Advertisement

ಗೇಲ್‌ ಪೈಪ್‌ಲೈನ್‌: ಸಮುದ್ರ ತಡಿಯಲ್ಲೋ ? ರೈತರ ಭೂಮಿಯಲ್ಲೋ?

12:20 PM Dec 18, 2017 | Team Udayavani |

ಮಹಾನಗರ: ಕರಾವಳಿ ಭಾಗದಲ್ಲಿ ತೀವ್ರ ವಿರೋಧ ಎದುರಿಸಿ, ಕೆಲವು ವರ್ಷಗಳಿಂದ ಮರೆಯಾಗಿದ್ದ, ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಕಂಪೆನಿಯ (ಗೇಲ್) ಬಹು ನಿರೀಕ್ಷಿತ ಕೊಚ್ಚಿ -ಕುಟ್ಟನಾಡು -ಮಂಗಳೂರು ಗ್ಯಾಸ್‌ ಪೈಪ್‌ಲೈನ್‌ ಯೋಜನೆಗಾಗಿ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಮತ್ತೆ ಜೀವ ದೊರಕಲಿದೆ. ಪೈಪ್‌ಲೈನ್‌ ಕೃಷಿಕರ ಭೂಮಿಯಲ್ಲಿ ಸಾಗುವುದೇ ಅಥವಾ ಸಮುದ್ರದ ಬದಿಯಲ್ಲಿ ಹಾಕುವುದೇ? ಎಂಬುದು ಡಿ.22ರಂದು ಮಂಗಳೂರಿನಲ್ಲಿ ನಡೆಯುವ ಭೂಮಾಲಕರ ಸಭೆಯಲ್ಲಿ ನಿರ್ಧಾರವಾಗಲಿದೆ.

Advertisement

ಕೇರಳದ ಕೊಚ್ಚಿಯಿಂದ ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಸುವ ನಿಟ್ಟಿನಲ್ಲಿ ಕೃಷಿಕರ ಭೂಮಿಯಲ್ಲಿ ಪೈಪ್‌ ಲೈನ್‌ ಸಾಗುವುದಾದರೆ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ 16 ಹಳ್ಳಿಗಳನ್ನು ಯೋಜನೆ ಒಳಗೊಳ್ಳುತ್ತದೆ.

ಗ್ಯಾಸ್‌ ಪೈಪ್‌ಲೈನ್‌ ಅನ್ನು ಕೃಷಿಕರ ಭೂಮಿಯಲ್ಲಿ ಒಯ್ಯುವ ಬದಲು ಕೇರಳದಿಂದ ಸಮುದ್ರ ಕಿನಾರೆಯಲ್ಲೇ ಮಂಗಳೂರಿಗೆ ತಂದರೆ ಸಮಸ್ಯೆ ಇದೆಯೇ ಎಂಬ ಕುರಿತು ವರದಿ ಸಲ್ಲಿಸುವಂತೆ ಈ ಹಿಂದಿನ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ತಿಳಿಸಿದ್ದರು. ಇದಕ್ಕಾಗಿ ಎನ್‌ಐಟಿಕೆ ತಜ್ಞರು, ಕಂದಾಯ ಇಲಾಖೆ ಹಾಗೂ ಸ್ಥಳೀಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. 10 ದಿನಗಳ ಹಿಂದೆ ಸಭೆ ಸೇರಿದ ಸಮಿತಿ ಸದಸ್ಯರು, ಸಮುದ್ರ ದಡದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವುದು ಕಷ್ಟ ಎಂಬುದನ್ನು ಸ್ಥಳೀಯ ಮುಖಂಡರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಒಪ್ಪದ ಹೋರಾಟಗಾರರು, ಸಮುದ್ರ ಬದಿಯಲ್ಲೇ ಪೈಪ್‌ಲೈನ್‌ ಸಾಗಲಿ; ಇಲ್ಲವಾದರೆ, ರೈತರಿಗೆ ಭೂಮಿಯಹಾಲಿ ಮೌಲ್ಯಕ್ಕಿಂತ ಮೂರು ಪಟ್ಟು ಅಧಿಕ ಪರಿಹಾರವನ್ನು ನ್ಯಾಯಬದ್ಧ ವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೂ, ಅಂತಿಮವಾಗಿ ಯಾವ ಭಾಗದಲ್ಲಿ ಪೈಪ್‌ಲೈನ್‌ ಸಾಗಿಸುವುದು ಎಂಬುದನ್ನು ಡಿ. 22ರ ಸಭೆಯಲ್ಲಿ ನಿರ್ಧರಿಸಲಾಗುವುದು. ಭೂಮಿ ಕಳೆದುಕೊಳ್ಳುವವರ ಉಪಸ್ಥಿತಿಯಲ್ಲಿ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ
ಎಂದು ಸ್ಥಳೀಯ ಮುಖಂಡರು ಸ್ಪಷ್ಟಪಡಿಸಿದ್ದಾರೆ. ನೂತನ ಜಿಲ್ಲಾಧಿಕಾರಿ ಶಶಿಕುಮಾರ್‌ ಸೆಂಥಿಲ್‌ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.

