Advertisement

ರೈತರ ಕೈ ಹಿಡಿದ ಪುಷ್ಪ ಕೃಷಿ

10:15 AM Jan 23, 2019 | |

ಗಜೇಂದ್ರಗಡ: ವಾಣಿಜ್ಯ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದ ರೈತರು ಇದೀಗ ಭೀಕರ ಬರಗಾಲದ ಮಧ್ಯೆಯು ಪುಷ್ಪ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ತೋಟಗಾರಿಕೆ ಇಲಾಖೆ ಮಾರ್ಗದರ್ಶನದ ಜೊತೆಗೆ ಪ್ರೋತ್ಸಾಹ ಪಡೆದು ಹನಿ ನೀರಾವರಿ ಮೂಲಕ ಪುಷ್ಪ ಕೃಷಿ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

Advertisement

ಗಜೇಂದ್ರಗಡ, ರೋಣ ತಾಲೂಕುಗಳು ಕಳೆದ ಮೂರು ವರ್ಷಗಳಿಂದ ಬರದ ಬೇಗುದಿಗೆ ಸಿಲುಕಿವೆ. ಒಂದೆಡೆ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಬೆಳೆಯೆಲ್ಲ ನಾಶವಾಗುತ್ತಿದ್ದರೆ, ಇನ್ನೊಂದೆಡೆ ಬಂದ ಅಲ್ಪ ಬೆಳೆಗೆ ದರ ಕುಸಿತದ ಬಿರುಗಾಳಿ ರೈತರನ್ನು ಕಂಗಾಲಾಗಿಸಿದೆ. ಇಷ್ಟೆಲ್ಲ ಸಂಕಷ್ಟಗಳನ್ನು ಅನುಭವಿಸುತ್ತಿದ್ದ ರೈತರು ಇದೀಗ ಪುಷ್ಪ ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಪಟ್ಟಣದ ಹೊರ ವಲಯದ ಮಹಮ್ಮದ್‌ ಹನೀಫ್‌ ಕಟ್ಟಿಮನಿ ಎಂಬವರು ತಮ್ಮ ಜಮೀನಿನಲ್ಲಿ ಗುಲಾಬಿ ಬೆಳೆದು ಉತ್ತಮ ಫಸಲು ಬರುವ ಆಶಾಭಾವನೆಯಲ್ಲಿದ್ದಾರೆ.

ಈ ಹಿಂದೆ ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಹತ್ತಿಯಂತಹ ಬೆಳಗಳನ್ನು ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಹನೀಫ್‌, ಇದೀಗ ಬಟಾನ್‌ ತಳಿಯ 3200 ಗಿಡಗಳನ್ನು ತಮ್ಮ ಒಂದು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಈಗಾಗಲೇ ಫಸಲು ನೀಡಲು ಆರಂಭವಾಗಿದ್ದು, ನಿತ್ಯ 7ರಿಂದ 8 ಕೆಜಿ ಗುಲಾಬಿ ಹೂ ಕೀಳುತ್ತಿದ್ದಾರೆ. ಮಾರುಕಟ್ಟೆಯಲ್ಲಿಯೂ ಉತ್ತಮ ಬೆಲೆ ಬಂದಿರುವುದು ಪುಷ್ಪ ಕೃಷಿಗೆ ರೈತರನ್ನು ಆಕರ್ಷಿಸುವಂತಾಗಿದೆ.

