ಅವರೆಲ್ಲರೂ ಆಗತಾನೇ ಪಿಯುಸಿ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ಕಾಲೇಜು ಮೆಟ್ಟಿಲೇರಿದ ಹುಡುಗರು. ಬೇರೆ ಬೇರೆ ಕಡೆಗಳಿಂದ ಬಂದ ಈ ಐದಾರು ಹರೆಯದ ಹುಡುಗರನ್ನು ಒಂದಾಗಿಸುವುದು ಸ್ನೇಹ. ಈ ಸ್ನೇಹಕೂಟಕ್ಕೆ ಒಬ್ಬ ನಾಯಕ, ಅವನೇ ಗಜಾನನ. ಆರಂಭದಲ್ಲಿ ಸೀನಿಯರ್ ಹುಡುಗರ ತಂಟೆ -ಕ್ಯಾತೆಗಳನ್ನು ಎದುರಿಸುವುದಕ್ಕಾಗಿ ಕೈ ಮಿಲಾಯಿಸಿ ಒಂದಾಗುವ ಈ ಹುಡುಗರ ಗುಂಪು, ಅದನ್ನು ಎದುರಿಸುವ ಭರದಲ್ಲಿ ಇಡೀ ಕಾಲೇಜಿನಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತದೆ. ಮುಂದೆ, ಅದೇ ಕಾಲೇಜ್ ಕ್ಯಾಂಪಸ್‌ನಲ್ಲಿ ಏನೇ ಗಲಾಟೆಗಳಾದರೂ ಅದಕ್ಕೆಲ್ಲ ಕಾರಣ “ಗಜಾನನ ಆ್ಯಂಡ್ ಗ್ಯಾಂಗ್’ ಎಂಬ ಕುಖ್ಯಾತಿಗೂ ಕಾರಣವಾಗುತ್ತದೆ. ಇಂಥ ಹುಡುಗರು ಕಾಲೇಜ್‌ನಲ್ಲಿ ಏನೇನು ಮಾಡುತ್ತಾರೆ, ಇವರ ಲೈಫ್ ಸ್ಟೋರಿ ಹೇಗಿರುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾದ ಕಥಾಹಂದರ.
ಇನ್ನು “ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಅಪ್ಪಟ ಕಾಲೇಜ್ ಹುಡುಗರ ಸಿನಿಮಾ. ಮಾಮೂಲಿ ಕಾಲೇಜ್ ಸ್ಟೋರಿ ಸಿನಿಮಾಗಳಂತೆ, ಇಲ್ಲೂ ಸ್ನೇಹ, ಪ್ರೀತಿ, ಮುನಿಸು, ಹೊಡೆದಾಟ, ಗುದ್ದಾಟ ಕೊನೆಗೆ ಜೀವನ ಪಾಠ ಎಲ್ಲವನ್ನೂ ತೆರೆಮೇಲೆ ಹೇಳಲಾಗಿದೆ.
ಮೊದಲರ್ಧ ಇಡೀ ಕಾಲೇಜ್ ಕ್ಯಾಂಪಸ್‌ನಲ್ಲೇ ಸುತ್ತುವ ಚಿತ್ರಕಥೆ, ದ್ವಿತಿಯಾರ್ಧದಲ್ಲಿ ಕ್ಯಾಂಪಸ್ ಕಾಂಪೌಂಡ್‌ದಾಟುತ್ತದೆ. ಎಲ್ಲರ ಜೀವನದಲ್ಲೂ ನಡೆದಿರುವಂತೆ ಕಾಣುವ ಕಥೆಯನ್ನು ಹಾಸ್ಯಮಯವಾಗಿ ಹೇಳಲು ಚಿತ್ರತಂಡ ಯಶಸ್ವಿಯಾಗಿದೆ. ಚಿತ್ರಕಥೆಗೆ ಒಂದಷ್ಟು ವೇಗ ಸಿಕ್ಕು, ಸಂಭಾಷಣೆಗಳು ಇನ್ನಷ್ಟು ಮೊನಚಾಗಿದ್ದರೆ, ತೆರೆಮೇಲೆ “ಗಜಾನನ ಆ್ಯಂಡ್ ಗ್ಯಾಂಗ್’ ಆಟ-ಓಟ ಎರಡೂ ಇನ್ನಷ್ಟು ಪರಿಣಾಮಕಾರಿಯಾಗಿರುವ ಸಾಧ್ಯತೆಗಳಿದ್ದವು.
ಇದನ್ನೂ ಓದಿ:ಕೆಕೆ ಸಾವಿಗೂ ಮುನ್ನ ಪೋಸ್ಟ್: ಕ್ಷಮೆಯಾಚಿಸಿದ ಬಂಗಾಳಿ ಗಾಯಕ ರೂಪಂಕರ್
ಚಿತ್ರದ ನಾಯಕ ಶ್ರೀ ಮಹಾದೇವ್, ಅದಿತಿ ಪ್ರಭುದೇವ, ಲಿಯೋ ಶರ್ಮ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಅಭಿಷೇಕ್ ಶೆಟ್ಟಿ, ಅಶ್ವಿನ್ ಹಾಸನ್, ನಾಟ್ಯರಂಗ ಮೊದಲಾದ ವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ತಾಂತ್ರಿಕವಾಗಿ ಚಿತ್ರವನ್ನು ಎತ್ತಿ ಹಿಡಿಯುತ್ತದೆ. ಕಾಲೇಜು ಹುಡುಗರ ಮೋಜು-ಮಸ್ತಿಯನ್ನು ಮೆಲುಕು ಹಾಕಲು ಬಯಸುವವರು ಒಮ್ಮೆ ಸಿನಿಮಾ ನೋಡಿ ಬರಲು ಅಡ್ಡಿಯಿಲ್ಲ.
ಜಿ. ಎಸ್ ಕಾರ್ತಿಕ ಸುಧನ್