Advertisement

ಮನೋರಂಜನೆಗಾಗಿ  ಗೇಮಿಂಗ್‌ ಕಂಪ್ಯೂಟರ್‌

12:37 PM Nov 09, 2018 | |

ಟೆಕ್‌ ಜಗತ್ತಿನೊಳಗೆ ಹೊರ ಜಗತ್ತನ್ನೇ ಮರೆಸುವ ಸಂಗತಿಗಳು ಹಲವಾರಿವೆ. ಅವುಗಳಲ್ಲೊಂದು ಗೇಮಿಂಗ್‌ ಕಂಪ್ಯೂಟರ್‌. ಯುವ ಜನರಿಗೆ ಹುಚ್ಚು ಹಿಡಿಸುವ, ಹೊಸ ಹೊಸ ಆಟಗಳಲ್ಲಿ ತಲ್ಲೀನರನ್ನಾಗಿ ಮಾಡುವ ಶಕ್ತಿ ಇವುಗಳದ್ದು. ಬೆಲೆಯಲ್ಲಿ ದುಬಾರಿಯಾದರೂ ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಲ್ಲವು. ಸದ್ಯ ಮಾರುಕಟ್ಟೆಯಲ್ಲಿ ಇವುಗಳದ್ದೇ ಟ್ರೆಂಡ್‌ ಸೃಷ್ಟಿಯಾಗಿದ್ದು, ಖರೀದಿಗೆ ಮುಗಿ ಬೀಳುವಂತೆ ಮಾಡಿವೆ. 

Advertisement

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಮನುಷ್ಯನ ಎಲ್ಲ ಕೆಲಸಗಳನ್ನು ತಂತ್ರಜ್ಞಾನಗಳೇ ಮಾಡಲು ಶುರು ಮಾಡಿದವು. ಇದರಿಂದ ಮನುಷ್ಯನಿಗೆ ಕೆಲಸ ಕಡಿಮೆಯಾಗಿ ಎಲ್ಲವೂ ತಂತ್ರಜ್ಞಾನಾಧಾರಿತವಾಗಿಯೇ ನಡೆದು ಹೋದವು. ಆದರೆ ಕಂಪ್ಯೂಟರ್‌ ಎನ್ನುವ ಮಹಾಮಾಯೆಯೊಂದು ಜಗತ್ತಿಗೆ ಕಾಲಿಟ್ಟ ಮೇಲಂತೂ ಟೆಕ್‌ ಲೋಕದಲ್ಲಿ ಹೊಸ ತಲ್ಲಣಗಳೇ ಸೃಷ್ಟಿಯಾದವು. ಯಂತ್ರಮಾನವನೆಂದೇ ಖ್ಯಾತಿಗೊಂಡ ಈ ಕಂಪ್ಯೂಟರ್‌ ಕಾಲಕ್ಕೆ ತಕ್ಕಂತೆಯೇ ಬದಲಾಗಿ ಹೊಸ ಹೊಸ ಐಡಿಯಾ, ಹೊಸ ಸಾಧನಗಳನ್ನು ಪರಿಚಯಿಸುತ್ತಾ ಬಂತು.

ಆಟಕ್ಕೂ ಕಂಪ್ಯೂಟರ್‌
ಎಷ್ಟೆಂದರೆ ಈ ಕಂಪ್ಯೂಟರ್‌ ಮೂಲಕ ಕೇವಲ ನಮ್ಮ ಕೆಲಸಗಳು ಮಾತ್ರವಲ್ಲದೆ, ಮನುಷ್ಯನ ಸ್ಮರಣಶಕ್ತಿಗಿಂತಲೂ ಹೆಚ್ಚು ಸ್ಮರಣ ಶಕ್ತಿಯುಳ್ಳ ಮತ್ತು ಅವುಗಳನ್ನು ದೀರ್ಘ‌ಕಾಲದವರೆಗೂ ಸಂಗ್ರಹಿಸಿಡಬಲ್ಲ ಎಲ್ಲಾ ರೀತಿಯ ಸಾಧನಗಳನ್ನು ಈ ಕಂಪ್ಯೂಟರ್‌ ಲೋಕ ಪರಿಚಯಿಸಿತು. ಕ್ರಮೇಣ ಕಂಪ್ಯೂಟರ್‌ನಲ್ಲಿ ಇನ್ನಷ್ಟು ಹೊಸತನಗಳು ಸೃಷ್ಟಿಯಾಗತೊಡಗಿದವು. ಕಂಪ್ಯೂಟರ್‌ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಆಗಿ ಸ್ಮಾರ್ಟ್‌ ರೂಪ ತಳೆದ ಮೇಲಂತೂ ಇನ್ನಷ್ಟು ಹೊಸ ಹೊಸ ಫೀಚರ್‌ಗಳು ಬರತೊಡಗಿದವು. ಅವುಗಳಲ್ಲಿ ವೀಡಿಯೋ ಗೇಮ್ಸ್‌ಗಳೂ ಒಂದು. ವೀಡಿಯೋ ಗೇಮ್‌ಗಳ ಆಟಕ್ಕಾಗಿ ಗೇಮಿಂಗ್‌ ಕಂಪ್ಯೂಟರ್‌ನ್ನೂ  ಮಾರುಕಟ್ಟೆಗೆ ಪರಿಚಯಿಸಲಾಯಿತು.

