Advertisement

ಗುಂಡಿನ ಮತ್ತೆ ಗಮ್ಮತ್ತು!

12:42 PM Jun 23, 2019 | Team Udayavani |

ಅವರಿಬ್ಬರೂ ಬಾಲ್ಯದ ಸ್ನೇಹಿತರು. “ಹಫ್ತಾ’ ವಸೂಲಿ, ಸುಫಾರಿ ಕಿಲ್ಲಿಂಗ್‌ ಮೂಲಕವೇ ಅಂಡರ್‌ವರ್ಲ್ಡ್ಗೆ ಎಂಟ್ರಿಯಾದ ಒಬ್ಬನ ಹೆಸರು ಕುಡ್ಲ ಅಲಿಯಾಸ್‌ ಕೃಷ್ಣ. ಮತ್ತೂಬ್ಬನ ಹೆಸರು ಯರವಾಡ ಅಲಿಯಾಸ್‌ ಶಂಕರ್‌ ಯರವಾಡ. ಮಂಗಳೂರಿನಿಂದ ಹಿಡಿದು ಮುಂಬೈವರೆಗಿನ ಕೋಸ್ಟಲ್‌ನಲ್ಲಿ ಅವರದ್ದೇ ಹವಾ.

Advertisement

ಹಾಗಾದ್ರೆ, ಈ ಸ್ನೇಹಿತರು “ಹಫ್ತಾ’ ವಸೂಲಿಗೆ ಇಳಿದಿರುವುದೇಕೆ? “ಹಫ್ತಾ’ ವಸೂಲಿ ಹಿಂದಿನ ಕಾರಣ – ಉದ್ದೇಶವೇನು, “ಹಫ್ತಾ’ ಹೆಸರಿನಲ್ಲಿ ಕರಾವಳಿಯಲ್ಲಿ ಹರಿಯುವ ನೆತ್ತರ ಕಹಾನಿಗೆ ಬ್ರೇಕ್‌ ಬೀಳುತ್ತಾ, ಇಲ್ಲವಾ? ಇವೆಲ್ಲದರ ನಡುವೆಯುವ ಕಥೆಯೇ ಈ ವಾರ ತೆರೆಗೆ ಬಂದಿರುವ “ಹಫ್ತಾ’ ಚಿತ್ರ.

ಹೆಸರೇ ಹೇಳುವಂತೆ “ಹಫ್ತಾ’ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಎಲಿಮೆಂಟ್‌ ಇಟ್ಟುಕೊಂಡು ಬಂದಿರುವ ಚಿತ್ರ. ಅದರಲ್ಲೂ ಕಳೆದ ಕೆಲ ತಿಂಗಳಿನಿಂದ ಅಂಡರ್‌ವರ್ಲ್ಡ್, ಮಾಫಿಯಾ, ರೌಡಿಸಂ ಕಥಾಹಂದರದ ಚಿತ್ರಗಳಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ಹಾರರ್‌, ಥ್ರಿಲ್ಲರ್‌ ಚಿತ್ರಗಳ ಹಿಂದೆ ಬಿದ್ದಿದ್ದ ಕನ್ನಡ ಸಿನಿ ಪ್ರಿಯರಿಗೆ “ಹಫ್ತಾ’ ಮತ್ತೂಮ್ಮೆ ಭೂಗತ ಲೋಕನ ದರ್ಶನ ಮಾಡಿಸುವಂತಿದೆ.

“ಹಫ್ತಾ’ದಲ್ಲಿ ಕ್ರೌರ್ಯ – ಅಟ್ಟಹಾಸವಿದೆ. ಲಾಂಗು-ಮಚ್ಚು, ಗುಂಡಿನ ಮೊರೆತವಿದೆ. ಅದರ ಜೊತೆಗೊಂದು ನವಿರಾದ ಲವ್‌ಸ್ಟೋರಿಯೂ ಇದೆ. ಒಂದು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಚಿತ್ರಕ್ಕೆ ಏನೇನು ಎಲಿಮೆಂಟ್ಸ್‌ ಇರಬೇಕೋ, ಅದೆಲ್ಲವನ್ನೂ ಅರ್ಥೈಸಿಕೊಂಡು, ಚಿತ್ರದಲ್ಲಿ ಅಳವಡಿಸಿದ್ದಾರೆ ನಿರ್ದೇಶಕ ಪ್ರಕಾಶ್‌ ಹೆಬ್ಬಾಳ. ಆದರೆ ಅದೆಷ್ಟು ವರ್ಕೌಟ್‌ ಆಗಿದೆ ಎನ್ನುವುದುದೇ ಮುಂದಿರುವ ಪ್ರಶ್ನೆ.

