ಗಡಿ ವಿಷಯ ಕುರಿತ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ಗಡಿನಾಡು’ ಸಿನಿಮಾ ಕೂಡ ಸೇರಿದೆ. ಚಿತ್ರ ಜನವರಿ 24 ರಂದು ಬಿಡುಗಡೆಯಾಗುತ್ತಿದೆ. ತಮ್ಮ ಸಿನಿಮಾ ಬಗ್ಗೆ ವಿಷಯ ಹಂಚಿಕೊಳ್ಳಲೆಂದೇ ನಿರ್ದೇಶಕರು ತಂಡದ ಜೊತೆ ಆಗಮಿಸಿದ್ದರು.
ಮೊದಲು ಚಿತ್ರದ ಬಗ್ಗೆ ನಿರ್ಮಾಪಕ ವಸಂತ ಮುರಾರಿ ದಳವಾಯಿ ಮಾತನಾಡಿದರು.”ಇದೊಂದು ಮರಾಠಿ ಹುಡುಗಿ ಮತ್ತು ಕನ್ನಡ ಹುಡುಗನ ಪ್ರೀತಿ ಪ್ರೇಮ ಹೊಂದಿರುವ ಚಿತ್ರ. ಗಡಿಭಾಗದ ಸಮಸ್ಯೆ ಬಗ್ಗೆ ಎಳೆ ಎಳೆಯಾಗಿ ಹೇಳಲಾಗಿದೆ. ಸೂಕ್ಷ್ಮವಿಷಯಗಳೊಂದಿಗೆ ಮನರಂಜನೆಯೂ ಇಲ್ಲಿದೆ’ ಎಂದರು.
ನಿರ್ದೇಶಕ ನಾಗ್ ಹುಣಸೋಡು ಮಾತನಾಡಿ, “ಚಿತ್ರದ ಹೈಲೈಟ್ “ಗಡಿನಾಡು’ ಶೀರ್ಷಿಕೆ. ಉಳಿದಂತೆ ಸೂಕ್ಷ್ಮ ವಿಷಯಗಳೊಂದಿಗೆ ಚಿತ್ರ ಸಾಗಲಿದೆ. ಕೆಲವು ಸತ್ಯ ಘಟನೆಗಳು ಇಲ್ಲಿವೆ. ಸಿನಿಮಾ ಕಥೆ ಕೇಳಿದ ಅನೇಕರು ಸಿನಿಮಾ ಮಾಡುವ ಮನಸ್ಸು ಮಾಡಿದ್ದರೂ, ಕೊನೆಯಲ್ಲಿ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡ ಅಂತ ಸುಮ್ಮನಾದರು. ಕೊನೆಗೆ ವಸಂತ ಮುರಾರಿ ದಳವಾಯಿ ಅವರು ಮುಂದೆ ಬಂದು ಚಿತ್ರ ಮಾಡಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ಏನೆಲ್ಲಾ ಇದೆ ಅನ್ನುವುದಕ್ಕೆ ಚಿತ್ರ ನೋಡಬೇಕು. ಒಟ್ಟಾರೆ, ಕನ್ನಡಿಗರಿಗೆ ಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ. ಬೆಳಗಾವಿಯಲ್ಲಿ ಇಂದು ಸಮಸ್ಯೆಗಳು ಸಾಕಷ್ಟಿವೆ. ಅದು ಭಾಷೆ ಸಮಸ್ಯೆ ಇರಬಹುದು, ಗಡಿ ಸಮಸ್ಯೆ ಇರಬಹುದು ಹೀಗೆ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಯಲ್ಲಿ ಪರಿಹಾರವನ್ನೂ ಸೂಚಿಸುವ ಪ್ರಯತ್ನ ಮಾಡಲಾಗಿದೆ. ಇದರೊಂದಿಗೆ ಮರಾಠಿ ಹುಡುಗಿ ಜೊತೆ ಕನ್ನಡ ಹುಡುಗನ ಪ್ರೀತಿ ಶುರುವಾಗುತ್ತೆ. ಅದು ಇನ್ನೊಂದು ಸಮಸ್ಯೆಗೂ ಕಾರಣವಾಗುತ್ತೆ. ಆಮೇಲೆ ಏನೆಲ್ಲಾ ನಡೆದುಹೋಗುತ್ತೆ ಎಂಬುದು ಕಥೆ’ ಎಂದರು ನಿರ್ದೇಶಕರು.