ಗೇಮಿಂಗ್‌ ಕಂಪ್ಯೂಟರ್‌
ಗೇಮಿಂಗ್‌ ಕಂಪ್ಯೂಟರ್‌ ಎಂಬುದು ವೀಡಿಯೋ ಗೇಮ್ಸ್‌ಗಳಿಗೆ ಒತ್ತುಕೊಟ್ಟು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿರುವ ಕಂಪ್ಯೂಟರ್‌ ಆಗಿದೆ. ನಾನಾ ರೀತಿಯ ಸವಾಲು, ಮನುಷ್ಯನ ಬುದ್ಧಿಶಕ್ತಿಗೆ ಕೆಲಸ ಕೊಡುವಂತಹ ಗೇಮ್ಸ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಮನರಂಜನೆಯೊಂದಿಗೆ ಬುದ್ಧಿ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ. ಇದು ಪರ್ಫಾಮೆನ್ಸ್‌ ಒಳಗೊಂಡ ಕಂಪ್ಯೂಟರ್‌ ಆಗಿದೆ. ವೀಡಿಯೋ ಕಾರ್ಡ್‌ಗಳು, ಹೈ ಕೋರ್‌ ಕೌಂಟಿಂಗ್‌ ಸಿಪಿಯು, ಸೌಂಡ್‌ ಕಾರ್ಡ್‌, ಗ್ರಾಫಿಕ್‌ ಕಾರ್ಡ್‌, ಪ್ರೊಸೆಸರ್, ಮದರ್‌ ಬೋರ್ಡ್‌, ಮೆಮೋರಿ, ಡಿಡಿಆರ್‌ ಮೆಮೋರಿ, ಜಿಡಿಡಿಆರ್‌ ಮೆಮೋರಿ, ಹೈ ಬ್ಯಾಂಡ್‌ ವಿಡ್‌¤ ಮೆಮೋರಿ, ಸಾಲಿಡ್‌ ಸ್ಟೇಟ್‌ ಡ್ರೈವ್ಸ್‌, ಪವರ್‌ ಸಪ್ಲೈ ಯುನಿಟ್ಸ್‌ಕೂಲಿಂಗ್‌ ಸಿಸ್ಟಮ್ಸ್‌, ಕಂಪ್ಯೂಟರ್‌ ಕೇಸ್‌ ಮುಂತಾದವುಗಳನ್ನು ಒಳಗೊಂಡಿದೆ. ಸದ್ಯ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ ಗೇಮಿಂಗ್‌ ಕಂಪ್ಯೂಟರ್‌ದ್ದೇ ಹವಾ. ಗೇಮಿಂಗ್‌ ಡೆಸ್ಕ್ಟಾಪ್‌ ಗಳನ್ನು  ಹೆಚ್ಚಿನ ಪ್ರಮಾಣದಲ್ಲಿ ಗೇಮ್‌ ಆಡುವುದಕ್ಕಾಗಿಯೇ ಬಳಕೆ ಮಾಡಿಕೊಳ್ಳುವವರು ಹೆಚ್ಚಿದ್ದಾರೆ.

ಕೂಲಿಂಗ್‌ ಸೊಲ್ಯೂಶನ್‌ ಫ್ಯಾನ್‌
ಕೆಲವು ಪ್ರಸಿದ್ಧ ಕಂಪೆನಿಗಳ ಗೇಮಿಂಗ್‌ ಕಂಪ್ಯೂಟರ್‌ಗಳಲ್ಲಿ ಕೂಲಿಂಗ್‌ ಸೊಲ್ಯೂಶನ್‌ ಫ್ಯಾನ್‌ ಗಳು ಕೂಡಾ ಇವೆ. ಇದರಿಂದ ನಿರಂತರ ಬಳಕೆಯಿಂದ ಕಂಪ್ಯೂಟರ್‌ ಬಿಸಿಯಾಗುವುದು ತಪ್ಪಿ, ಎಷ್ಟು ಹೊತ್ತು ಬೇಕಾದರೂ ಬಳಸಬಹುದಾದ ಫೀಚರ್‌ ಇದಾಗಿದೆ. ಸುಮಾರು 35,000 ರೂ.ಗಳಿಂದ ಆರಂಭವಾಗಿ ಲಕ್ಷಾಂತರ ರೂ.ಗಳ ಬೆಲೆ ಬಾಳುವ ಗೇಮಿಂಗ್‌ ಕಂಪ್ಯೂಟರ್‌ಗಳು ಮಾರುಕಟ್ಟೆಯಲ್ಲಿವೆ. ಕಂಪೆನಿಗಳ ಜನಪ್ರಿಯತೆ, ದೀರ್ಘ‌ಬಾಳಿಕೆ, ಗುಣಮಟ್ಟದ ಮೇಲೆ ಬೆಲೆ ಅವಲಂಬಿತವಾಗಿರುತ್ತದೆ.

