ಸಾಗರ: ನದಿ ನೀರು ವ್ಯರ್ಥವಾಗಿ ಸಮುದ್ರ ಸೇರಿ ಪೋಲಾಗುವ ಬದಲು ಅದನ್ನು ಬಳಸಿಕೊಳ್ಳುವಂತಹ ಯೋಜನೆ ರೂಪಿಸಲು ಕೇಂದ್ರ ಸರಕಾರ ಹೆಚ್ಚು ಉತ್ಸುಕವಾಗಿದ್ದು, ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದರು.
ತಾಲೂಕಿನ ತುಮರಿಯ ಕಳಸವಳ್ಳಿ ಹೊಳೆಬಾಗಿಲು ತಟದಲ್ಲಿ ಸೋಮವಾರ 5,800 ಕೋಟಿ ರೂ. ವೆಚ್ಚದ ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ, 606 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಸಿಗಂದೂರು ಸೇತುವೆ ಹಾಗೂ 873 ಕೋಟಿ ರೂ. ವೆಚ್ಚದಲ್ಲಿ ಆರು ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣದ ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗಂಗಾ-ಕಾವೇರಿ ನದಿ ಜೋಡಣೆ ಯೋಜನೆಗೆ 13 ಲಕ್ಷ ಕೋಟಿ ರೂ., ಆಂಧ್ರದ ಪೋಲಾವರಂ ನದಿಯನ್ನು ಗೋದಾವರಿಗೆ ಜೋಡಿಸಲು 30 ಸಾವಿರ ಕೋಟಿ ರೂ. ಬೇಕು. ಹೀಗೆ ಇನ್ನೂ ಅನೇಕ ನದಿ ಜೋಡಿಸಲು ಕೋಟ್ಯಂತರ ರೂ. ವೆಚ್ಚವಾಗಲಿದೆ. ಆದರೂ ಪೋಲಾಗುವ ನದಿ ನೀರು ಬಳಸಿಕೊಳ್ಳಲು ಕೇಂದ್ರ ಚಿಂತನೆ ನಡೆಸಿದೆ ಎಂದರು.
ಗೋದಾವರಿ ನದಿಯಿಂದ 400 ಟಿಎಂಸಿ ನೀರು ಬಳಕೆಯಾಗದೆ ಸಮುದ್ರ ಸೇರುತ್ತಿದೆ. ಈ ರೀತಿ ವ್ಯಯವಾಗುವ ನೀರನ್ನು ನಾವು ಕೃಷಿ, ಉದ್ಯಮ ಹಾಗೂ ಮೂಲ ಸೌಕರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ. ಈ ಕುರಿತು ಸರಕಾರ ಗಮನ ಹರಿಸಲಿದೆ ಎಂದು ತಿಳಿಸಿದರು.
ಚೆನ್ನೈ-ಬೆಂಗಳೂರು, ಹೈದ್ರಾಬಾದ್-ಬೆಂಗಳೂರು ರಸ್ತೆಯನ್ನು ಎಕ್ಸ್‌ಪ್ರೆಸ್ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಜತೆಗೆ ಬೆಂಗಳೂರು-ಮೈಸೂರು ನಡುವಿನ 117 ಕಿ.ಮೀ. ರಸ್ತೆ ಅಭಿವೃದ್ಧಿಗೆ 7000 ಕೋಟಿ ರೂ. ಅನುದಾನ ನೀಡಿದ್ದು, ಆರು ಪಥದ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದೆ ಎಂದು ತಿಳಿಸಿದರು.