ಎಲ್ಲರ ಜೀವನದಲ್ಲೂ ನೋವು, ಸಂಕಟ, ತುರ್ತು ಸಂದರ್ಭ, ಆರ್ಥಿ ವೆಚ್ಚ ಇದ್ದೇ ಇರುತ್ತದೆ. ಅದನ್ನು ಎದುರಿಸಲು ನಾವು ಮೊದಲೇ ಸಿದ್ಧರಾಗಿರಬೇಕು. ಒಂದಷ್ಟು ಹಣ ಉಳಿಸಿ “ತುರ್ತು ಸಂದರ್ಭಕ್ಕೆಂದು’ ಮೀಸಲಾಗಿ ಇಟ್ಟಿರಬೇಕು…
ಪದೇ ಪದೇ ಹೇಳುತ್ತಿದ್ದೇವೆ ಅನ್ನಿಸಿದರೂ ಹೇಳಲೇಬೇಕು. ಏಕೆಂದರೆ ಈಗ ಗಳಿಕೆ ಮಾಡುವುದು ಕಳೆಯುವುದಕ್ಕೆ ಎನ್ನುವ ಹಾಗಾಗಿದೆ. ನಾವು ಗಳಿಸಬೇಕು. ಗಳಿಸಿದ್ದನ್ನು ಸರಿಯಾಗಿ, ನಿಯಮಿತವಾಗಿ ಉಳಿಸಬೇಕು.
ಉಳಿಸಿರುವುದನ್ನು ಬೆಳೆಸುವುದಕ್ಕೆ ಹೂಡಿಕೆ ಮಾಡಬೇಕು. ಹೀಗೆ ಮಾಡಿದ ಹೂಡಿಕೆಯಿಂದ ಮತ್ತೆ ಗಳಿಕೆ ಆಗಬೇಕು. ಗಳಿಕೆ ಉಳಿಕೆ ಹೂಡಿಕೆಯ ಒಂದು ಸುಂದರ ಚಕ್ರ ಇದು.
ಇನ್ನೊಂದು ರೀತಿಯ ಚಕ್ರ ಇದೆ. ಗಳಿಕೆ ಏನೋ ಆಗಿದೆ. ಆದರೆ ಸರಿಯಾದ ರೀತಿಯಲ್ಲಿ ಪ್ಲಾನ್ ಇಲ್ಲದೇ ಉಳಿಕೆ ಆಗುತ್ತಿಲ್ಲ. ಉಳಿಕೆ ಇರದಿದ್ದರೆ ಹೂಡಿಕೆ ಹೇಗೆ ಸಾಧ್ಯ? ಆಗ ಅವತ್ತಿನ ದುಡಿಮೆ ಅವತ್ತಿಗೆ. ಆಯಾ ತಿಂಗಳ ದುಡಿಮೆ ಆಯಾ ತಿಂಗಳಿಗೆ. ಏನಾದರೂ ಕಷ್ಟ ಎದುರಾದರೆ, ಹೆಚ್ಚುವರಿ ಖರ್ಚು ಎದುರಾದರೆ, ಏನು ಮಾಡಬೇಕು? ಗುರುತು ಪರಿಚಿತರಲ್ಲಿ ಹಣದ ಸಹಾಯ ಕೇಳಬೇಕು. ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಬೇಕು. ಹೊರಗಿನಿಂದ ಹಣತಂದರೆ ಅದಕ್ಕೆ ಬಡ್ಡಿ ಕಟ್ಟಬೇಕು. ನೆಂಟರು, ಬಂಧುಗಳು, ಸ್ನೇಹಿತರಲ್ಲಿ ಹಣ ಕೇಳಿದರೂ ಆರಡಿ ದೇಹವನ್ನು ಮೂರಡಿ ಮಾಡಿಕೊಂಡು ಯಾಚಿಸಬೇಕು. ಹೀಗೆ ಪಡೆದ ಹಣ ಸಾಲವೋ, ಕೈಗಡವೋ ಆಗಿರುತ್ತದೆ. ನಂತರ ದಿನಗಳಲ್ಲಿ ನಿತ್ಯವೂ ಅದನ್ನು ತೀರಿಸುವುದು ಹೇಗೆ ಎಂಬ ಯೋಚನೆ ಅಥವಾ ಹೆಚ್ಚುವರಿ ದುಡಿಮಗೆ ಬೇರೇನಾದರೂ ಎಕ್ಸಟ್ರಾ ಕೆಲಸ ಮಾಡಬೇಕು ಎಂಬ ಯೋಚನೆ ಜೊತೆಯಾಗುತ್ತದೆ. ಯೋಚನೆ. ಸಾಲ ಮಾಡಿದರೂ ಶಾಂತಿ ಇರುವುದಿಲ್ಲ. ಹೀಗೆ ಮನಸ್ಸು ಶಾಂತವಾಗಿ ಇರದಿದ್ದರೆ ಕೆಲಸದಲ್ಲಿ ಅದು ವ್ಯಕ್ತವಾಗುತ್ತದೆ. ಎಷ್ಟೋ ಜನರು ಹೇಳುವುದನ್ನು ಕೇಳಿದ್ದೇವೆ; “ಈ ಸಾಲ ತೀರಿಸಿದರೆ ಸಾಕಪ್ಪಾ. ಮೇಲ್ನೋಟಕ್ಕೆ ಸಾಲ ಅನ್ನಿಸುತ್ತದೆ. ಇದು ನಮ್ಮ ಮನೆಯಲ್ಲಿ ನೆಮ್ಮದಿಯನ್ನೇ ಹಾಳುಗೆಡವುತ್ತಿದೆ…
