Advertisement

ಮೌಲಾನಾ ಶಾಲೆಗೆ ಸೌಕರ್ಯ ಮರೀಚಿಕೆ

01:09 PM Jul 18, 2019 | Naveen |

ಡಿ.ಜಿ ಮೋಮಿನ್‌
ಗಜೇಂದ್ರಗಡ:
ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಬಡ ಕುಟುಂಬಗಳ ಮಕ್ಕಳಿಗೆಂದೇ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 2018-19ನೇ ಸಾಲಿನಲ್ಲಿ ಆರಂಭಿಸಿರುವ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

Advertisement

ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೇನೋ ಸಿಗುತ್ತಿದೆ ಆದರೆ ಶಾಲೆಯಲ್ಲಿ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದಂತಾಗಿದೆ. ವಿದ್ಯಾರ್ಥಿಗಳು ನಿತ್ಯ ಒಂದಿಲ್ಲೊಂದು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಗೋಜಿಗೆ ಹೋಗದಿರುವುದು ಪಾಲಕರನ್ನು ಕೆರಳಿಸುವಂತೆ ಮಾಡಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಸರ್ಕಾರ ಕಳೆದೆರೆಡು ವರ್ಷದಿಂದ ಮೌಲಾನಾ ಆಜಾದ ಮಾದರಿ ಶಾಲೆಗಳನ್ನು ತೆರೆಯಲಾಗಿದೆ. 6 ಮತ್ತು 7ನೇ ತರಗತಿ ಹೊಂದಿರುವ ಈ ಶಾಲೆಯಲ್ಲಿ ಒಟ್ಟು 116 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಶಾಲೆಯಲ್ಲಿ ಶುದ್ಧ ನೀರಿನ ಘಟಕ ಇಲ್ಲ. ಹೀಗಾಗಿ ಬೇರೆಡೆಯಿಂದ ನೀರು ತರಲಾಗುತ್ತಿದೆ. ಜತೆಗೆ ಶೌಚಾಲಯ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿಯಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಪಡುವಂತಾಗಿದೆ.

ಇಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್ಗಳಿಲ್ಲ. ಪೂರ್ಣ ಪ್ರಮಾಣ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ ಮಾಡಿಲ್ಲ. ಶಿಕ್ಷಕರಿಗೂ ಸಹ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಹೀಗಾಗಿ ಅನಿವಾರ್ಯವಾಗಿ ಶಿಕ್ಷಕರು ಬೇರೆ ಶಾಲೆಗಳಲ್ಲಿನ ಕುರ್ಚಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಪಟ್ಟಣದ ಸರಕಾರಿ ಬಾಲಕರ ಪ್ರೌಢಶಾಲೆಯಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ.

ಶಾಲೆಗೆ ಸ್ವಂತ ಕಟ್ಟಡ ಇಲ್ಲದ ಪರಿಣಾಮ ಬಾಡಿಗೆ ಕೊಠಡಿಯಲ್ಲೇ ತರಗತಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಆಟದ ಮೈದಾನವೂ ಇಲ್ಲ. ಜತೆಗೆ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರೀಡಾ ಸಾಮಗ್ರಿಗಳು ಗಗನ ಕುಸುಮವಾಗಿವೆ.

Advertisement

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೌಲಾನಾ ಆಜಾದ ಮಾದರಿ ಶಾಲೆಗೆ ಭೇಟಿ ನೀಡಿ, ಶಾಲೆಗೆ ಸ್ವಂತ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಕ್ರೀಡಾ ಸಾಮಗ್ರಿ, ಆಸನ ವ್ಯವಸ್ಥೆ, ಪಠ್ಯಪುಸ್ತಕ, ಸಮವಸ್ತ್ರ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next