ಪ್ರಪಂಚದಾದ್ಯಂತ ಟ್ಯಾಬ್ಲೆಟ್ಗಳ ಬಳಕೆ ಹೆಚ್ಚಾಗುತ್ತಿದೆ (ಔಷಧಿ ಗುಳಿಗೆಗಳು ಮಾತ್ರವಲ್ಲ! ಮೊಬೈಲ್ ಗಿಂತ ದೊಡ್ಡದಾದ ಪರದೆಯ ಗ್ಯಾಜೆಟ್, ಟ್ಯಾಬ್ಲೆಟ್ಗಳದೂ ಸಹ!) ಹೀಗಾಗಿ ಮೊಬೈಲ್ ಫೊನ್ ತಯಾರಕ ಕಂಪೆನಿಗಳು ಸಹ ಟ್ಯಾಬ್ಲೆಟ್ ಗಳನ್ನು ಹೊರಬಿಡುತ್ತಲೇ ಇವೆ. ಒನ್ ಪ್ಲಸ್ ಕಂಪೆನಿ ಕಳೆದ ವರ್ಷ ತನ್ನ ಮೊದಲ ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಒನ್ ಪ್ಲಸ್ ಪ್ಯಾಡ್ ಬಿಡುಗಡೆಗೊಳಿಸಿತ್ತು. ಅದಾದ ಬಳಿಕ ಎಕಾನಮಿ ರೇಂಜ್ನಲ್ಲಿ ಒನ್ಪ್ಲಸ್ ಪ್ಯಾಡ್ ಗೋ ಹೊರತಂದಿತ್ತು. ಈಗ ಮತ್ತೆ ಪ್ರೀಮಿಯಂ ರೇಂಜ್ನಲ್ಲಿ ಒನ್ ಪ್ಲಸ್ ಪ್ಯಾಡ್ 2 ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 8+128 ಜಿಬಿ ಮಾದರಿಗೆ 40 ಸಾವಿರ ರೂ. ಹಾಗೂ 12+256 ಜಿಬಿ ಮಾದರಿಗೆ 43000 ರೂ. ಇದೆ.
ಈ ಟ್ಯಾಬ್ ಕಳೆದ ವರ್ಷದ ಮಾಡೆಲ್ಗಿಂತ ಪರದೆಯಲ್ಲಿ ದೊಡ್ಡದಿದೆ. 12.1 ಇಂಚು ಪರದೆ ಹೊಂದಿದ್ದು, ಹಿಂದಿನ ಮಾದರಿ 11.6 ಇಂಚು ಪರದೆ ಹೊಂದಿತ್ತು. ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್, 8 ಸ್ಟೀರಿಯೋ ಸ್ಪೀಕರ್ಸ್ ಇದೆ. ಒನ್ ಪ್ಲಸ್ ಸ್ಟೈಲೋ ಗೆ 5,499 ರೂ ಹಾಗೂ ಸ್ಮಾರ್ಟ್ ಕೀ ಬೋರ್ಡ್ ಗೆ 8,499 ರೂ. ಇದೆ. ಅಗತ್ಯವಿದೆ ಎನ್ನುವವರು ಪ್ರತ್ಯೇಕವಾಗಿ ಖರೀದಿಸಬಹುದು.