ನಮ್ಮೆಲ್ಲರ ಜೀವನದಲ್ಲಿ ನೋವು, ಸಂಕಷ್ಟ, ತುರ್ತು ಸಂದರ್ಭ, ಅಧಿಕ ವೆಚ್ಚ ಇದ್ದೇ ಇರುತ್ತದೆ. ನಾವು ಇದಕ್ಕೆ ಮೊದಲೇ ಸಿದ್ಧವಾಗಬೇಕು. ಬೆಂಕಿ ಬಿದ್ದಾಗ ಬಾವಿ ತೊಡುವ ಹಾಗಾಗಬಾರದು. ಅದೇ ರೀತಿ, ಸಂಕಷ್ಟ ಬಂದಾಗ ಕಂಗಾಲಾಗುವ ಬದಲು ಮೊದಲೇ ನಿರೀಕ್ಷಿತ ವೆಚ್ಚವನ್ನು ಲೆಕ್ಕ ಹಾಕಿ ಅದಕ್ಕೆ ತಯಾರಿ ನಡಸಬೇಕು.
ಮುಂದೆ ಹಬ್ಬಗಳ ಹಂಗಾಮು ಶುರು ಆಗುತ್ತದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು ಮೊದಲು ಮನೆಯಿಂದಲೇ ಆಗಲಿ. ಮನೆಯಲ್ಲಿ ತಂದೆ ತಾಯಿ ಅಚ್ಚು ಕಟ್ಟು ತನದಿಂದ, ಸರಿಯಾಗಿ ಯೋಚಿಸಿ ಕೆಲಸ ನಿರ್ವಹಿಸುವವರಾದರೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ.
ಮುಗಿಸುವ ಮುನ್ನ
ಮಹಿಳೆಯರು ಮನೆಯಲ್ಲಿಯೇ ಕುಳಿತು ತಾವು ಉಳಿಸಿದ ಹಣದಿಂದ ಹಲವಾರು ಹೊಸ ಹೊಸ ಉದ್ಯಮಗಳನ್ನು ಗುಂಪುಗಳಲ್ಲಿ ಆರಂಭಿಸುತ್ತಿದ್ದಾರೆ. ಒಟ್ಟೊಟ್ಟಿಗೆ ಕುಳಿತು ಹರಟೆ ಹೊಡೆಯುತ್ತ, ಮನೆಯಲ್ಲಿಯೇ ಚಪಾತಿ ಮಾಡಿ ಕೊಡುವುದು ಇರಬಹುದು, ಇನ್ನೇನೋ ಪೀಸ್ ವರ್ಕ್ ಇರಬಹುದು. ಮತ್ತೆ ಕೆಲವುರ ಗುಂಪುಗಳಲ್ಲಿ ಕೆಲಸ ಮಾಡುತ್ತ, ಕೆಲಸವನ್ನೂ ಆನಂದಿಸುತ್ತಿದ್ದಾರೆ. ತಾವು ಮಾಡುವ ಕೆಲಸದಿಂದ ಸ್ವಲ್ಪ ಮಟ್ಟಿಗಿನ ಹಣವನ್ನೂ ಸಂಪಾದಿಸುತ್ತಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಆನಂದವೂ ಜೊತೆಗೆ ಅನುಕೂಲವೂ ಇದೆ ಎಂದಾದರೆ ಅದಕ್ಕೆ ಅಂಥ ಕೆಲಸ ಮಾಡಲು ಮುಂದಾಗುವುದರಲ್ಲಿ ತಪ್ಪೇನು? ಇದು ಈಗಿನ ಧೋರಣೆ. ಹಾಗಾಗಿ ಯಾರು ಯಾವ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ ಅಲ್ಲ. ಹೇಗೆ ಮಾಡುತ್ತಾರೆ ಎನ್ನುವುದು ಮುಖ್ಯ.
– ಸುಧಾಶರ್ಮ ಚವತ್ತಿ