ವಾಷಿಂಗ್ಟನ್: ಹಾಲಿವುಡ್ ಸಿನಿಮಾರಂಗ ಖ್ಯಾತ ನಟನನ್ನು ಕಳೆದುಕೊಂಡಿದೆ. 36ನೇ ವಯಸ್ಸಿನಲ್ಲಿ ಡ್ಯಾರೆನ್ ಕೆಂಟ್ ಇಹಲೋಕ ತ್ಯಜಿಸಿದ್ದಾರೆ.
ಡ್ಯಾರೆನ್ ಕೆಂಟ್ ಅವರು ಶುಕ್ರವಾರ( ಆ.11 ರಂದು) ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಟ್ಯಾಲೆಂಟ್ ಏಜೆನ್ಸಿ ಕ್ಯಾರಿ ಡಾಡ್ ಅಸೋಸಿಯೇಟ್ಸ್, ಆಗಸ್ಟ್ 15 ರಂದು ಅಧಿಕೃತಗೊಳಿಸಿದೆ.
“ನಮ್ಮ ಆತ್ಮೀಯ ಸ್ನೇಹಿತ ಮತ್ತು ಕ್ಲೈಂಟ್ ಡ್ಯಾರೆನ್ ಕೆಂಟ್ ಅವರು ಶುಕ್ರವಾರದಂದು ನಿಧನರಾಗಿದ್ದಾರೆ ಎಂದು ನಾವು ನಿಮಗೆ ತೀವ್ರ ದುಃಖದಿಂದ ಹೇಳಬೇಕಾಗಿದೆ. ಅವರ ಪೋಷಕರು ಮತ್ತು ಆತ್ಮೀಯ ಸ್ನೇಹಿತರು ಅವರ ಪಕ್ಕದಲ್ಲಿದ್ದರು. ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರೀತಿ ಅವರ ಕುಟುಂಬದೊಂದಿಗೆ ಇದೆ. RIP ನನ್ನ ಸ್ನೇಹಿತ” ಎಂದು ಏಜೆನ್ಸಿ ಟ್ವಿಟರ್ ನಲ್ಲಿ ಬರೆದುಕೊಂಡಿದೆ.
ಯಾರು ಈ ಡ್ಯಾರೆನ್ ಕೆಂಟ್?: ಲಂಡನ್ ಮತ್ತು ಉತ್ತರ ಸಮುದ್ರದ ನಡುವಿನ ಆಗ್ನೇಯ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಹುಟ್ಟಿ ಬೆಳೆದ ಡ್ಯಾರೆನ್ ಕೆಂಟ್ 2008 ರಲ್ಲಿ ಬಂದ ʼಮಿರರ್ಸʼ ಎಂಬ ಹಾರಾರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಎಮ್ಮಿ ಪ್ರಶಸ್ತಿ ವಿಜೇತ ‘ಗೇಮ್ ಆಫ್ ಥ್ರೋನ್ಸ್’ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿನ ಅವರ ಅಭಿನಯದಿಂದ ಅಪಾರ ಪ್ರೇಕ್ಷಕರ ಗಮನ ಸೆಳೆದರು. ‘ಡಂಜಿಯನ್ಸ್ ಅಂಡ್ ಡ್ರಾಗನ್ಸ್: ಹಾನರ್ ಅಮಾಂಗ್ ಥೀವ್ಸ್’ (Dungeons and Dragons: Honor Among Thieves) ಸಿನಿಮಾದಲ್ಲಿ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು.
ʼ ‘ಸ್ನೋ ವೈಟ್ ಮತ್ತು ಹಂಟ್ಸ್ ಮ್ಯಾನ್ʼ, ‘ಮಾರ್ಷಲ್ಸ್ ಲಾʼ, ʼಬ್ಲಡಿ ಕಟ್ಸ್ʼ, ʼಬ್ಲಡ್ ಡ್ರೈವ್ʼ,ʼ ಫ್ರಾಂಕೆನ್‌ಸ್ಟೈನ್ ಕ್ರಾನಿಕಲ್ಸ್ʼ, ʼಗ್ರೀನ್ ಫಿಂಗರ್ಸ್ʼ, ʼಹ್ಯಾಪಿ ಅವರ್ಸ್ʼ.. ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.
ನಟ ಮಾತ್ರವಲ್ಲದೆ ಅವರು ಅವಾರ್ಡ್ ವಿನ್ನಿಂಗ್ ಬರಹಗಾರ ಹಾಗೂ ನಿರ್ದೇಶಕರೂ ಆಗಿದ್ದರು. ಅವರ ʼ ಯು ನೋ ಮಿ’ ಸಿನಿಮಾ ಅವರಿಗೆ ಜನವರಿ ಪ್ರಶಸ್ತಿಯನ್ನು ತಂದುಕೊಟ್ಟಿತು.