ವಿನ್ಯಾಸ: ಮೊದಲೇ ತಿಳಿಸಿದಂತೆ ಇದು ಪ್ರೀಮಿಯಂ ವಲಯದ ಟ್ಯಾಬ್. ಆರಂಭಿಕ ಮಾದರಿಯ ಟ್ಯಾಬ್ ಗಳಿಗಿಂತ ಭಿನ್ನವಾದ ಅತ್ಯುನ್ನತ ಪ್ರೊಸೆಸರ್, ಇದು ಅತ್ಯಂತ ಹೆಚ್ಚು ವೇಗ ನೀಡುತ್ತದೆ. ಇದು ಅಲ್ಯುಮಿನಿಯಂ ಲೋಹದ ದೇಹ ಹೊಂದಿದೆ. ತುಂಬ ತೆಳುವಾಗಿದೆ. ಹೀಗಾಗಿ ಕೈಯಲ್ಲಿ ಹಿಡಿದು ಬಳಸಲು ಸುಲಭವಾಗಿದೆ. 584 ಗ್ರಾಂ ತೂಕ ಹೊಂದಿದೆ. ಹಿಂಬದಿಯ ಮಧ್ಯದಲ್ಲಿ 13 ಮೆಗಾಪಿಕ್ಸಲ್ ಕ್ಯಾಮರಾ ಇದೆ. 12.1 ಇಂಚಿನ ಪರದೆ ಎಂದರೆ ಲ್ಯಾಪ್ ಟಾಪ್ ಬಳಕೆದಾರರಿಗೆ ಒಂದು ಕಲ್ಪನೆ ಬಂದಿರುತ್ತದೆ. ಸಾಮಾನ್ಯವಾಗಿ ಲ್ಯಾಪ್ ಟಾಪ್ ಗಳು 13 ಇಂಚಿನ ಪರದೆಯಿಂದ ಆರಂಭವಾಗುತ್ತವೆ. 14 ಇಂಚಿನ ಲ್ಯಾಪ್ ಟಾಪ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. 12.1 ಇಂಚಿನ ಪರದೆಯನ್ನು ಟ್ಯಾಬ್ ಹೊಂದಿದೆ ಎಂದರೆ ಹೆಚ್ಚೂ ಕಡಿಮೆ ಒಂದು ಲ್ಯಾಪ್ ಟಾಪ್ ಪರದೆಯ ಹತ್ತಿರ ಹತ್ತಿರ ಇದರ ಡಿಸ್ ಪ್ಲೆ ಇದೆ! ಇದರ ಜೊತೆ ಸ್ಮಾರ್ಟ್ ಕೀ ಬೋರ್ಡ್ ಅನ್ನು ಆಯಸ್ಕಾಂತೀಯ ಪಿನ್ ಬಳಿ ಜೋಡಿಸಿದಾಗ ಕನೆಕ್ಟ್ ಆಗುತ್ತದೆ. ಈ ಕೀ ಬೋರ್ಡ್ ಸಹ ಅಗಲವಾದ ಕೀಗಳನ್ನು ಹೊಂದಿದ್ದು ಲ್ಯಾಪ್ ಟಾಪ್ ಅನುಭವ ನೀಡುತ್ತದೆ. ಈ ಕೀಬೋರ್ಡ್ ಅನ್ನು ಬೇರ್ಪಡಿಸಿ, ಬ್ಲೂಟೂತ್ ಕೀ ಬೋರ್ಡ್ ಆಗಿಯೂ ಬಳಸಬಹುದು.
ಪರದೆ ಮತ್ತು ಕ್ಯಾಮರಾ: 12.1 ಇಂಚಿನ 3ಕೆ ಡಿಸ್ ಪ್ಲೇ ಹೊಂದಿದೆ. 7.5 ಅಸ್ಪೆಕ್ಟ್ ರೇಶಿಯೋ ಹೊಂದಿದ್ದು, 900 ನಿಟ್ಸ್ ಗಳ ಪ್ರಕಾಶಮಾನತೆ ಇದ್ದು 303 ಪಿಪಿಐ, 3000*2120 ಪಿಕ್ಸಲ್ ಹೊಂದಿದೆ. ಈ ಪರದೆ ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಇದರಿಂದ ಪರದೆಯಲ್ಲಿ ಮೂಡಿಬರುವ ವಿಡಿಯೋಗಳ ಗುಣಮಟ್ಟ ಬಹಳ ಚೆನ್ನಾಗಿದೆ. ಇದು 144 ಹರ್ಟ್ಜ್ ವರೆಗಿನ ರಿಫ್ರೆಶ್ ರೇಟ್ ಹೊಂದಿದೆ. ಇದರಿಂದ ಪರದೆ ಬಹಳ ಮೃದುವಾಗಿ ಚಲಿಸುತ್ತದೆ.
ಇದರ ಪರದೆಯ ಗುಣಮಟ್ಟದಿಂದಾಗಿ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್ ಅನುಭವ ಉತ್ತಮವಾಗಿದೆ. ಆಟೋ ಬ್ರೈಟ್ನೆಸ್ ನಿಂದಾಗಿ ಹೊರಗಿನ ಬೆಳಕಿಗನುಗುಣವಾಗಿ ಹೊಂದಿಕೊಳ್ಳುತ್ತದೆ. ಇದರಲ್ಲಿ ಎರಡೂ ಬದಿ ತಲಾ ಮೂರರಂತೆ ಒಟ್ಟು ಆರು ಸ್ಟೀರಿಯೋ ಸ್ಪೀಕರ್ ಗಳಿವೆ. ಹೀಗಾಗಿ ಸಿನಿಮಾ ನೋಡುವಾಗ ಸ್ಪೀಕರ್ ಗಳಿಂದ ಬರುವ ಶಬ್ದದ ಅನುಭವ ಚೆನ್ನಾಗಿದೆ.
