ಗಜೇಂದ್ರಗಡ: ಸ್ವಂತ ಕಟ್ಟಡ, ವಿದ್ಯುತ್ ಸೌಲಭ್ಯವಿಲ್ಲ, ಪುಸ್ತಕಗಳನ್ನಿಡಲು ರ್ಯಾಕ್‌ಗಳಿಲ್ಲ, ಕಟ್ಟಡ ಸುತ್ತಲೂ ಅಶುಚಿತ್ವದಿಂದಾಗಿ ಆಟಕುಂಟು ಲೆಕ್ಕಕ್ಕಿಲ ಎಂಬಂತಾಗಿದೆ ಲಕ್ಕಲಕಟ್ಟಿ ಗ್ರಾಮದ ಗ್ರಂಥಾಲಯ. ಗ್ರಾಪಂ ಕಾರ್ಯಾಲಯ ಮುಂಭಾಗದಲ್ಲಿಯೇ ಇರುವ ಗ್ರಂಥಾಲಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದು, ಓದುಗರು ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ.
ಗ್ರಂಥಾಲಯದಲ್ಲಿ ಕುಡಿಯುವ ನೀರು, ವಿದ್ಯುತ್, ಸಮರ್ಪಕ ಆಸನ ವ್ಯವಸ್ಥೆಯಿಲ್ಲ. ಸ್ವಂತ ಕಟ್ಟಡ ಇಲ್ಲದ ಪರಿಣಾಮ ಖಾಸಗಿ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. 2007ರಿಂದ ಆರಂಭವಾಗಿರುವ ಈ ಗ್ರಂಥಾಲಯ ಕರ್ನಾಟಕ ಯುವಕ ಮಂಡಳದ ಕಟ್ಟಡದಲ್ಲಿದೆ.
ಎಲ್ಲೆಂದರಲ್ಲಿ ಬಿರುಕು ಬಿಟ್ಟ ಗೋಡೆಗಳು, ಮಳೆ ಬಂದರೆ ತಂಪು ಹಿಡಿಯುವ ಗೋಡೆಗಳಿಂದಾಗಿ ಓದುಗರು ಯಾವಗ ಏನಾಗುತ್ತೋ ಎಂಬ ಭಯದಲ್ಲಿ ಕುಳಿತುಕೊಳ್ಳುವಂತಾಗಿದೆ. ಒಟ್ಟು 66 ಸದಸ್ಯರನ್ನು ಒಳಗೊಂಡಿದ್ದು, 1672 ಪುಸ್ತಕಗಳಿವೆ. ಆದರೆ ಸಮರ್ಪಕವಾಗಿ ಹೊಂದಿಸಿಡಲು ಜಾಗದ ಕೊರತೆ ಜೊತೆ ರ್ಯಾಕ್ ಇಲ್ಲದಿದ್ದರಿಂದ ಕೆಲ ಪುಸ್ತಕಗಳು ಕಪಾಟು ಸೇರಿದಂತೆ ಇನ್ನು ಕೆಲ ಪುಸ್ತಕಗಳು ಟೇಬಲ್ ಮೇಲಿಡಲಾಗಿದೆ. ಹೀಗಾಗಿ ಓದುಗರಿಗೆ ಪುಸ್ತಕಗಳ ಸಮರ್ಪಕ ರೀತಿಯಲ್ಲಿ ದೊರೆಯದಂತಾಗಿದೆ.
ಗ್ರಂಥಾಲಯ ಕಟ್ಟಡದ ಸುತ್ತಲೂ ತ್ಯಾಜ್ಯ ವಸ್ತುಗಳ ಬಿಸಾಡುತ್ತಿರುವುದರಿಂದ ಗಲೀಜು ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಗ್ರಂಥಾಲಯದಲ್ಲಿ ಕಾಲಿಟ್ಟರೆ ದುರ್ವಾಸನೆ ಬೀರುತ್ತಿದೆ. ಜೊತೆಗೆ ಸೊಳ್ಳೆಗಳ ಕಾಟ ಓದುಗರುನ್ನು ಕಿರಿಕಿರಿಯನ್ನುಂಟು ಮಾಡುತ್ತಿದೆ. ಕೂಗಳತೆ ದೂರದಲ್ಲಿಯೇ ಗ್ರಾಪಂ ಕಚೇರಿ ಇದ್ದರೂ ಸ್ವಚ್ಛತೆಗೆ ಕ್ರಮ ಜರುಗಿಸದಿರುವುದು ಗ್ರಂಥಾಲಯದ ಬಗೆಗಿನ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.