ಕೈರಂಗಳದ ಮೂಲಕ ಕರಾವಳಿ ಪ್ರವೇಶ
ಸುಮಾರು 450 ಕಿ.ಮೀ. ಉದ್ದದ ಗೈಲ್‌ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲು ಕೇಂದ್ರದ ಅನುಮತಿ 2007ರಲ್ಲೇ ದೊರಕಿದೆ. ಭಾರೀ ಪ್ರತಿರೋಧದ ನಡುವೆಯೂ ಕೇರಳ ಹಾಗೂ ತಮಿಳುನಾಡಿನಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಲ್ಲಿಕೋಟೆ-ಕಣ್ಣೂರು-ಕಾಸರಗೋಡು ಮೂಲಕ ಈ ಅನಿಲ ಕೊಳವೆ ಮಾರ್ಗ ಸಾಗಿ, ಕೈರಂಗಳ ಗ್ರಾಮದ ಶಾರದಾ ಗಣಪತಿ ಪ್ರಾಥಮಿಕ ಶಾಲೆ ಸಮೀಪ ಇದು ಕರ್ನಾಟಕದ ಗಡಿಯನ್ನು ಪ್ರವೇಶಿಸಿಸಲಿದೆ. ಅಲ್ಲಿಂದ ಮುಂದೆ ಮುಡಿಪು, ಕೊಣಾಜೆ, ಬಂಟ್ವಾಳದ ಅರ್ಕುಳ, ಪುದು, ಮಲ್ಲೂರು, ಅದ್ಯಪಾಡಿ, ಕೆಂಜಾರು, ತೋಕೂರು ಮೂಲಕ 35 ಕಿ.ಮೀ. ಸಾಗಿ, ಎಂಸಿಎಫ್‌ ಪ್ರವೇಶಿಸಲಿದೆ. ತೋಕೂರು ಗ್ರಾಮದ- 2.6 ಎಕರೆ, ಕೆಂಜಾರು – 5.1, ಮಳವೂರು -3.6, ಅದ್ಯಪಾಡಿ – 5.7, ಕಂದಾವರ – 1.5, ಅಡ್ಡೂರು – 5.6, ಮಲ್ಲೂರು – 3.3, ಪಾವೂರು – 5.5, ಮೇರಮಜಲು – 6.2, ಕೈರಂಗಳ – 4.0, ಅರ್ಕುಳ – 3.8, ಅಮ್ಮುಂಜೆ – 1.7, ಬಾಳೇಪುಣಿ – 0.03 ಎಕರೆ ಭೂಮಿ ಗ್ಯಾಸ್‌ ಪೈಪ್‌ಲೈನ್‌ಗೆ ಹೋಗಲಿದೆ. ಮೂಲ ಪ್ರಸ್ತಾವನೆಯಂತೆ ಈ ಯೋಜನೆ 2012 -13ರ ಮಾರ್ಚ್‌ಗೆ ಪೂರ್ಣಗೊಳ್ಳಬೇಕಿತ್ತು