ನಾಟಿ ಹೇಗೆ?: ಭೂಮಿಯನ್ನು ಹದಗೊಳಿಸಿ ಗಿಡದಿಂದ ಗಿಡಕ್ಕೆ ಎರಡು ಅಡಿ ಮತ್ತು ಸಾಲಿನಿಂದ ಸಾಲಿಗೆ ಆರು ಅಡಿ ಅಂತರದಲ್ಲಿ ಗುಲಾಬಿ ಗಿಡ ನೆಟ್ಟಿದ್ದಾರೆ. ನಾಟಿ ಮಾಡಿದ 30 ದಿನಗಳ ನಂತರ ಗೊಬ್ಬರ ಹಾಕಿ, ಮೂರು ತಿಂಗಳು ನಂತರ ಮತ್ತೆ ಗೊಬ್ಬರ ಹಾಕಿದ್ದಾರೆ. ಇವರ ಜಮೀನಿನಲ್ಲಿ ಒಂದು ಇಂಚಿನ ಒಂದು ಬೋರ್‌ವೆಲ್‌ ಇದ್ದು, ಹನಿ ನೀರಾವರಿ ಮೂಲಕ 2ರಿಂದ 3 ದಿನಗಳಿಗೊಮ್ಮೆ ನೀರು ಹಾಯಿಸುತ್ತಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಪುಷ್ಪ ಕೃಷಿ ಮಾಡುತ್ತಿರುವ ಇವರು ಸಮರ್ಪಕವಾಗಿ ಗಿಡಗಳನ್ನು ಪೋಷಣೆ, ಔಷಧಗಳ ಸಿಂಪರಣೆ ಹಾಗೂ ನೀರು ಹಾಯಿಸಿದರೆ ತುಂಬ ಲಾಭವಿದೆ. ನಿರ್ಲಕ್ಷ್ಯ ಮಾಡಿದಲ್ಲಿ ಸಂಪೂರ್ಣ ಹಾಳಾಗಿ ಹೋಗುತ್ತದೆ ಎನ್ನುವುದು ಹನೀಫ್‌ ಅವರ ಮಾತಾಗಿದೆ.

ಕೈ ಹಿಡಿದ ಹನಿ ನೀರಾವರಿ: ಭೀಕರ ಬರಗಾಲ ವೇಳೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ನೀಡಿ ಹನಿ ನೀರಾವರಿಗೆ ಪ್ರೋತ್ಸಾಹಿಸಿದರು. ಇದರ ಪರಿಣಾಮ ಇದೀಗ ಗೋಗೇರಿ, ನಾಗರಸಕೊಪ್ಪ, ಗೌಡಗೇರಿ, ಬೆಣಚಮಟ್ಟಿ, ರಾಮಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಹಲವಾರು ರೈತರ ಜಮೀನಿನಲ್ಲಿನ ಕಡಿಮೆ ನೀರಿನ ಸಾಂದ್ರತೆ ಮಧ್ಯೆಯೂ ಕೈಗೊಂಡ ಹನಿ ನೀರಾವರಿ ಅನ್ನದಾತರಿಗೆ ಸಂಜೀವಿನಿಯಾಗಿದೆ.

Advertisement

ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಶೇ. 90ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗಾಗಲೇ ಶೇ. 50ರಷ್ಟು ರೈತರು ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ. ರೈತರು ವಿಳ್ಯದೆಲೆ, ಪುಷ್ಪ, ತರಕಾರಿ ಕೃಷಿ ಕೈಗೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿಕೊಳ್ಳುವ ಕುರಿತು ಇಲಾಖೆಯಿಂದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
∙ಎಂ.ಎಂ. ತಾಂಬೋಟಿ,
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ

ಕಡಿಮೆ ನೀರಿನಲ್ಲಿ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲವೆಂದು ನಿರಾಶೆಯಲ್ಲಿ ಇದ್ದೇವು. ಈ ವೇಳೆ ನಮಗೆ ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಪದ್ಧತಿ ಸಲಹೆಯಿಂದಾಗಿ ಗುಲಾಬಿ ಕೃಷಿ ಮಾಡಿ ಇದೀಗ ಉತ್ತಮ ಆದಾಯ ಗಳಿಕೆಯಲ್ಲಿದ್ದೇವೆ.
∙ಮಹಮ್ಮದ್‌ ಹನೀಫ್‌ ಕಟ್ಟಿಮನಿ,
ಗುಲಾಬಿ ಬೆಳೆದ ರೈತ
 

•ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next