ಗಜೇಂದ್ರಗಡ: ಪಟ್ಟಣದ ಹೊರವಲಯದ ಗುಡ್ಡದ ಬಳಿ ಪುರಸಭೆಯಿಂದ ನಿರ್ಮಿಸಿರುವ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾಗಿದ್ದು, ವಾಯು ವಿಹಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಕೂಡಲೇ ಪುರಸಭೆಯವರು ಉದ್ಯಾನವನ ಪುನಶ್ಚೇತಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳೀಯ ಇಂಗು ಕೆರೆಯ ಬುಡದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಉದ್ಯಾನವನ ಗಜೇಂದ್ರಗಡ ಜನತೆಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ನಿತ್ಯ ಗಾರ್ಡನ್ ಗೆ ವಾಯು ವಿಹಾರಕ್ಕಾಗಿ ಹಲವಾರು ಜನರು ಆಗಮಿಸುತ್ತಾರೆ. ಆದರೆ ಪುರಸಭೆ ಗಾರ್ಡನನ್ನು ಸಂಪೂರ್ಣ ನಿರ್ಲಕ್ಷಿಸಿದ ಪರಿಣಾಮ ಸ್ಮಶಾನ ರೀತಿಯಲ್ಲಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.
ಉದ್ಯಾನವನದಲ್ಲಿನ ಹಲವು ಪ್ರಬೇಧಗಳ ಗಿಡಗಳಿಗೆ ಸಮರ್ಪಕವಾಗಿ ನೀರುಣಿಸದ ಪರಿಣಾಮ ಗಿಡಗಳು ಸಂಪೂರ್ಣ ಒಣಗಿವೆ. ಜೊತೆಗೆ ಎಲ್ಲೆಂದರಲ್ಲಿಕಸದ ರಾಶಿಗಳು ರಾರಾಜಿಸುತ್ತಿವೆ. ಮಕ್ಕಳ ಆಟಿಕೆ ಸಾಮಾನುಗಳಂತೂ ದುರಸ್ತಿಗೊಂಡು ಚಿಣ್ಣರಿಗೆ ನಿರಾಸೆಯನ್ನುಂಟು ಮಾಡುತ್ತಿವೆ. ಉದ್ಯಾನವನಕ್ಕೆ ಓರ್ವ ಕಾವಲುಗಾರ ಇದ್ದರೂ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಗಾರ್ಡನ್ ಗೆ ಆಗಮಿಸುವ ವೃದ್ಧರು, ಚಿಕ್ಕ ಮಕ್ಕಳು ಇಂತಹ ದೃಶ್ಯ ಕಂಡು ಮುಜುಗರಕ್ಕೆ ಒಳಗಾಗುವಂತಾಗಿದೆ. ಉದ್ಯಾನವನ ತುಂಬೆಲ್ಲಾ ಸಿಗರೇಟ್, ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ.
ಉದ್ಯಾನವದಲ್ಲಿ ಹುಲ್ಲಿನ ಹಾಸಿಗೆ ಮಾಯವಾಗಿ ಸುಟ್ಟ ಕರಿ ನೆಲದ ಹಾಸಿಗೆಯಾಗಿರುವುದರಿಂದ ಉದ್ಯಾನವನ ಅಂದಗೆಟ್ಟಿದೆ. ಸರಿಯಾದ ಫುಟ್‌ಪಾತ್, ನೀರಿನ ವ್ಯವಸ್ಥೆ ಗಳಿಲ್ಲ. ವಿದ್ಯುತ್ ಸಂಪರ್ಕವಂತೂ ಗಗನ ಕುಸುಮವಾಗಿದೆ. ಎತ್ತೆಂದರತ್ತ ಬೆಳೆದ ಗಿಡಗಳ ರೆಂಬೆಕೊಂಬೆಗಳಿಂದಾಗಿ ಉದ್ಯಾನವದಲ್ಲಿ ಓಡಾಡುವವರಿಗೆ ತೀವ್ರ ತೊಂದರೆಯುಂಟಾಗುತ್ತಿವೆ. ಬಾಯ್ತೆರೆದ ನೀರಿನ ಟ್ಯಾಂಕ್ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಮೂರು ಎಕರೆ ವಿಸ್ತೀರ್ಣದಲ್ಲಿರುವ ಉದ್ಯಾನವನ ಗಜೇಂದ್ರಗಡ ಜನತೆಯ ಅಚ್ಚು ಮೆಚ್ಚಿನ ಸ್ಥಳವಾಗಿದ್ದು, ಕೂಡಲೇ ಸ್ಥಳೀಯ ಶಾಸಕರು ಪುರಸಭೆಗೆ ಆದೇಶಿಸಿ ಉದ್ಯಾನವನ ಪುನಶ್ಚೇತನಕ್ಕೆ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.