ಕ್ಯಾಮರಾ ವಿಷಯಕ್ಕೆ ಬಂದರೆ ಇದು 8 ಮೆ.ಪಿ. ಮುಂದಿನ ಕ್ಯಾಮರಾ, 13 ಮೆ.ಪಿ. ಹಿಂಬದಿ ಕ್ಯಾಮರಾ ಹೊಂದಿದೆ. ಟ್ಯಾಬ್ಗಳಲ್ಲಿ ಬೇಸಿಕ್ ಕ್ಯಾಮರಾಗಳನ್ನಷ್ಟೇ ನೀಡಲಾಗಿರುತ್ತದೆ. ವಿಡಿಯೋ ಕಾಲ್ಗೆ ಇದು ಸಾಕು. ಹಿಂಬದಿ ಕ್ಯಾಮರಾ ಸಾಧಾರಣ ಫೋಟೋಗ್ರಫಿಗೆ ಸೀಮಿತ. ಯಾಕೆಂದರೆ ಟ್ಯಾಬ್ ಗಳನ್ನು ಫೋಟೋಗ್ರಫಿ ಉದ್ದೇಶಕ್ಕೆ ಬಳಸುವುದಿಲ್ಲ. ಹಾಗಾಗಿ ಮೊಬೈಲ್ ಫೋನ್ ಗಳಿಗಿಂತ ಕಡಿಮೆ ಫೀಚರ್ನ ಕ್ಯಾಮರಾಗಳನ್ನು ಟ್ಯಾಬ್ ಹೊಂದಿರುತ್ತವೆ.
ಕಾರ್ಯಾಚರಣೆ: ಇದರಲ್ಲಿ ಇರುವುದು ಹೈ ಎಂಡ್ ಮೊಬೈಲ್ ಫೋನ್ ಗಳಿಗೆ ಬಳಸುವ ಲೇಟೆಸ್ಟ್ ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್. ಈಗಿನ ಅತ್ಯುನ್ನತ ಮಾದರಿಯ ಫ್ಲಾಗ್ಶಿಪ್ ಆಂಡ್ರಾಯ್ಡ್ ಫೋನ್ ಗಳಲ್ಲಿರುವುದು ಇದೇ ಪ್ರೊಸೆಸರ್. ಒಂದು ಲಕ್ಷ ರೂ. ಗೂ ಹೆಚ್ಚು ದರದ ಸ್ಯಾಮ್ ಸಂಗ್ ಎಸ್ 24 ಅಲ್ಟ್ರಾ, ಸ್ಯಾಮ್ ಸಂಗ್ ಗೆಲಾಕ್ಸಿ ಜಡ್ ಫೋಲ್ಡ್ 6, ಒನ್ ಪ್ಲಸ್ 12, ಶಿಯೋಮಿ 14 ಇತ್ಯಾದಿ ಬೆರಳೆಣಿಕೆಯಷ್ಟು ಫೋನ್ ಗಳಲ್ಲಿ ಮಾತ್ರ ಪ್ರೊಸೆಸರ್ ಇದೆ.
ಹೀಗಾಗಿ ಪ್ರೊಸೆಸರ್ನ ವೇಗದ ಕಾರ್ಯಾಚರಣೆಯ ಬಗ್ಗೆ ಮಾತನಾಡುವಂತಿಲ್ಲ. ದೈನಂದಿನ ಕಚೇರಿ ಕೆಲಸಗಳಂತಹ ಬಳಕೆಯಿರಲಿ, ಅಥವಾ ಸಿನಿಮಾ, ವಿಡಿಯೋ, ಯೂಟ್ಯೂಬ್, ಹೆವಿ ಗೇಮ್ ಗಳಿರಲಿ ಇದರ ಕಾರ್ಯಾಚರಣೆ ಸುರಳೀತವಾಗಿದೆ. ಆಪ್ ಗಳನ್ನು ಬಹಳ ವೇಗವಾಗಿ ತೆರೆಯುತ್ತದೆ. ಸೋಶಿಯಲ್ ಮೀಡಿಯಾ ಬಳಕೆಗಂತೂ ಹೇಳಿ ಮಾಡಿಸಿದಂತಿದೆ.
