Advertisement

ಸಾಂಸ್ಕೃತಿಕ ಉತ್ಸವ : ಗದ್ದಿಕ-2018ಕ್ಕೆ ನಾಡು ಸಜ್ಜು

11:37 AM Dec 21, 2018 | |

ಕಾಸರಗೋಡು: ಜಿಲ್ಲೆಗೆ ಹೊಸ ಅನುಭವ ಹಂಚಲಿರುವ 9 ದಿನಗಳ ಸಾಂಸ್ಕೃತಿಕ ಉತ್ಸವ ಗದ್ದಿಕ-2018 ಕ್ಕಾಗಿ ನಾಡು ಸಿದ್ಧವಾಗಿದೆ. ಮಲಬಾರು ಜಿಲ್ಲೆಗಳ ಉತ್ತರ ಭಾಗದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಪರಿಶಿಷ್ಟ ಜಾತಿ-ಪಂಗಡದವರ ಪರಂಪರಾಗತ ವಿಚಾರಗಳಿಗೆ ಬೆಳಕು ಚೆಲ್ಲುವ ಈ ಉತ್ಸವದ ಸಿದ್ಧತೆ ಅಂತಿಮ ಹಂತದಲ್ಲಿದೆ.

Advertisement

ಪರಿಶಿಷ್ಟ ಜಾತಿ – ಪಂಗಡದವರನ್ನು ಪ್ರಧಾನವಾಹಿನಿಗೆ ಕರೆತರುವ, ಅವರ ಮೂಲ ಸಂಸ್ಕೃತಿಯ ಒಳಿತುಗಳನ್ನು ಹೊಸ ಜನಾಂಗಕ್ಕೆ ಪರಿಚಯಿಸುವ ಇತ್ಯಾದಿ ಮಹತ್ವದ ಮೌಲ್ಯಗಳೊಂದಿಗೆ ಈ ಸಾಂಸ್ಕೃತಿಕ ನವಾಹ ಸಜ್ಜುಗೊಳ್ಳುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿ ಇಲಾಖೆ, ಕಿರ್ತಾಡ್‌ ಇಲಾಖೆಗಳ ಜಂಟಿ ವತಿಯಿಂದ ಜಾನಪದ ಕಲೆಗಳ ಮೇಳ ಮತ್ತು ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ ಈ ಸಂದರ್ಭದಲ್ಲಿ ನಡೆಯಲಿದೆ. ಡಿ.22ರಿಂದ 30 ರ ವರೆಗೆ ಜಿಲ್ಲೆಯ ಕಾಲಿಕಡವಿನ ಪಿಲಿಕೋಡ್‌ ಗ್ರಾಮ ಪಂಚಾಯತ್‌ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ವಿಶಾಲ ಮೈದಾನ : 6 ಎಕ್ರೆ ವಿಸ್ತೀರ್ಣ ಹೊಂದಿರುವ ಕಾಲಿಕಡವು ಮೈದಾನ ಅಖೀಲ ಭಾರತ ಮಟ್ಟದ ಪ್ರದರ್ಶನಗಳು, ಕ್ರೀಡಾ ಪಂದ್ಯಾಟಗಳು ಮತ್ತು ಸರ್ಕಸ್‌ ಇತ್ಯಾದಿ ವಿಚಾರಗಳಿಗೆ ವೇದಿಕೆಯಾಗಿ ಈಗಾಗಲೇ ಪ್ರಸಿದ್ಧವಾಗಿದೆ. ಕಾಲಿಕಡವು ಪೇಟೆಯ ಹೃದಯ ಭಾಗದಲ್ಲಿ ಸುತ್ತು ಆವರಣ ಗೋಡೆ ಸಹಿತ ಸುರಕ್ಷಿತವಾದ ಆವರಣದೊಳಗಣ ವಿಶಾಲ ಮೈದಾನದಲ್ಲಿ ಈ ಉತ್ಸವ ಜರಗುತ್ತಿದೆ. ನೂರಾರು ಸ್ಟಾಲ್‌ಗ‌ಳ ಮೂಲಕ ಕೇರಳ ರಾಜ್ಯದ ಪರಿಶಿಷ್ಟ ಜಾತಿ, ಪಂಗಡದ ಮಂದಿಯ ಪರಂಪರಾಗತ ವಿಚಾರಗಳ ಉತ್ಪನ್ನಗಳ ಪ್ರದರ್ಶನ, ಮಾರಾಟ ನಡೆಯುತ್ತಿದ್ದರೆ, ಆಸಕ್ತರಿಗೆ ಪರಿಣತರು ಪ್ರಾತ್ಯಕ್ಷಿಕೆ ಒದಗಿಸುವ ಸೌಲಭ್ಯವನ್ನೂ ಏರ್ಪಡಿಸಲಾಗಿದೆ.

