Advertisement

ಗಾದೆ ಪುರಾಣ

10:06 PM Sep 06, 2019 | mahesh |

ಒಣ ಶುಂಠಿಗಿಂತ ಉತ್ತಮ ಔಷಧವಿಲ್ಲ, ಸುಬ್ರಹ್ಮಣ್ಯನಿಗಿಂತ ದೊಡ್ಡ ದೇವರಿಲ್ಲ
ಪ್ರಾಚೀನ ವೈದ್ಯ ಪದ್ಧತಿಯಲ್ಲಿ ಒಣ ಶುಂಠಿ ಪ್ರಮುಖವಾದುದು. ಆದಿ ದಂಪತಿ ಶಿವ ಪಾರ್ವತಿಯರ ಎರಡನೆಯ ಮಗ ಸುಬ್ರಹ್ಮಣ್ಯ, ತನ್ನ ತಂದೆಗೆ ಓಂಕಾರದ ಮಹತ್ವವನ್ನು ತಿಳಿಸಿದನಂತೆ. ಆದ್ದರಿಂದ ಈತ ದೊಡ್ಡ ದೇವರು. ಈ ಗಾದೆ ಹಳೆಯದಾದರೂ ಮನನಯೋಗ್ಯವಾದುದು.

Advertisement

ಮಾತು ಬಲ್ಲವ ಮಾಣಿಕ್ಯ ತಂದ, ಮಾತು ಬಾರದವ ಜಗಳ ತಂದ
ಮಾತು ಮುತ್ತು ಮಾಣಿಕ್ಯದಂತಿರ ಬೇಕು. ಅತಿಯಾದ ಮಾತು, ಅತಿಯಾದ ಸಲುಗೆ ವಿರಸಕ್ಕೆ ನಾಂದಿ. ಆಡಿದ ಮಾತು ಅಪಾರ್ಥ ಕಲ್ಪಿಸಿದರೆ, ಅದಕ್ಕೆ ಮಾತಿನಷ್ಟೇ ಕಾರಣ ಮಾತನಾಡಿದವರು. ಊಟದಲ್ಲಿ ಮಿತವೇ ಹೇಗೆ ಹಿತವೋ, ಮಾತಿನಲ್ಲಿಯೂ ಮಿತವೇ ಹಿತ. ಸಂಬಂಧವಿಲ್ಲದ್ದನ್ನು ಮಾತನಾಡಿ ಸಂಬಂಧಗಳನ್ನು ಕೆಡಿಸಿಕೊಳ್ಳಬಾರದು.

ನಾಯಿ ಬೊಗಳಿದರೆ ದೇವಲೋಕ ಹಾಳೇ?: ಮಾಡಿದ ಕೆಲಸವನ್ನು ಉತ್ತೇಜಿಸಿದರೆ, ಇನ್ನೂ ಉತ್ತಮ ಕೆಲಸವಾಗುವುದು ಸಾಧ್ಯ. ಮಾಡಿದ ಕೆಲಸವನ್ನು ಕಡೆಗಣಿಸಿ, ಹಾಸ್ಯ ಮಾಡಿದರೆ ಉತ್ಸಾಹ ಬತ್ತಿ ಹೋಗುತ್ತದೆ. ಅನವಶ್ಯಕವಾದ ಟೀಕೆಗಳಿಗೆ ಕಿವಿಗೊಡದೆ ಸಾಧನೆಯಲ್ಲಿ ಮಗ್ನರಾಗಿ ಎನ್ನುತ್ತದೆ ಈ ಗಾದೆ.

ಅಟ್ಟಕ್ಕೆ ಹಾರದವನು ಬೆಟ್ಟ ಹತ್ತಿಯಾನೇ?
ಅಕ್ಕಿಯಲ್ಲಿನ ಕಲ್ಲನ್ನು ಆರಿಸುವುದು ಕಷ್ಟದ ಕೆಲಸವೂ ಅಲ್ಲ, ಕುಶಲ ಕಲೆಯೂ ಅಲ್ಲ. ಇಂಥ ಸಣ್ಣ ಕೆಲಸಕ್ಕೆ ಬಗ್ಗದವನು, ಶ್ರಮ ವಹಿಸಿ ತುರ್ತು ಕೆಲಸವನ್ನು ಮಾಡಿಯಾನೇ? ದಾರಿಯಲ್ಲಿ ಅಪಘಾತವಾದಾಗ ಅಥವಾ ಗೃಹಕೃತ್ಯಕ್ಕೆ ಸಂಬಂಧಿಸಿದ ತುರ್ತು ಕೆಲಸಕ್ಕೆ ಮುಂದೆ ಬಿದ್ದು ಮಾಡಬೇಕಾದ್ದು ನಾಗರಿಕರ ಕರ್ತವ್ಯ.

ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್‌

Advertisement

Udayavani is now on Telegram. Click here to join our channel and stay updated with the latest news.

Next