Advertisement

ಖರೀದಿಸುವ ಮುನ್ನ
ಯಾವುದೇ ಕಂಪ್ಯೂಟರ್‌ಗಳನ್ನು ಖರೀದಿಸುವ ಮುನ್ನ ಅದರ ಕೆಲಸ ಕಾರ್ಯಗಳು, ಬಿಡಿ ಭಾಗಗಳ ಬಗ್ಗೆ ಸರಿಯಾಗಿ ಗಮನಿಸಿಕೊಳ್ಳುವುದು ಉತ್ತಮ. ಸಾವಿರಾರು ರೂಪಾಯಿ ಹಣ ಕೊಟ್ಟು ಖರೀದಿಸಿದ ಮೇಲೆ ವ್ಯಥೆ ಪಡುವುದಕ್ಕಿಂತ, ಮೊದಲೇ ಯೋಚನೆ ಮತ್ತು ಯೋಜನಾ ಬದ್ಧವಾಗಿ ಗೇಮಿಂಗ್‌ ಕಂಪ್ಯೂಟರ್‌ ಗಳನ್ನು ಆಯ್ಕೆ ಮಾಡಬೇಕು. ಖರೀದಿಸಿದ ಬಳಿಕ ಕಿರಿಕಿರಿ ಎನಿಸುವ ಕೆಲವು ಅನಾವಶ್ಯ ಶಬ್ದಗಳನ್ನು ನಿಯಂತ್ರಿ ಸುವುದಕ್ಕೆ ಪ್ರತ್ಯೇಕ ಫೀಚರ್‌ಗಳನ್ನು ಹಾಕಿಕೊಳ್ಳುವುದು ಅಥವಾ ಹೊಸ ಫೀಚರ್‌ಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವೇ ಎಂಬುದರ ಬಗ್ಗೆಯೂ ಕೂಲಂಕುಷವಾಗಿ ತಿಳಿದುಕೊಳ್ಳುವುದು ಉತ್ತಮ.

ಮುಖ್ಯವಾಗಿ ವೈಬ್ರೇಟ್‌ ಇಲ್ಲದ ಫ್ಯಾನ್‌ಗಳನ್ನೇ ಗೇಮಿಂಗ್‌ ಕಂಪ್ಯೂಟರ್‌ಗೆ ಅಳವಡಿಸಿ ಕೊಳ್ಳಬೇಕು. ಇದರಿಂದ ಶಬ್ದರಹಿತವಾಗಿ ಮತ್ತು ಕಂಪ್ಯೂಟರ್‌ ಅಲ್ಲಾಡದಂತೆ ಕಾಪಾಡಿಕೊಳ್ಳಲು ಸಾಧ್ಯ. ಜತೆಗೆ ಸ್ಪೀಡ್‌ ಕಂಟ್ರೋಲರ್‌ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. 

ಮೌಲ್ಯ-ಬುದ್ಧಿಶಕ್ತಿ ಸಂಯೋಜನೆ
ವಿವಿಧ ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ ಸಂಬಂಧಿ ಕಂಪೆನಿಗಳು ಈ ಗೇಮಿಂಗ್‌ ಕಂಪ್ಯೂಟರ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಗರಿಷ್ಠ ಗೇಮಿಂಗ್‌ ಅನುಭವ, ಮೌಲ್ಯ ಮತ್ತು ಬುದ್ಧಿಶಕ್ತಿಗಳ ಸಂಯೋಜನೆಯನ್ನು ಒದಗಿಸುವಲ್ಲಿ ಸಫಲವಾಗಿವೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಿಸಿ ಕೆಟಗರಿಯ ಪೈಕಿ ಗೇಮಿಂಗ್‌ ಅಗ್ರಸ್ಥಾನದಲ್ಲಿದೆ. ಅತ್ಯುತ್ತಮ ರಾಕ್‌ ಸಾಲಿಡ್‌ ಹಾರ್ಡ್‌ವೇರ್‌, ಫೋರ್ಟೆಬಿಲಿಟಿ ಸೌಲಭ್ಯ, ಹೊಸ ಡಿವೈಸ್‌ ವೈ-ಫೈ, ಅತ್ಯುತ್ತಮ ಸೌಂಡ್‌ ಸಿಸ್ಟಮ್‌ ಗಳನ್ನು ಒಳಗೊಂಡ ಗೇಮಿಂಗ್‌ ಕಂಪ್ಯೂಟರ್‌ ಕಂಪೆನಿಯ ಸಾಮರ್ಥ್ಯಕ್ಕನುಗುಣವಾಗಿ ಫೀಚರ್‌ಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತವೆ.

ಧನ್ಯಾ ಬಾಳೆಕಜೆ  

Advertisement

Udayavani is now on Telegram. Click here to join our channel and stay updated with the latest news.

Next