ವಸ್ತು ಸಂಗ್ರಹಾಲಯ, ಆಹಾರ ಮೇಳ : ವಸ್ತು ಸಂಗ್ರಹಾಲಯ, ಆಹಾರ ಮೇಳ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಪರಿಶಿಷ್ಟ ಜನಾಂಗದವರ ಹಳೆಯ ಜೀವನ ಕ್ರಮದ ಆಯುಧಗಳು, ನಿತ್ಯೋಪಯೋಗಿ ಪರಿಕರಗಳು ಇತ್ಯಾದಿಗಳು ಸಂಗ್ರಹಾಲಯದಲ್ಲಿ ಇರುವುದು. ಆಹಾರ ಮೇಳದಲ್ಲಿ ಆಹಾರ ಸಿದ್ಧತೆಗೆ ಸೂಕ್ತ ಪಾಕಶಾಲೆ, ಬಡಿಸುವುದಕ್ಕೆ ಸೂಕ್ತ ವ್ಯವಸ್ಥೆ, ಸುಮಾರು 50 ಮಂದಿ ಏಕಕಾಲಕ್ಕೆ ಕುಳಿತು ವಿಶಿಷ್ಟ ಆಹಾರಗಳನ್ನು ಸೇವಿಸುವಂಥಾ ಚಪ್ಪರ ಇಲ್ಲಿ ರಚಿಸಲಾಗಿದೆ. ಜಿಲ್ಲೆಯ ಮೂಲ ನಿವಾಸಿಗಳಾದ ಮುಳ್ಳವರ್‌ ಜನಾಂಗದವರ ಅಕ್ಕಿಯಿಂದ ತಯಾರಿಸುವ ವಿಶೇಷ ಕಲ್ಲುಪುಟ್ಟು, ಕೋಳಿ ಮಾಂಸದ ವಿಶಿಷ್ಟ ಪರಂಪರಾಗತ ಖಾದ್ಯಗಳು ಇತ್ಯಾದಿ ಇಲ್ಲಿ ಗಮನಾರ್ಹವಾಗಿದೆ.

