Advertisement

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು

08:13 PM Jun 01, 2020 | Sriram |

ಮನಸ್ತಾಪಗಳ ಮರೆಸಿ ಮನಸ್ಸುಗಳ ಒಂದಾಗಿಸುತ್ತಿದ್ದ ಆಟಗಳು, ಇಂದು ಮನಸ್ಸುಗಳನ್ನು ದೂರಮಾಡುತ್ತಿದೆ ಎಂದೆನಿಸುತ್ತಿದೆ. ನಾಲ್ಕು ಮಂದಿ ಸೇರಿ ಆಡುವ ಆಟಗಳ ಬದಲು ಮಾತೆ ಬಾರದ ಮೊಬೈಲ್‌, ಕಂಪ್ಯೂಟರ್‌ಗಳ ಜತೆಗೂಡಿ ಆಡುವ ಸ್ಥಿತಿ ಬಂದೊದಗಿದೆ. ಇದು ಸುಲಭವಾಗಿದ್ದರೂ, ತನ್ನ ರಸವನ್ನು ಕಳೆದುಕೊಂಡಿದೆ.

Advertisement

ಆಟಗಳ ಬಗ್ಗೆ ಪುರಾಣಗಳಲ್ಲೂ ಪ್ರಸ್ತಾವಗಳು ಇವೆ. ಅವು ಇಂದಿನ ಮಕ್ಕಳು ಕೇಳದ ಆಟಗಳು ಎನಿಸಿದರೂ, ಆಡದ ಆಟಗಳಂತೂ ಅಲ್ಲ. ಅಂದರೆ ಮುಖತಃ ಆಡದಿದ್ದರು, ತಾಂತ್ರಿಕತೆಯ ಮೂಲಕ ಆಡುತ್ತಿದ್ದಾರೆ. ಅಂದು ಮಹಾಭಾರತದ ತಿರುವಿಗೆ ಒಂದು ಕಾರಣವಾದ ಪಗಡೆ ಆಟ ಇಂದು ಲೂಡೋ ಆಗಿ ಮಾರ್ಪಾಡಾಗಿದೆ. ಹಾಗೇಯೆ ಮರಕೋತಿ “ಮಂಕಿ ಗೇಮ್ಸ್‌’ಗಳಾಗಿ, ಕಣ್ಣಾಮುಚ್ಚಾಲೆ “ಹೈಡೆಂಡ್‌ ಸಿಕ್‌ ಗೇಮ್ಸ್‌’ ಆಗಿದೆ. ಹೀಗೆ ಎಲ್ಲ ಆಟಗಳೂ ಹಳೆಯದ್ದೇ ಆದರೂ ಹೆಸರು ಮಾತ್ರ ಹೊಸದು.

ಮಕ್ಕಳಿಗೆ ಆಟ ಎಂದರೆ ಅಚ್ಚುಮೆಚ್ಚು ಎಂಬುದು ಬದಲಾಗದ ಮಾತು. ಬೆಳಗ್ಗೆಯಿಂದ ಸಂಜೆಯ ವರೆಗೂ ಆಡಲು ಬಿಟ್ಟರೆ ಅದೇ ಸ್ವರ್ಗ ಅವರಿಗೆ. ಕೆಲಸಕ್ಕೆಂದು ಕಳಿಸಿದರೂ ಅಲ್ಲಿ ಆಡುವ ಮಾರ್ಗವನ್ನು ಅವರು ಕಂಡುಕೊಳ್ಳುತ್ತಿದ್ದರು. ಅದಕ್ಕೆ ಹೇಳಿ ಮಾಡಿಸಿದ ಉದಾಹರಣೆ ಎಂದರೆ ಕೃಷ್ಣನ ಬಾಲ್ಯದ ಕಥೆಗಳು. ಈ ಆಟಗಳು ಮಕ್ಕಳಿಗೆ ನೇರವಾಗಿ ಉಪಯೋಗವಾಗುತ್ತದೆ ಎನಿಸದಿದ್ದರೂ ಅವುಗಳು ಕಲಿಸುತ್ತಿದ್ದ ಪಾಠ ಹಾಗೂ ನೀಡುತ್ತಿದ್ದ ನೆನಪುಗಳು ಅಪಾರವಾದುದು.

