Advertisement

ಜೂಜು, ಮೋಜಿಗೆ ಬೈಕ್‌ ಕದಿಯುತ್ತಿದ್ದವನ ಸೆರೆ

01:12 PM Oct 19, 2018 | |

ಬೆಂಗಳೂರು: ಗೋವಾದ ಕ್ಯಾಸೀನೊ ಜೂಜು ಅಡ್ಡೆ ಮೇಲೆ ಹಣ ಹೂಡಿಕೆ ಮಾಡಲು ಓಎಲ್‌ಎಕ್ಸ್‌ನಲ್ಲಿ ಜಾಹಿರಾತು ವೀಕ್ಷಿಸಿ ಪರೀûಾರ್ಥ ಚಾಲನೆ ನೆಪದಲ್ಲಿ ದುಬಾರಿ ಮೌಲ್ಯದ ಕೆಟಿಎಂ ಹಾಗೂ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗಳನ್ನೇ ಕಳವು ಮಾಡುತ್ತಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸುಂಕದಕಟ್ಟೆಯ ಮುನೇಶ್ವರ ಲೇಔಟ್‌ನ ಮಂಜನಾಥ ಹೆಗಡೆ (20) ಬಂಧಿತ. ಈತನಿಂದ 12 ಲಕ್ಷ ರೂ. ಮೌಲ್ಯದ ಕೆಟಿಎಂ ಮತ್ತು ಬುಲೆಟ್‌ ಸೇರಿ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ತನ್ನ ಮೋಜಿನ ಜೀವನಕ್ಕಾಗಿಯೇ ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ಮಂಜುನಾಥ ಹೆಗಡೆ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ. ಈತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ. ಈ ಮಧ್ಯೆ ಗೋವಾದ ಕ್ಯಾಸೀನೊ ಜೂಜು ಅಡ್ಡೆ ಬಗ್ಗೆ ತಿಳಿದುಕೊಂಡಿದ್ದ ಈತ, ಒಂದೆರಡು ಬಾರಿ ತನ್ನ ಸ್ನೇಹಿತರ ಜತೆ ಹೋಗಿ ಜೂಜು ಆಡಿದ್ದ. ಈ ಮೂಲಕ ಬರುತ್ತಿದ್ದ ಅಲ್ಪಸ್ವಲ್ಪ ಹಣದಿಂದ ಮೋಜಿನ ಜೀವನಕ್ಕೆ ಮಾರು ಹೋಗಿದ್ದ ಎಂದು ಪೊಲೀಸರು ಹೇಳಿದರು.

ಓಎಲ್‌ಎಕ್ಸ್‌ ಜಾಹಿರಾತು ನೋಡಿ ಕಳವು: ದುಬಾರಿ ಮೌಲ್ಯದ ಕೆಟಿಎಂ ಹಾಗೂ ಬುಲೆಟ್‌ಗಳ ಮಾರಾಟ ಬಗ್ಗೆ ಓಎಲ್‌ಎಕ್ಸ್‌ನಲ್ಲಿ ಜಾಹಿರಾತು ನೀಡುತ್ತಿದ್ದ ವಾಹನಗಳ ಮಾಲೀಕರನ್ನು ಸಂಪರ್ಕಿಸುತ್ತಿದ್ದ ಆರೋಪಿ ತಾನೇ ನಿಗದಿ ಮಾಡಿದ ಸ್ಥಳಕ್ಕೆ ಕರೆಸಿಕೊಳ್ಳುತ್ತಿದ್ದ. ಬಳಿಕ ವಾಹನಗಳ ನಕಲು ಪ್ರತಿ ಪಡೆದು ತನ್ನ ಬಳಿ ಇಟ್ಟುಕೊಂಡು, ಪರೀûಾರ್ಥ ಚಾಲನೆಗಾಗಿ ಕೊಂಡೊಯ್ಯುತ್ತಿದ್ದ.

ಕೆಲ ದೂರ ಸಾಗುತ್ತಿದ್ದಂತೆ ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಳ್ಳುತ್ತಿದ್ದ. ಬಹಳ ಹೊತ್ತಾದರೂ ಆರೋಪಿ ಬಾರದ್ದರಿಂದ ಅನುಮಾನಗೊಂಡ ಮಾಲೀಕರು ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಆಗಿರುತ್ತಿತ್ತು. ಈ ರೀತಿ ಸುಮಾರು ಆರೇಳು ಮಂದಿಗೆ ವಂಚಿಸಿದ್ದಾನೆ.

Advertisement

20 ಸಿಮ್‌, 10 ಮೊಬೈಲ್‌: ಆರೋಪಿ ಪ್ರತಿ ಬಾರಿ ಕಳವು ಮಾಡುವಾಗಲೂ ದ್ವಿಚಕ್ರ ವಾಹನ ಮಾಲೀಕರನ್ನು ಸಂಪರ್ಕಿಸಲು ಹೊಸ ಸಿಮ್‌ಕಾರ್ಡ್‌ಗಳನ್ನು ಖರೀದಿಸುತ್ತಿದ್ದ. ಒಂದು ಸಿಮ್‌ ಒಬ್ಬರಿಗೆ ಮಾತ್ರ ಉಪಯೋಗಿಸಿ, ಬಳಿಕ ಬೇರೆ ಯಾರಿಗೂ ಉಪಯೋಗಿಸುತ್ತಿರಲಿಲ್ಲ. ಈ ರೀತಿ ಸುಮಾರು 20 ಸಿಮ್‌ಕಾರ್ಡ್‌ಗಳು ಹಾಗೂ 10 ಮೊಬೈಲ್‌ಗ‌ಳನ್ನು ಬಳಕೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕಳವು ಮಾಡುತ್ತಿದ್ದ ಕೆಟಿಎಂ ಮತ್ತು ಬುಲೆಟ್‌ಗಳನ್ನು ತನ್ನ ಪರಿಚಯಸ್ಥ ಯುವಕರು ಹಾಗೂ ಇತರರಿಗೆ ಮನೆಯಲ್ಲಿ ಕಷ್ಟವಿದೆ ಹೀಗಾಗಿ ವಾಹನ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿ ನಂಬಿಸುತ್ತಿದ್ದ. ಹಣದೊಂದಿಗೆ ಬಳಿಕ ಗೋವಾದ ಕ್ಯಾಸಿನೋ ಜೂಜು ಅಡ್ಡೆಗೆ ಹೋಗುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next