement

ಗುರುಗಳಾಗಿ ಇದನ್ನು ನಡೆಸಿಕೊಟ್ಟವರು ಚೆನ್ನೈಯ ಡಾ. ಮುಲ್ಲೆ„ ವಾಸಲ್‌ ಚಂದ್ರಮೌಳಿ. ಮೊದಲ ದಿನ ಸಂಜೆ ಬರೋಡಾದ ಎಸ್‌. ಕೆ. ಮಹತಿಯವರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿತ್ತು. ತೋಡಿಯ ಏರನಾಪೈ ವರ್ಣವನ್ನು ಗಟ್ಟಿ ತಳಹದಿಯೊಂದಿಗೆ ಹಾಡುವುದರ ಮೂಲಕ ಕಛೇರಿ ಪ್ರಾರಂಭಗೊಂಡಿತು. ನಂತರ ಮೋಹನ ಕಲ್ಯಾಣಿಯಲ್ಲಿ ಸಿದ್ಧಿವಿನಾಯಕಂ, ಕನಕದಾಸರ “ಬಾಗಿಲನು ತೆರೆದು’ (ಅಠಾಣ) , “ನಮ್ಮಮ್ಮ ಶಾರದೆ’ (ವಸಂತ) ಒಳ್ಳೆಯ ಮನೋಧರ್ಮದೊಂದಿಗೆ ಮೂಡಿಬಂದವು. ಶುದ್ಧ ಸೀಮಂತಿನಿಯಲ್ಲಿ ಹಾಡಿದ “ಜಾನಕೀ ರಮಣ’ ರಾಗ, ಭಾವ ಸು#ರಿತ ಆಲಾಪನೆಯೊಂದಿಗೆ, “ರಕ್ತನಳಿನ’ದಲ್ಲಿ ತ್ವರಿತ ಗತಿಯ ಸ್ವರ ಕಲ್ಪನೆಗಳೊಂದಿಗೆ ಮನ ಸೆಳೆದವು. ಮುಖ್ಯ ರಾಗವಾಗಿ ಭೈರವಿಯನ್ನು ಆರಿಸಿಕೊಂಡ ಗಾಯಕಿ ಏನಾಟಿನೋಮು ಕೃತಿಯ ಹಾಡುವಿಕೆಯಲ್ಲಿ ಹಾಗೂ “ಸುಂದರೇಶ’ದಲ್ಲಿ ಮಾಡಿದ‌ ಕರಾರುವಾಕ್ಕಾದ ನೆರೆವಲ್‌ , ಸ್ವರಪ್ರಸ್ತಾರಗಳಲ್ಲಿ ತನ್ನ ಅಪರಿಮಿತ ವಿದ್ವತ್‌ ಹಾಗೂ ಹಿಡಿತವನ್ನು ಪ್ರದರ್ಶಿಸಿದರು. ಇಲ್ಲಿ ಡಾ| ಬಾಲಚಂದ್ರ ಆಚಾರ್ಯ ಮೃದಂಗ ವಾದನದಲ್ಲಿ ಚಿಕ್ಕದಾದ ಆದರೂ ವಿದ್ವತೂ³ರ್ಣವಾದ ತನಿ ಆವರ್ತನವನ್ನು ನುಡಿಸಿ ಮುದ ನೀಡಿದರು. ಅನಂತರ ಹೇ ಗೋವಿಂದ ಹೇ ಗೋಪಾಲ, ರಾಮಮಂತ್ರವ ಜಪಿಸೋ ( ಜಾನ್ಪುರಿ) ರಾಮನೇ ಭಜಿತ್ತಾರೈ ತಮಿಳು ರಚನೆ(ಮಾಂಡ್‌) ಚಂದ್ರಚೂಡಶಿವ ಶಂಕರ ಪಾರ್ವತಿ (ದರ್ಬಾರಿ), ರಂಗ ಬಾರೋ ಪಾಂಡುರಂಗ ಬಾರೋ (ಸಿಂಧು ಭೈರವಿ), ವೃಂದಾವನಿಯಲ್ಲಿ ತಿಲ್ಲಾನ, ಮಧ್ಯಮಾವತಿಯಲ್ಲಿ ಪಾಹಿರಾಮಪ್ರಭೋ ಮುಂತಾದ ಲಘು ಪ್ರಸ್ತುತಿಗಳೊಂದಿಗೆ ಈ ಹಾಡುಗಾರಿಕೆಯು ಮುಕ್ತಾಯಗೊಂಡಿತು.
ಪಕ್ಕವಾದ್ಯದಲ್ಲಿ ವೇಣುಗೋಪಾಲ್‌ ಶ್ಯಾನುಭೋಗ್‌ ವಯೊಲಿನ್‌, ಹಾಗೂ ಡಾ|ಬಾಲಚಂದ್ರ ಆಚಾರ್ಯ ಮೃದಂಗದಲ್ಲಿ ಸಹಕಾರವನ್ನಿತ್ತರು. ಎರಡನೆಯ ದಿನವೂ ಶಿಬಿರ ಮುಂದುವರಿಯಿತು.