ಸಂಪೂರ್ಣ ಕರಾವಳಿ ಹಿನ್ನೆಲೆಯಲ್ಲಿ ಸಾಗುವ “ಹಫ್ತಾ’ದಲ್ಲಿ ಕರಾವಳಿಯ ಜನಜೀವನ, ಭೂಗತಲೋಕದ ಕ್ರೌರ್ಯ ಎಲ್ಲವೂ ಅನಾವರಣಗೊಂಡಿದೆ. ಆದರೆ ಭಾಷಾ ಸೊಗಡು ಕಾಣೆಯಾಗಿದೆ. ಕೆಲವೊಮ್ಮೆ ಶರವೇಗದಲ್ಲಿ ಸಾಗುವ ಚಿತ್ರಕಥೆ, ಅಲ್ಲಲ್ಲಿ “ಜರ್ಕ್‌’ ತೆಗೆದುಕೊಳ್ಳುತ್ತದೆ.

Advertisement

ಚಿತ್ರಕಥೆ, ನಿರೂಪಣೆಯಲ್ಲಿ ನಿರ್ದೇಶಕರು ಇನ್ನಷ್ಟು ಎಚ್ಚರ ವಹಿಸಿದ್ದರೆ, “ಹಫ್ತಾ’ದ ಇಂಪ್ಯಾಕ್ಟ್ ಇನ್ನೂ ಹೆಚ್ಚಾಗಿರುತ್ತಿತ್ತು. ಇನ್ನು ಅಭಿನಯದ ವಿಷಯಕ್ಕೆ ಬಂದರೆ, ಮೊದಲ ಬಾರಿಗೆ ನಾಯಕನಾಗಿ ವರ್ಧನ್‌ ತೀರ್ಥಹಳ್ಳಿ ಪಾತ್ರಕ್ಕೆ ಸಾಕಷ್ಟು ಪರಿಶ್ರಮ ಹಾಕಿರುವುದು ಕಾಣುತ್ತದೆ.

ಅಭಿನಯದಲ್ಲಿ ಇನ್ನಷ್ಟು ಮಾಗಿದರೆ, ವರ್ಧನ್‌ ಮಾಸ್‌ ಹೀರೋ ಆಗಬಲ್ಲರು. ರಾಘವ ನಾಗ್‌, ಬಿಂಬಶ್ರೀ ನೀನಾಸಂ, ಸೌಮ್ಯ ಅವರ ಅಭಿನಯ ಪರವಾಗಿಲ್ಲ ಎನ್ನಬಹುದಷ್ಟೇ. ಖಳನಾಯಕನಾಗಿ ಬಲರಾಜವಾಡಿ ಎಂದಿನಂತೆ ಅಬ್ಬರದ ಅಭಿನಯ ನೀಡಿದ್ದಾರೆ.

ಉಳಿದಂತೆ ಇತರ ಕಲಾವಿದರು ಹಾಗೆ ಬಂದು ಹೀಗೆ ಹೋಗುವಂತಿರುವುದರಿಂದ, ಅವರ ಬಗ್ಗೆ ಹೆಚ್ಚೇನು ಮಾತನಾಡುವಂತಿಲ್ಲ. ತಾಂತ್ರಿಕವಾಗಿ “ಹಫ್ತಾ’ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಛಾಯಾಗ್ರಹಣ, ಸಂಕಲನ ಗಮನ ಸೆಳೆಯುತ್ತದೆ.

ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತ ಚೆನ್ನಾಗಿದ್ದರೆ, ಜಿ. ಯಾರ್ಡ್ಲಿ ಸಂಗೀತದ ಹಾಡುಗಳು ಕಿವಿಯಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಒಟ್ಟಾರೆ ಪಕ್ಕಾ ಮಾಸ್‌ ಆಡಿಯನ್ಸ್‌ಗೆಂದೇ ಮಾಡಲಾದ “ಹಫ್ತಾ’ ಆ್ಯಕ್ಷನ್‌ ಪ್ರಿಯರಿಗೆ ಹೆಚ್ಚು ಇಷ್ಟವಾದೀತು.

ಚಿತ್ರ: ಹಫ್ತಾ
ನಿರ್ಮಾಣ: ಮೈತ್ರಿ ಮಂಜುನಾಥ್‌, ಬಾಲರಾಜ್‌
ನಿರ್ದೇಶನ: ಪ್ರಕಾಶ್‌ ಹೆಬ್ಬಾಳ
ತಾರಾಗಣ: ವರ್ಧನ್‌ ತೀರ್ಥಹಳ್ಳಿ, ರಾಘವ್‌ ನಾಗ್‌, ಬಿಂಬಶ್ರೀ ನೀನಾಸಂ, ಸೌಮ್ಯ ತತೀರ, ಬಲ ರಾಜವಾಡಿ, ದಶಾವರ ಚಂದ್ರು, ಉಗ್ರಂ ರವಿ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next