Advertisement

ಪೈಪ್‌ ಸಾಗಲು ಬೇಕು 60 ಅಡಿ ಸ್ಥಳ
ಗೇಲ್‌ ಪೈಪ್‌ಲೈನ್‌ ಮೂಲಕ ಆರಂಭದಲ್ಲಿ ಎಂಸಿಎಫ್‌ಗೆ ಮಾತ್ರ ಅನಿಲ ಪೂರೈಕೆಯಾಗಲಿದೆ. ಮುಂದೆ ಪ್ರತ್ಯೇಕ ಘಟಕ ನಿರ್ಮಾಣ ಮಾಡಿ, ಕೊಳವೆ ಮೂಲಕ ಮನೆಗಳಿಗೆ, ಹೊಟೇಲ್‌ಗ‌ಳಿಗೆ ಅನಿಲ ಪೂರೈಕೆ ಮಾಡುವ ಉದ್ದೇಶವೂ ಇದೆ. ಎಲ್‌ ಪಿಜಿಗಿಂತ ಕಡಿಮೆ ದರದಲ್ಲಿ ಹಾಗೂ ದಿನಪೂರ್ತಿ ಅನಿಲ ಪೂರೈಕೆ ಸಾಧ್ಯವಿದೆ. ಪೈಪ್‌ ಲೈನ್‌ ಹಾಕಲು ಸ್ವಾಧೀನಪಡಿಸುವ ಸ್ಥಳಕ್ಕೆ ನಷ್ಟ ಪರಿಹಾರ ನೀಡಲಾಗುತ್ತದೆ. ಅಲ್ಲದೆ ಜಾಗವನ್ನು ಮಾಲಕರಿಗೆ ಬಿಟ್ಟು ಕೊಡಲಾಗುತ್ತಿದೆ. ಸುಮಾರು 60 ಅಡಿ ಜಾಗದಲ್ಲಿ ಪೈಪ್‌ ಹಾದು ಹೋಗಲಿದ್ದು, ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಹಾಗೂ ಶಾಶ್ವತ ಕೃಷಿಗೆ
ಅವಕಾಶ ಇಲ್ಲ. ತರಕಾರಿ ಸಹಿತ ತಾತ್ಕಾಲಿಕ ಬೆಳೆಗಳನ್ನು ಬೆಳೆಯಲು ಅವಕಾಶ ಇದೆ ಎಂಬುದು ಗೇಲ್‌ ಕಂಪೆನಿಯ ಹೇಳಿಕೆ.

800ರಷ್ಟು ರೈತರ ಹಿತವೇ ನಮಗೆ ಮುಖ್ಯ
ರೈತರ ಜಾಗದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಬದಲು ಸಮುದ್ರದ ಬದಿಯಲ್ಲಿ ಹಾಕಿದರೆ ಅನುಕೂಲ ಎಂಬುದನ್ನು ನಾವು ಜಿಲ್ಲಾಡಳಿತಕ್ಕೆ ತಿಳಿಸಿದ್ದೇವೆ. ರೈತರ ಭೂಮಿಯೇ ಬೇಕಿದ್ದರೆ ಈಗಿನ ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಅಧಿಕ ಮೌಲ್ಯ ನೀಡಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ನಾವು ಯಾವುದೇ ಕಾರಣಕ್ಕೂ ಭೂಮಿ ಬಿಟ್ಟು ಕೊಡಲಾರೆವು. 800ರಷ್ಟು ರೈತರ ಹಿತ ನಮಗೆ ಮುಖ್ಯ. ಕಡಲ ಬದಿಯಲ್ಲಿ ಅಳವಡಿಸಲು ಕಾನೂನಿನ ನೆಪ ಹೇಳುವ ಕಂಪೆನಿ, ಪಾವೂರಿನಿಂದ ಮೇರಮಜಲು ಭಾಗಕ್ಕೆ ನದಿಯ ಮೂಲಕ ಹೇಗೆ ಪೈಪ್‌ಲೈನ್‌ ಅಳವಡಿಸಲಿದ್ದಾರೆ ಎಂಬುದನ್ನು ವಿವರಿಸಲಿ.
ಸಂತೋಷ್‌ ಕುಮಾರ್‌ ರೈ ಬೋಳ್ಯಾರ್‌
   ಹೋರಾಟಗಾರರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next