ಆಡುವ ಸಮಯದಲ್ಲಿ ಏಳು ಬೀಳು, ಸೋಲು ಗೆಲುವು, ಸುಖ ದುಃಖ, ಪ್ರೀತಿ ಹಾಗೂ ಸಂಬಂಧ, ಗೆಳೆತನ ಮುಂತಾದವನ್ನು ತಮಗರಿವಿಲ್ಲದೆ ಕಲಿಯುತ್ತಿದ್ದರು. ಹೀಗಾಗಿಯೇ ನಮ್ಮ ಹಿರಿಯರಲ್ಲಿ ಭಾವನೆಗಳಿಗೆ ಹೆಚ್ಚು ಬೆಲೆ ಇದ್ದದ್ದು. ಇಂದು ಮಕ್ಕಳು ಆಡಲು ಇಚ್ಚಿಸುತ್ತಾರೆ ನಿಜ. ಆದರೆ ಅದು ಜೀವವೇ ಇಲ್ಲದ ತಾಂತ್ರಿಕ, ಕೃತಕ ಸ್ನೇಹಿತನೊಂದಿಗೆ. ಆಡುವ ಆಟಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಹಾಗೇಂದು ಅದನ್ನು ಮೊದಲಿನ ಆಟಗಳಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಈ ಆಟಗಳು ಭಾವನೆಗಳನ್ನು ಕಲಿಸುವ ಬದಲಾಗಿ ಕೃತಕ ಬದುಕಿನತ್ತ ಕೊಂಡೊಯ್ಯುತ್ತಿದೆ. ಸೋತರೆ ಗೆಲ್ಲಲು ಹುರಿದುಂಬಿಸುವುದಿಲ್ಲ, “ಯು ಲೋಸ್ಟ್‌ ದಿ ಗೇಮ್‌’ ಎಂದು ಆತ್ಮವಿಶ್ವಾಸವನ್ನು ಇನ್ನೂ ಕುಗ್ಗಿಸುತ್ತದೆ. ಭಾಂದವ್ಯಗಳನ್ನು ಬೆಳೆಸುವುದಿಲ್ಲ. ಹೊರತಾಗಿ ಸಂಬಂಧಗಳ ನಡುವೆ ಮಾತನ್ನೇ ಮರೆಸುತ್ತದೆ.

ಆಡುವ ಆಟ ಬರೀ ಮನೋರಂಜನೆಗಾಗಿ ಅಲ್ಲ, ಮನಸ್ಸಿನ ನೆಮ್ಮದಿಗಾಗಿ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಆಟ ಪಾಠ ನಡೆಯಬೇಕಿದ್ದ ಜಾಗದಲ್ಲಿ ಇಂದು ತಾಂತ್ರಿಕ ಜೀವನದ ಭೋದನೆಯಾಗುತ್ತಿದೆ. ಹೆತ್ತವರು ಮಕ್ಕಳನ್ನು ಸ್ನೇಹಿತರೊಂದಿಗೆ ಬೆರೆಯುವುದನ್ನು ಕಲಿಸಬೇಕಾಗಿತ್ತು. ಆದರೆ ಅವರೇ ಇಂದು ಮೊಬೈಲ್‌, ಕಂಪ್ಯೂಟರ್‌ಗಳ ಮುಂದೆ ಮಕ್ಕಳನ್ನು ಹಿಡಿದು ಕೂರಿಸಿ ಅವರ ಸುಂದರ ಬಾಲ್ಯವನ್ನು ಬರಿದಾಗಿಸುತ್ತಿದ್ದಾರೆ.

Advertisement

-ಮೇಘ ಆರ್‌. ಸಾನಾಡಿ,
ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next