ಗಜೇಂದ್ರಗಡ: ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿನ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸುವ ಮೂಲಕ ಗುಡಿಸಲು ವಾಸಿಗಳನ್ನು ಒಕ್ಕಲೆಬ್ಬಿಸಲು ಹೊರಟಿರುವ ಪುರಸಭೆ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ನೇತೃತ್ವದಲ್ಲಿ ಗುಡಿಸಲು ವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದ ಈ ಬಯಲು ಜಾಗದಲ್ಲಿಯೇ ಗುಡಿಸಲು ಹಾಕಿಕೊಂಡು ಬದುಕು ನಡೆಸುತ್ತಿದ್ದಾರೆ. ಅಲ್ಲದೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿದ್ದರೂ ಪುರಸಭೆ ಯಾವುದೇ ಸೌಲಭ್ಯ ನಿಡಿಲ್ಲ. ಆದರೆ ಬುಧವಾರ ಬೆಳಗ್ಗೆ ಪುರಸಭೆ ಅಧಿಕಾರಿಗಳು ಏಕಾಏಕಿ ಗುಡಿಸಲು ಬಳಿ ಆಗಮಿಸಿ ಜೆಸಿಬಿ ಯಂತ್ರಗಳ ಮೂಲಕ ಗುಡಿಸಲುಗಳನ್ನು ತೆರವು ಮಾಡಲು ಮುಂದಾಗಿರುವುದು ಗುಡಿಸಲು ವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ರಾಜ್ಯ ಸರ್ಕಾರ ಗುಡಿಸಲು ಮುಕ್ತ ರಾಜ್ಯವನ್ನಾಗಿಸುವುದಾಗಿ ಹೇಳುತ್ತಿದೆ. ಆದರೆ ಗುಡಿಸಲು ನಿವಾಸಿಗಳನ್ನು ಒಕ್ಕಲೆಬ್ಬಿಸುವಿಕೆಯಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿರುವ ಗುಡಿಸಲು ನಿವಾಸಿಗಳಿಗೆ ಪರ್ಯಾಯ ಸೂಕ್ತ ಮನೆ ನಿವೇಶನ ಮೂಲಭೂತ ಸೌಕರ್ಯ ಮೊದಲು ಮಾಡಬೇಕು. ಕನಿಷ್ಠ ಕುಡಿಯುವ ನೀರು ಸಹ ಕೋಡದೆ ಅವರ ಮೇಲೆ ದೌರ್ಜನ್ಯ ಮಾಡುವುದು ಸರಿ ಅಲ್ಲ ಎಂದು ದೂರಿದರು.
ಈ ಬಯಲು ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಿವಿಲ್ ದಾವೆ ಇರುವುದರಿಂದ ಆ ಪ್ರಕರಣ ಮುಗಿಯುವವರೆಗೂ ಗುಡಿಸಲು ವಾಸಿಗಳನ್ನು ಒಕ್ಕಲೆಬ್ಬಿಸುವಿಕೆ ಕೈ ಬಿಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ ಗುಡಿಸಲು ನಿವಾಸಿಗಳು ತಮ್ಮ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪ್ರದರ್ಶಿಸಿ ಪ್ರತಿಭಟಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕಾಧ್ಯಕ್ಷ ಬಾಲು ರಾಠೊಡ, ಉಮೇಶ ರಾಠೊಡ, ಎಫ್.ಎಸ್. ಕರಿದುರಗನವರ, ಹುಲ್ಲಪ್ಪ ಜಾಲಗಾರ, ದುರಗವ್ವ ಚನ್ನದಾಸರ, ಗುಂಡಪ್ಪ ಚನ್ನದಾಸರ, ನಾಗರಾಜ ಶಿಂದೋಳಿ, ಹುಸೇನಪ್ಪ ಶಿಂದೋಳಿ, ಚಿಕ್ಕಪ್ಪ ಚನ್ನದಾಸರ, ಯಮನವ್ವ ಚನ್ನದಾಸರ, ಜಿಜಾಬಾಯಿ ಗೊಂಧಳೆ ಇದ್ದರು.