ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಇತ್ತೀಚೆಗೆ ತಮ್ಮ ಖಡಕ್ ಟ್ವೀಟ್ ಗಳಿಂದಲೇ ಸುದ್ದಿಯಲ್ಲಿದ್ದಾರೆ. ಮತ್ತೆ ಟ್ವೀಟರ್ ನಲ್ಲಿ ಕಿಡಿ ಕಾರಿರುವ ಗೌತಿ ಈ ಬಾರಿ ಮಾಜಿ ಆಟಗಾರರಾದ ಚೇತನ್ ಚೌಹಾಣ್ ಮತ್ತು ಬಿಷನ್ ಸಿಂಗ್ ಬೇಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶನಿವಾರ ವೆಸ್ಟ್ ಇಂಡೀಸ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನವದೀಪ್ ಸೈನಿಯ ಈ ಮಟ್ಟಿನ ಬೆಳವಣಿಗೆಯ ಹಿಂದೆ ಇರುವ ಶಕ್ತಿ ಗಂಭೀರ್ ಎಂಬ ವಿಷಯ ಈಗ ಜಗಜ್ಜಾಹೀರಾಗಿದೆ. ಪ್ರತಿಭಾನ್ವಿತ ಬೌಲರ್ ಆಗಿರುವ ಸೈನಿಯನ್ನು ದೆಹಲಿ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲು ಗಂಭೀರ್ ಪ್ರಯತ್ನ ಪಟ್ಟಾಗ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ವಿರೋಧಿಸಿದ್ದರು.
ಆದರೆ ಗಂಭೀರ್ ಪ್ರಯತ್ನದ ಫಲವಾಗಿ ಸ್ಥಾನ ಪಡೆದಿದ್ದ ಸೈನಿ ತನ್ನ ಅದ್ಭುತ ಬೌಲಿಂಗ್ ನಿಂದ ಭಾರತ ಎ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಶನಿವಾರ ವಿಂಡೀಸ್ ವಿರುದ್ದ ಅಡುವ ಬಳಗದಲ್ಲಿ ಸ್ಥಾನ ಪಡೆದ ಸೈನಿಯನ್ನು ಅಭಿನಂಧಿಸಿ ಗೌತಿ ಟ್ವೀಟ್ ಮಾಡಿದ್ದರು. “ಭಾರತ ತಂಡಕ್ಕೆ ಪದಾರ್ಪಣೆ ಮಾಡುತ್ತಿರುವುದಕ್ಕೆ ಸೈನಿಗೆ ಅಭಿನಂದನೆಗಳು. ಸೈನಿ ನೀನು ಬೌಲಿಂಗ್ ನಡೆಸುವ ಮೊದಲೇ ಎರಡು ವಿಕೆಟ್ ಉರುಳಿಸಿದ್ದೀಯ. ನೀನು ಅಂಗಳಕ್ಕೆ ಇಳಿಯುವ ಮೊದಲೇ ನಿನ್ನ ಕ್ರಿಕೆಟ್ ಜೀವನವನ್ನು ಮುಗಿಸಲು ಯೋಚನೆ ಮಾಡಿದ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ರ ಮಧ್ಯದ ವಿಕೆಟ್ ಈಗ ಉರುಳಿ ಬಿದ್ದಿದೆ”. ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.
ವಿಂಡೀಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ ನವದೀಪ್ ಸೈನಿ ಮೂರು ವಿಕೆಟ್ ಕಿತ್ತರು. ಈ ಪಂದ್ಯವನ್ನು ಭಾರತ ನಾಲ್ಕು ವಿಕೆಟ್ ಗಳ ಅಂತರದಿಂದ ಗೆದ್ದರೆ, ಸೈನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.