ವಿಧಾನಸಭೆ: ಗ್ಯಾಂಬ್ಲಿಂಗ್ ಮುಕ್ತ ಕರ್ನಾಟಕ ಮಾಡುವುದು ರಾಜ್ಯ ಸರ್ಕಾರದ ಗುರಿ. ಹಾಗಾಗಿ ಜೂಜಾಟ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಗ್ಯಾಂಬ್ಲಿಂಗ್ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಕುಣಿಗಲ್ ಶಾಸಕ ಡಾ. ರಂಗನಾಥ್ ಎಚ್.ಡಿ. ಪ್ರಶ್ನೆಗೆ ಉತ್ತರಿಸಿದ ಸಚಿವರು, ಘಟಕವಾರು ಪೊಲೀಸ್ ಸಿಬ್ಬಂದಿ ಮತ್ತು ಗುಪ್ತಚರ ಇಲಾಖೆ ಸಿಬ್ಬಂದಿ ಸಂಪರ್ಕದಲ್ಲಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ಯಾಂಬ್ಲಿಂಗ್ ವಿರುದ್ಧ ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ಜರುಗಿಸಲು ಕರ್ನಾಟಕ ಪೊಲೀಸ್ (ತಿದ್ದುಪಡಿ) ಬಿಲ್-2021ನ್ನು ಮಂಡಿಸಿ ಕಾನೂನು ಪರಿಷ್ಕರಿಸಿದ ಬಳಿಕ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:8 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಿಸಿದ ಶಿರಸಿ ಉರಗ ತಜ್ಞ ಪ್ರಶಾಂತ ಹುಲೇಕಲ್
ಶಾಸಕ ಡಿ.ಸಿ. ತಮ್ಮಣ್ಣ ಅವರೂ ದನಿಗೂಡಿಸಿ, ಈ ದಂಧೆಯನ್ನು ನಿಗ್ರಹಿಸಬೇಕೆಂದು ಮತ್ತು ಇದರಿಂದ ರೌಡಿಯಿಸಂ ಹೆಚ್ಚಾಗುತ್ತಿದೆ ಎಂದು ಹೇಳಿದರು. ರಂಗನಾಥ್ ಮಾತು ಮುಂದುವರಿಸಿ, ಪರಪ್ಪನ ಅಗ್ರಹಾರ ಜೈಲಿನ ಕೆಲ ಕೈದಿಗಳು ಏಜೆಂಟರ ಮೂಲಕ ಗ್ಯಾಂಬ್ಲಿಂಗ್ ಮಾಡಿಸುತ್ತಿದ್ದಾರೆ. ಹಾಗೂ ಕೆಲವು ಜಾಮೀನುಪಡೆದ ಕೈದಿಗಳು ಕೂಡಾ ಈ ದಂಧೆ ನಡೆಸುತ್ತಿದ್ದಾರೆ ಎಂದು ಸದನದ ಗಮನಸೆಳೆದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪೊಲೀಸರ ಜತೆಗೂಡಿ ಈ ದಂಧೆ ನಿಗ್ರಹಿಸಬಹುದು. ಆ ಬಗ್ಗೆ ಚರ್ಚಿಸುವ ಆಗತ್ಯವಿಲ್ಲ ಎಂದರು. ಆಗ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಸಂಬಂಧ ಕಾನೂನು ಬಲಗೊಳ್ಳುವ ಅಗತ್ಯವಿದೆ. ಅಂತಹವರನ್ನು ಜಾಮೀನುರಹಿತ ಪ್ರಕರಣಗಳನ್ನಾಗಿ ಮಾಡಿ ಕಠಿಣ ಶಿಕ್ಷೆ ನೀಡುವ ಆಗತ್ಯವಿದೆ. ಕಾನೂನು ತಿದ್ದುಪಡಿ ಮಾಡಿ ಕಾನೂನು ಬಲಪಡಿಸಲಾಗುವುದು ಎಂದು ಹೇಳಿದರು.