ಯುಐ: ಇದು ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್ 14 ಯೂಸರ್ ಇಂಟರ್ ಫೇಸ್ ಹೊಂದಿದೆ. ಯಾವುದೇ ಗೊಂದಲ ಗಜಿಬಿಜಿ ಇಲ್ಲದೇ ನೀಟಾದ ಇಂಟರ್ ಫೇಸ್ ಇದಾಗಿದೆ. ಈ ಓಎಸ್ ಎಐ ಪೀಚರ್ ಒಳಗೊಂಡಿದೆ. ಎಐ ಸ್ಪೀಕರ್ ಮೂಲಕ ಬೇರೆ ಕೆಲಸಗಳನ್ನು ಮಾಡುತ್ತಾ ಬರಹಗಳನ್ನು ಕೇಳಬಹುದು. ಎಐ ಸಮ್ಮರಿ ಮೂಲಕ ದೊಡ್ಡ ಬರಹಗಳ ಮುಖ್ಯಾಂಶಗಳ ಕೀ ನೋಟ್ ಗಳನ್ನಾಗಿ ಮಾಡಬಹುದು. ಆಡಿಯೋ ಮೆಸೇಜ್ ಗಳನ್ನು ಸಹ ಕೀನೋಟ್ ಗಳನ್ನಾಗಿ ಪರಿವರ್ತಿಸುತ್ತದೆ. ವಿಡಿಯೋಗಳನ್ನು ಎಡಿಟ್ ಮಾಡಲು ಸಹ ಎಐ ಸಹಾಯ ಮಾಡುತ್ತದೆ.
ಬ್ಯಾಟರಿ: ಇದರಲ್ಲಿ ದೊಡ್ಡದಾದ 9,510 ಎಂಎಎಚ್ ಬ್ಯಾಟರಿ ಇದೆ. ಹೀಗಾಗಿ ಟ್ಯಾಬ್ ಅನ್ನು ದಿನಪೂರ್ತಿ ಆರಾಮಾಗಿ ಬಳಸಬಹುದು. 67 ವ್ಯಾಟ್ಸ್ ವೇಗದ ಚಾರ್ಜಿಂಗ್ ಇದ್ದು, ಸರಿಸುಮಾರು 60-70 ನಿಮಿಷದಲ್ಲಿ ಶೂನ್ಯದಿಂದ 100ರವರೆಗೆ ಚಾರ್ಜ್ ಆಗುತ್ತದೆ.
ಸಾರಾಂಶ: 40 ಸಾವಿರ ದರ ಪಟ್ಟಿಯಲ್ಲಿ ಒನ್ ಪ್ಲಸ್ ಪ್ಯಾಡ್ 2 ಒಂದು ಉತ್ತಮ ಟ್ಯಾಬ್ ಎಂದು ಮುಲಾಜಿಲ್ಲದೇ ಹೇಳಬಹುದು. ಲೋಹದ ದೇಹ, ಸ್ನಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್, 12.1 ಇಂಚಿನ ದೊಡ್ಡ ಡಾಲ್ಬಿ ವಿಷನ್ ಪರದೆ ಇವೆಲ್ಲದರಿಂದ ಸಮೃದ್ಧವಾದ ಈ ಟ್ಯಾಬ್ ವಿದ್ಯಾರ್ಥಿಗಳಿಗೆ, ಮನರಂಜನೆ, ಗೇಮಿಂಗ್, ದಿನ ಬಳಕೆಗೆ ಉತ್ತಮ ಆಯ್ಕೆ ಎನ್ನಬಹುದು. ಅಮೆಜಾನ್ ನಲ್ಲಿ ಸದ್ಯದಲ್ಲೇ ಸ್ವಾತಂತ್ರ್ಯೋತ್ಸವ ಆಫರ್ಗಳಿವೆ ಇಂತಹ ಸಂದರ್ಭದಲ್ಲಿ ಕೊಂಡಾಗ ಇನ್ನೂ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