ಗಜೇಂದ್ರಗಡ: ವಾಯು ವಿವಾಹರ ಜೊತೆಗೆ ಪಟ್ಟಣದ ಜನರ ಮನತಣಿಸುವ ಉದ್ದೇಶದಿಂದ ನಿರ್ಮಿಸಿದ್ದ ಉದ್ಯಾನವನ ಇದೀಗ ಕುರಿಗಳ ದೊಡ್ಡಿಯಾಗಿ ಪರಿವರ್ತನೆಯಾಗಿದೆ.
ಇದು ಪುರಸಭೆ ನಿರ್ವಹಣೆಯಲ್ಲಿದ್ದು, ವಿಶಾಲವಾದ ಹುಲ್ಲಿನ ಹಾಸಿಗೆಯ ಮೈದಾನದಲ್ಲಿ ದನಕರುಗಳು ಮತ್ತು ಕುರಿಗಳ ಹಿಂಡು ತುಂಬಿಕೊಂಡಿವೆ. ಪುರಸಭೆ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗುವುದರ ಜೊತೆಗೆ ಕುರಿಗಾಹಿಗಳ ವಾಸಸ್ಥಾನವಾಗಿದೆ. ಹೀಗಾಗಿ ಉದ್ಯಾವನ ತುಂಬೆಲ್ಲೆ ದನ ಕರುಗಳು ಮತ್ತು ಕುರಿಗಳದ್ದೇ ಪಾರುಪಥ್ಯ ಎಂಬಂತಾಗಿದೆ.
ಮೊದಲೇ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಸರಿಯಾದ ಫುಟಪಾತ್, ನೀರಿನ ವ್ಯವಸ್ಥೆಯಿಲ್ಲ. ವಿದ್ಯುತ್ ಸಂಪರ್ಕವಂತೂ ಗಗನ ಕುಸುಮವಾಗಿದೆ. ಎತ್ತೆಂದರತ್ತ ಬೆಳೆದ ಗಿಡಗಳ ರೆಂಬೆಕೊಂಬೆಗಳಿಂದಾಗಿ ಉದ್ಯಾನವದಲ್ಲಿ ಓಡಾಡುವವರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿವೆ. ಗಬ್ಬೆದ್ದು ನಾರುತ್ತಿರುವ ಉದ್ಯಾನವನಕ್ಕೆ ಹೋಗಲು ಹಿಂಜರಿಯುತ್ತಿದ್ದು, ಇದೀಗ ಕುರಿಗಾಹಿಗಳು ಉದ್ಯಾನವನವನ್ನು ಆಕ್ರಮಿಸಿಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಉದ್ಯಾನವನಕ್ಕೆ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ಕರಿಗಾರರು ತಮ್ಮ ಎಲ್ಲ ಕುರಿಗಳನ್ನು ಗಾರ್ಡನ್‌ನಲ್ಲಿ ಬಿಟ್ಟಿದ್ದಾರೆ. ಕಳೆದೊಂದು ತಿಂಗಳಿಂದ ಕುರಿಗಳು ನಿತ್ಯ ಇಲ್ಲಿಯೇ ಮೇಯಲು ಆಗಮಿಸಿ, ಉದ್ಯಾನವನದಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಬೆಳಗ್ಗೆ ವಾಯು ವಿಹಾರಕ್ಕೆ ಆಗಮಿಸುವವರ ಕಷ್ಟ ಹೇಳ ತೀರದಾಗಿದೆ.
ಉದ್ಯಾನವನಕ್ಕೆ ಓರ್ವ ಕಾವಲುಗಾರ ಇದ್ದರೂ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ಯತೇಚ್ಚವಾಗಿ ನಡೆಯುತ್ತಿವೆ. ಗಾರ್ಡನ್‌ಗೆ ಆಗಮಿಸುವ ಜನರು ಇಂತಹ ದೃಶ್ಯ ಕಂಡು ಮುಜುಗರಕ್ಕೆ ಒಳಗಾಗುವಂತಾಗಿದೆ. ಉದ್ಯಾನವನ ತುಂಬೆಲ್ಲ ಸಿಗರೇಟ್, ಮದ್ಯದ ಬಾಟಲ್ಗಳು ರಾರಾಜಿಸುತ್ತಿರುವುದು ಪುರಸಭೆ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸ್ವಚ್ಛತೆಗಿಲ್ಲ ಆದ್ಯತೆ: ಗುಡ್ಡದ ತಳಭಾಗದ ಕೆರೆ ಬಳಿಯ ಮಕ್ಕಳ ಉದ್ಯಾನವನ ದಣಿದ ದೇಹಕ್ಕ ಮುದ ನೀಡುವ ಬದಲು ಅನೈರ್ಮಲ್ಯದ ತಾಣವಾಗಿದೆ. ಎಲ್ಲೆಂದರ ಸಂಗ್ರಹಿಸಿದ ತ್ಯಾಜ್ಯ, ಗಿಡಗಳು ಅಡ್ಡಾ ದಿಡ್ಡಿ ಬೆಳೆದು ನಿಂತ ಪರಿಣಾಮ ಫುಟ್ಪಾತ್ ಪಕ್ಕದಲ್ಲಿ ಸಂಚರಿಸುವ ಸಾರ್ವಜನಿಕರ ಮುಖಕ್ಕೆ ಬಡಿಯುವಂತಾಗಿದೆ. ಉದ್ಯಾನವನದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ನೀರು ಸಂಗ್ರಹಾಗಾರವಿದ್ದರೂ ನಿರೂಪಯುಕ್ತವಾಗಿದೆ.
•ಡಿ.ಜಿ. ಮೋಮಿನ್