ವಿವಿಧ ಜನಾಂಗದವರ ವಿಚಾರಗಳು : ವಿಶೇಷವಾಗಿ ಮುಳ್ಳವರು, ಪಣಿಯರು, ಊರಾಳಿ, ಕಾಟು ನಾಯ್ಕರು, ಕೊರಗ, ಮಾವಿಲ ಸಹಿತ ಜನಾಂಗದವರ ಉತ್ಪನ್ನಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಗೊಳ್ಳಲಿದೆ. ವಯನಾಡು ಗುಡಿಸಲಿನಲ್ಲಿ ಕೈಯಿಂದ ರಚಿಸಿದ ಚಿತ್ರಗಳು, ಗದ್ದೆಗಳ ನಡುವೆ ಇರುವಂಥಾ ಬಿದಿರ ಮನೆ ಇತ್ಯಾದಿಗಳು ಇಲ್ಲಿ ಪ್ರಮುಖವಾಗಿದೆ. ಉಳಿದಂತೆ ಬಿದಿರಿನ ಉತ್ಪನ್ನಗಳು ಇತ್ಯಾದಿಗಳು ಪ್ರದರ್ಶನ ಮಳಿಗೆಗಳು ಇರುವುವು.
ಪ್ರಾಕೃತಿಕ ಹಬೆ ಸ್ನಾನ : ಪ್ರಮುಖವಾಗಿ ಆವಿಕ್ಕುಳಿ(ಹಬೆ ಸ್ನಾನ) ಎಂಬ ವಿಶಿಷ್ಟ ರೀತಿ ಇಲ್ಲಿ ಗಮನ ಸೆಳೆಯಲಿದೆ. ಇಂದಿನ ಸ್ಟೀಂ ಬಾತ್‌ ಎಂಬ ಸಂಕಲ್ಪವೇ ಇದಾದರೂ ಪೂರ್ಣರೂಪದಲ್ಲಿ ಪ್ರಕೃತಿದತ್ತ ವಿಚಾರಗಳೇ ಇಲ್ಲಿ ಬಳಕೆಯಾಗುತ್ತಿದೆ. ಮುಂಗಡ ಬುಕ್ಕಿಂಗ್‌ ಮೂಲಕ ಇಲ್ಲಿ ಹಬೆ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಿತದರದಲ್ಲಿ ತಲಾ ಒಬ್ಬ ಪುರುಷ, ಒಬ್ಬ ಮಹಿಳೆಗೆ ಪ್ರತ್ಯೇಕ ಸ್ನಾನ ಗೃಹಗಳನ್ನು ಸಿದ್ಧಪಡಿಸಲಾಗಿದೆ.

Advertisement

ಪ್ರತಿದಿನ ಸಮಾರಂಭಗಳು : 9 ದಿನಗಳ ಕಾಲ ಮೊದಲ ಮತ್ತು ಕೊನೆಯ ದಿನದ ಸಮಾರಂಭಗಳಲ್ಲದೆ ಪ್ರತಿದಿನ ಸಂಜೆ 5.30 ಕ್ಕೆ ಸಾಂಸ್ಕೃತಿಕ ಸಂಜೆ, ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಪ್ರಮುಖ ವ್ಯಕ್ತಿಗಳು ಭಾಗವ ಹಿಸುವರು. ತದನಂತರ ಪರಿಣತ ತಂಡಗಳಿಂದ ಜಾನಪದ ವಿಭಾಗದ ವಿವಿಧ ಕಲಾಪ್ರದರ್ಶನಗಳು ನಡೆಯಲಿದೆ.
ಒಟ್ಟಿನಲ್ಲಿ 9 ದಿನಗಳು ನಡೆಯುವ ಈ ಉತ್ಸವ ಜಿಲ್ಲೆಯ ಜನತೆಗೆ ಹೊಸ ಅನುಭವ ಕಟ್ಟಿಕೊಡಲಿದೆ  ಜಾನಪದ ಸತ್ವದ ಪ್ರದರ್ಶನಕ್ಕೆ ಗಡಿನಾಡು ಶ್ರೀಮಂತ ವೇದಿಕೆಯಾಗಲಿದೆ.

ಸಿದ್ಧತೆ ಪೂರ್ಣ
ಡಿ.22 ರಿಂದ 30ರವರೆಗೆ ಕಾಲಿಕಡವು ಪಿಲಿಕೋಡ್‌ ಗ್ರಾಮ ಪಂಚಾಯತ್‌ ಮೈದಾನದಲ್ಲಿ ನಡೆಯುವ ಪರಿಶಿಷ್ಟ ಜಾತಿ-ಪಂಗಡದವರ ಜಾನಪದ ಕಲಾಮೇಳ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಗದ್ದಿಕ – 2018 ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಡಿ.22 ರಂದು ಮಧ್ಯಾಹ್ನ 3 ಗಂಟೆಗೆ ಕಾಲಿಕಡವು ಪೇಟೆಯಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next