ನಾಯಕ ಪ್ರಭುಸೂರ್ಯ ಅವರಿಗೆ ಇದು ಎರಡನೇ ಸಿನಿಮಾ. “ನನಗೆ ಇಲ್ಲಿ ಎರಡು ಶೇಡ್ ಇದೆ. ಚಿತ್ರದಲ್ಲಿ ಹೀರೋ ಬೆಂಗಳೂರಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಳಗಾವಿಗೆ ಹೋಗುತ್ತಾನೆ. ಅಲ್ಲಿ ಗಡಿ ಸಮಸ್ಯೆಗಳನ್ನು ಕಂಡು, ಒಂದು ಸೇನೆ ಕಟ್ಟುತ್ತಾನೆ. ಅಲ್ಲೊಂದಷ್ಟು ಖಳಟನರು ಎದುರಾಗುತ್ತಾರೆ. ಅದು ಗಲಾಟೆಗೆ ತಿರುಗುತ್ತದೆ. ಆಮೇಲೆ ಏನಾಗುತ್ತೆ ಎಂಬುದು ಕಥೆ. ನಿರ್ಮಾಪಕರ ಬೆಂಬಲ ಇರದಿದ್ದರೆ ಈ ರೀತಿಯ ಸಿನಿಮಾ ಮಾಡಲು ಆಗುತ್ತಿರಲಿಲ್ಲ. ಫೈಟ್ಸ್, ಸಾಂಗ್ ವಿಶೇಷವಾಗಿವೆ. ಅದೇ ಇಲ್ಲಿ ಹೈಲೈಟ್’ ಎಂದರು ಪ್ರಭು ಸೂರ್ಯ.
ನಾಯಕಿ ಸಂಚಿತಾ ಪಡುಕೋಣೆ ಅವರಿಗೆ “ಗಡಿನಾಡು’ ಚಿತ್ರ ಬಿಡುಗಡೆಯಾಗುತ್ತಿರುವುದೇ ಖುಷಿಯ ಸಂಗತಿಯಂತೆ. ಈ ಪಾತ್ರ ಹೊಸತಾಗಿದೆ. ಸಿನಿಮಾ ನೋಡಿದವರಿಗೆ ಭಾಷೆ, ನೆಲ ಮತ್ತು ಜಲ ಬಗ್ಗೆ ಇನ್ನಷ್ಟು ಪ್ರೀತಿ ಮೂಡುತ್ತೆ. ನಾನಿಲ್ಲಿ ದಿಶಾ ಎಂಬ ಮರಾಠ ಹುಡುಗಿಯಾಗಿ ನಟಿಸಿದ್ದೇನೆ. ಮನರಂಜನೆಗೆ ಕೊರತೆ ಇಲ್ಲ. ಫ್ಯಾಮಿಲಿ ಕುಳಿತು ನೋಡುವ ಚಿತ್ರವಿದು’ ಎಂದರು ಸಂಚಿತಾ ಪಡುಕೋಣೆ.
ಚಿತ್ರಕ್ಕೆ ಎಲ್ವಿನ್ ಜೋಶ್ವ ಸಂಗೀತವಿದೆ. ಗೌರಿ ವೆಂಕಟೇಶ್, ರವಿಸುವರ್ಣ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಚರಣ್‌ರಾಜ್, ದೀಪಕ್‌ಶೆಟ್ಟಿ ಇತರರು ನಟಿಸಿದ್ದಾರೆ.