ಮಧ್ಯಾಹ್ನದ ತರುವಾಯ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ (ರಿ.) ಪುತ್ತೂರು ಇದರ ನೃತ್ಯ ಗುರು ವಿ| ದೀಪಕ್‌ ಕುಮಾರ್‌ ಪುತ್ತೂರು ಹಾಗೂ ಶಿಷ್ಯ ವೃಂದದವರಿಂದ “ಹರಿತ’ ಎಂಬ ವಿಷಯಾಧಾರಿತ ಹಾಗೂ ಕನಕದಾಸರ ಹಾಡುಗಳನ್ನು ಕುರಿತ ನೃತ್ಯ ಕಾರ್ಯಕ್ರಮ ನಡೆಯಿತು. ವರ್ಷಋತುವಿನಲ್ಲಿ ಹಸಿರು, ಜೈನ ಧರ್ಮದಲ್ಲಿ ಹಸಿರು, ಬುಧ ಗ್ರಹಕ್ಕೆ ಸಂಬಂಧಿಸಿದಂತೆ ಹಸಿರು, ಮರಕತ (ಹಸಿರು) ವನ್ನಾಧರಿಸಿದ ಕೃತಿ ರಚನೆಗಳು, ಮಾತಂಗಿ ಅಂದರೆ ಸರಸ್ವತಿಯ ಒಂದು ಭಾಗವಾಗಿರುವ ಹಸಿರು, ದಾಸ ಕೀರ್ತನೆಗಳಲ್ಲಿ ಹಸಿರು, ಕೊನೆಯಲ್ಲಿ ದೇಶಕ್ಕಾಗಿ ಹೋರಾಟ ನಡೆಸುವ ಸೇನಾಪಡೆಯಾಗಿ ಹಸಿರು, ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಕಂಗೊಳಿಸುವ ಹಸಿರು ಎಂಬ ಸಾರ್ವಕಾಲಿಕ ವರ್ಣವನ್ನು ಬಿಂಬಿಸಿ ಅದಕ್ಕೆ ಪೂರಕವಾದ ಸಂಗೀತ ರಚನೆಗಳನ್ನು ಆಯ್ದುಕೊಂಡು, ಇದನ್ನು ಭರತನಾಟ್ಯಕ್ಕೆ ಅಳವಡಿಸಿಕೊಂಡು ಒಂದು ಉತ್ತಮವಾದ ನೃತ್ಯ ರೂಪಕವನ್ನು ಪ್ರದರ್ಶಿಸಿ ರಂಜಿಸಿದರು. ಹಿಮ್ಮೇಳದಲ್ಲಿ ದೀಪಕ್‌ ಕುಮಾರ್‌ ಹಾಗೂ ಗಿರೀಶ್‌ ಕುಮಾರ್‌ ನಟ್ಟುವಾಂಗದಲ್ಲಿ, ಹಾಡುಗಾರಿಕೆಯಲ್ಲಿ ಪ್ರೀತಿಕಲಾ ದೀಪಕ್‌ ಕುಮಾರ್‌, ಅನಿಷಾ ಚೇಕೋಡು ಮತ್ತು ಶ್ರೀಲಕ್ಷ್ಮೀ, ವಯೊಲಿನ್‌ನಲ್ಲಿ ಶರ್ಮಿಳಾ ರಾವ್‌, ಮೃದಂಗದಲ್ಲಿ ಬಾಲಚಂದ್ರ ಭಾಗವತ್‌ ಸಹಕಾರವನ್ನಿತ್ತರು. ಮುಂದೆ ಶಿಬಿರಾರ್ಥಿಗಳಿಂದ ಗೋಷ್ಠಿ ಗಾಯನ ನಡೆಯಿತು.

– ವಿದ್ಯಾಲಕ್ಷ್ಮೀ ಕಡಿಯಾಳಿ

Advertisement

Udayavani is now on Telegram. Click here to join our channel and stay updated with the latest news.

Next