ಗಜೇಂದ್ರಗಡ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಮಂದಗತಿಯಿಂದ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೇ, ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತು ಪರದಾಡುವಂತಾಗಿದೆ.
ಪುರಸಭೆಯ ನಗರೋತ್ಥಾನ ಯೋಜನೆಯಡಿ 2016-17ನೇ ಸಾಲಿನಲ್ಲಿ ಮಂಜೂರಾದ 6.37 ಕೋಟಿ ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಮೆಂಟ್ ಮತ್ತು ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಕಾಮಗಾರಿಗೆ ಹಿಂದಿನ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿ ಎರಡು ವರ್ಷಗಳೆದರೂ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಜನರು ನಿತ್ಯ ಒಂದಿಲ್ಲೊಂದು ತೊಂದರೆಗೆ ಒಳಗಾಗುತ್ತಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ತೆಗೆಯುವ ಮೂಲಕ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ. ಮಂದಗತಿಯ ಕಾಮಗಾರಿಯಿಂದಾಗಿ ಹಲವಾರು ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿದ ಘಟನೆಗಳೂ ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಈಚೆಗೆ ಪಟ್ಟಣದಲ್ಲಿ ಸುರಿದ ಮಳೆಯಿಂದಾಗಿ ರಸ್ತೆ ನಿರ್ಮಾಣಕ್ಕೆಂದು ತೆಗೆದ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ದುರ್ಗಾ ವೃತ್ತದಿಂದ ಹಿಡಿದ ಭಜರಂಗದಳ ವೃತ್ತದ ವರೆಗೆ ನಡೆದ ರಸ್ತೆ ಡಾಂಬರೀಕರಣ ಪಕ್ಕದ ಪುಟ್ಪಾತ್‌ಗೆ ಹಾಕಲಾದ ಇಂಟರ್‌ಲಾಕ್ ಫೇವರ್ ಈಗಾಗಲೇ ಕಿತ್ತು ಹೋಗುವ ಸ್ಥಿತಿ ತಲುಪಿವೆ. ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳದ ಪರಿಣಾಮ ಕಾಮಗಾರಿ ಮುಗಿದ ಕೆಲ ತಿಂಗಳಲ್ಲಿಯೇ ದುರಸ್ತಿಗೆ ಒಳಪಟ್ಟಿವೆ. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲನೆ ಮಾಡದಿರುವುದೇ ಕಳಪೆ ಕಾಮಗಾರಿಗೆ ಕಾರಣವಾಗಿದೆ ಎನ್ನುವುದು ಜನರ ಆರೋಪವಾಗಿದೆ.
ಕಳೆದೊಂದು ವರ್ಷಗಳಿಂದ ಕುಂಟುತ್ತಾ ಸಾಗಿರುವ ನಗರೋತ್ಥಾನ ಯೋಜನೆ ಕಾಮಗಾರಿ ನಿಯಮಾವಳಿ ಪ್ರಕಾರ ಒಂಭತ್ತು ತಿಂಗಳಿಗೆ ಎಲ್ಲ ಕಾಮಗಾರಿಗಳೂ ಸಂಪೂರ್ಣವಾಗಿ ಪೂರ್ಣಗೊಳ್ಳಬೇಕು. ಆದರೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಯನ್ನೇ ಕೈಗೊಂಡಿಲ್ಲ. ಇದನ್ನು ಪ್ರಶ್ನಿಸಬೇಕಾದ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಪಟ್ಟಣದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಮಳೆಗಾಲ ಆರಂಭವಾಗುತ್ತಿದ್ದು, ಹುಡೇದ ಲಕ್ಷ್ಮೀ ವೃತ್ತದಿಂದ ಹಿಡಿದು, ಕೊಳ್ಳಿಯವರ ಕತ್ರಿಯವರೆಗೆ ಮತ್ತು ಕೆಳಗಲ ಪೇಟೆಯ ಆಂಜನೇಯ ದೇವಸ್ಥಾನದಿಂದ ಹಿಡಿದು ದುರ್ಗಾದೇವಿ ದೇವಸ್ಥಾನದ ವರೆಗೆ, ಚಿನಿವಾಲರ ಪ್ಲಾಟ್‌ನಲ್ಲಿಯೂ ರಸ್ತೆ ನಿರ್ಮಾಣಕ್ಕೆಂದು ಅಗೆದ ರಸ್ತೆಯಲ್ಲಿ ಮಳೆ ನೀರು ಮತ್ತು ಚರಂಡಿ ಕೊಳಚೆ ಸಂಗ್ರಹವಾಗಿರುವುದರಿಂದ ಅಲ್ಲಿನ ನಿವಾಸಿಗಳ ಸ್ಥಿತಿ ಹೇಳ ತೀರದಾಗಿದೆ. ಕೂಡಲೇ ಕಾಮಗಾರಿ ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಮುಂದಾಗದಿದ್ದರೆ ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ನಗರೋತ್ಥಾನ ಯೋಜನೆ ಅಡಿಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ತೀವೃಗತಿಯಲ್ಲಿ ನಡೆಸಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ಅಧಿಕಾರಿಗಳು ಕಾಮಗಾರಿ ಗುಣಮಟ್ಟ ಪರಿಶೀಲಿಸಿ, ಕಳಪೆ ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು.
•
ಎಸ್.ಎಂ ಹಿರೇಮಠ,
ಪುರಸಭೆ ಮುಖ್ಯಾಧಿಕಾರಿ